ದಾವಣಗೆರೆ : ಹಬ್ಬಗಳನ್ನು ಆಚರಣೆ ಮಾಡೋಣ. ಆದರೆ ಅವುಗಳನ್ನು ವೈಚಾರಿಕವಾಗಿ, ವೈಜ್ಞಾನಿಕವಾಗಿ, ಅರ್ಥಪೂರ್ಣವಾಗಿ ಆಚರಣೆ ಮಾಡೋಣ ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ದೊಡ್ಡಪೇಟೆಯ ವಿರಕ್ತಮಠದಲ್ಲಿ ಸೋಮವಾರ ಶಿವಯೋಗಾಶ್ರಮ, ವಿರಕ್ತಮಠದ ಸಹಯೋಗದಲ್ಲಿ ಹಾಲು ಕುಡಿಸುವ ಹಬ್ಬ-ಬಸವ ಪಂಚಮಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಶ್ರೀಗಳು ಮಾತನಾಡಿದರು.
ನಾಗರಪಂಚಮಿ ಹಬ್ಬದ ಹೆಸರಿನಲ್ಲಿ ಇಡೀ ದೇಶದಾದ್ಯಂತ ನಮ್ಮ ಪಾಲು, ಅಜ್ಜ-ಅಜ್ಜಿ, ಅಪ್ಪ-ಅಮ್ಮ ಪಾಲು, ಹಿರಿಯ ಪಾಲು ಎಂದು ಕಲ್ಲ ನಾಗರಕ್ಕೆ, ಹುತ್ತಕ್ಕೆ ಹಾಲನ್ನು ಎರೆದು ಕೊನೆಗೆ ಹಾಲನ್ನು ಮಣ್ಣು ಪಾಲು ಮಾಡುತ್ತಾರೆ. ದೇವರ, ಧರ್ಮದ ಹೆಸರಿನಲ್ಲಿ ನಾವು ಸ್ವೀಕಾರ ಮಾಡುವಂತಹ ಹಾಲು, ತುಪ್ಪ, ಮೊಸರು, ಎಳೆನೀರು, ಜೇನುತುಪ್ಪವನ್ನು ವ್ಯರ್ಥ ಮಾಡಬಾರದು. ಹಾಲನ್ನು ಎರೆಯುವುದರಿಂದ ದೇವರು ಸಂತೃಪ್ತರಾಗುವುದಿಲ್ಲ. ಅದೇ ಹಾಲನ್ನು ವ್ಯರ್ಥ ಮಾಡದೇ ಮಕ್ಕಳಿಗೆ, ರೋಗಿಗಳಿಗೆ, ಅನಾಥರಿಗೆ, ವಯೋವೃದ್ಧರಿಗೆ, ಬಡವರಿಗೆ ಅವರಿಗೆ ಹಾಲನ್ನು ಕೊಟ್ಟಿದ್ದೇ ಆದರೆ ದೇವರಿಗೆ ಸಂತೃಪ್ತಿಯಾಗುತ್ತದೆ ಎಂದರು.
ಬಸವಣ್ಣನವರ ವಚನದಂತೆ ಕಲ್ಲ ನಾಗರ ಕಂಡರೆ, ಹಾಲನೆರೆಯಂಬರು, ದಿಟದ ನಾಗರ ಕಂಡರೆ ಕೊಲ್ಲು, ಕೊಲ್ಲೆಂಬರು. ಅದೇ ಹಸಿವಾದವರು ಬಂದರೆ ಮುಂದಕ್ಕೆ ಹೋಗು ಎನ್ನುತ್ತಾರೆ. ಹಬ್ಬಗಳ ಆಚರಣೆ ಮಾಡುವುದು ತಪ್ಪಲ್ಲ, ಯಾರು ಹಸಿದಂತಹವರು ಇರುತ್ತಾರೆ ಅವರಿಗೆ ಅನ್ನವನ್ನು ಕೊಡಿ. ಉಣಲಾರದವರಿಗೆ ನೈವೇದ್ಯ ಮಾಡುವ ಬದಲು ಉಣ್ಣುವವರಿಗೆ ಕೊಡಿ ಎಂದು ಧರ್ಮದ ಸಂದೇಶವನ್ನು ಬಸವಣ್ಣನವರು ಕೊಟ್ಟಿದ್ದಾರೆ. ಹಾಲು ಪೌಷ್ಟಿಕಾಂಶಯುಕ್ತ ಆಹಾರ. ಮಕ್ಕಳು ಹಾಲನ್ನು ಕುಡಿಯುವುದರಿಂದ ದೈಹಿಕವಾಗಿ, ಸದೃಢರಾಗಿ ಬೆಳೆಯುತ್ತಾರೆ. ಮೂಳೆಗಳು ಗಟ್ಟಿಯಾಗುತ್ತವೆ. ದೇಹಕ್ಕೆ ಶಕ್ತಿ ಬರುತ್ತದೆ. ನಿತ್ಯ ಹಾಲನ್ನು ಸೇವಿಸುವುದರಿಂದ ಆರೋಗ್ಯವಂತರಾಗಿರುತ್ತೀರಿ. ನಮ್ಮ ದೇಶದಲ್ಲಿ ಬಹಳಷ್ಟು ಮೂಢನಂಬಿಕೆಗಳಿವೆ ಅವುಗಳೇ ನಮ್ಮ ಪ್ರಗತಿಗೆ ಶತ್ರುಗಳಾಗಿವೆ. ಮೌಡ್ಯಗಳನ್ನು ಬಿಟ್ಟು ಬಸವತತ್ವದ ಮೌಲ್ಯಗಳನ್ನು ಆಚರಣೆ ಮಾಡೋಣ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಗರ ಪಂಚಮಿ ಹಬ್ಬದ ಹೆಸರಿನಲ್ಲಿ ಅಮೃತಕ್ಕೆ ಸಮನಾದ ಹಾಲನ್ನು ಹುತ್ತಕ್ಕೆ ಹಾಕಿ ವ್ಯರ್ಥ ಮಾಡುವ ಬದಲು ನಿಮ್ಮಂತಹ ಮಕ್ಕಳಿಗೆ ಕೊಡುವಂತಹ ಕೆಲಸವನ್ನು ಬಸವ ಕೇಂದ್ರ ಇಂದು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಇದು ಕೇವಲ ನಮಗೆ ಬರೀ ಹಬ್ಬವಾಗಿ ಇರಬಾರದು. ನಮಗೆ ಸಂಸ್ಕೃತಿ, ನಾಗರಿಕತೆ ಹೇಗೆ ಬಂದಿದೆ ಎಂಬುದನ್ನು ತಿಳಿದುಕೊಳ್ಳಬೇಕು. ನಾವು ಯಾವುದೇ ಒಂದು ವಿಷಯವನ್ನು ವೈಜ್ಞಾನಿಕವಾಗಿ ತಿಳಿದುಕೊಂಡಾಗ ಅದಕ್ಕೆ ಒಂದು ಅರ್ಥ ಇರುತ್ತದೆ. ಯಾವುದೇ ವಿಷಯವಾಗಿರಲಿ ಅರ್ಥ ಮಾಡಿಕೊಳ್ಳದೇ ಓದಬಾರದು. ಸುಮ್ಮನೆ ಅದನ್ನು ನಂಬಬಾರದು. ಗೊತ್ತಾಗದಿದ್ದರೆ ನಿಮ್ಮ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಬೇಕು. ಇದರಿಂದ ಬರೀ ಶಿಕ್ಷಣ ಅಷ್ಟೇ ಸಿಗಲ್ಲ. ಇದರೊಂದಿಗೆ ಜೀವನದಲ್ಲಿ ಹೇಗೆ ಇರಬೇಕು ಎಂಬ ಬಗ್ಗೆ ನೈತಿಕ ಶಿಕ್ಷಣ ಸಹಾ ಸಿಗುತ್ತದೆ ಎಂದರು.
ಇದು ನಿಮ್ಮ ಜೀವನ ಎಂಬ ಕಟ್ಟಡದ ಬುನಾದಿ(ಫೌಂಡೇಷನ್) ಇದ್ದಂತೆ. ನೀವು ಯಾವುದೇ ತರಗತಿಗಳಲ್ಲಿ ಇರಲಿ, ಅಲ್ಲಿ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇದರಿಂದ ಮುಂದಿನ ತರಗತಿಗಳಿಗೆ ಹೋದಾಗ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತವೆ. ಮಕ್ಕಳಲ್ಲಿ ದೊಡ್ಡ ದೊಡ್ಡ ಆಲೋಚನೆಗಳನ್ನು, ಮೌಲ್ಯಗಳನ್ನು ಬೆಳೆಸಿಕೊಳ್ಳುವಂತಹ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಆಶಿಸಿದರು.
ಪ್ರವಚನಕಾರರಾದ ಬಿ.ಎಂ.ಪಂಚಾಕ್ಷರಿ ಶಾಸ್ತ್ರೀಗಳು , ಶಿವಯೋಗಾಶ್ರಮ ಟ್ರಸ್ಟಿನ ಸಹ ಕಾರ್ಯದರ್ಶಿ ಎಸ್.ಓಂಕಾರಪ್ಪ, ಮುರುಘರಾಜೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಎಚ್.ವಿ.ಮಂಜುನಾಥ ಸ್ವಾಮಿ, ಲಂಬಿ ಮುರುಗೇಶ, ಹಾಸಬಾವಿ ಕರಿಬಸಪ್ಪ, ಕಣಕುಪ್ಪಿ ಮುರುಗೇಶ, ಟಿ.ಎಂ.ವೀರೇಂದ್ರ, ಚಿಗಟೇರಿ ಜಯದೇವ, ನಸೀರ್ ಅಹಮದ್, ಮಹಿಳಾ ಬಸವ ಕೇಂದ್ರದ ಮಹಾ ದೇವಮ್ಮ, ಕುಂಟೋಜಿ ಚನ್ನಪ್ಪ, ಕೆ.ಸಿ.ಉಮೇಶ, ಚನ್ನಬಸವ ಶೀಲವಂತ್, ಬೆಳ್ಳೂಡಿ ಮಂಜುನಾಥ ಶ್ರೀಮಠದ ಭಕ್ತರು, ಶಾಲಾ ಶಿಕ್ಷಕರು, ಮಕ್ಕಳು ಇದ್ದರು.