ದಾವಣಗೆರೆ: ‘ಕಿತ್ತೂರು ರಾಣಿ ಚೆನ್ನಮ್ಮ ಸಮಾಜಮುಖಿಗೋಸ್ಕಾರ ಹೋರಾಟ ಮಾಡಿ ದೇಶಭಕ್ತಿ, ಶೌರ್ಯ, ಸಾಹಸಕ್ಕೆ ಹೆಸರಾಗಿದ್ದರು. ಅವರ ಆದರ್ಶ ಮೌಲ್ಯಗಳನ್ನು ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶೋಷಣೆಗೊಳಗಾಗುವ ಮಹಿಳೆಯರ ಪರ ಧ್ವನಿ ಎತ್ತುವ ಕೆಲಸ ಮಾಡಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಕಿವಿಮಾತು ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರಪಾಲಿಕೆ ಆಶ್ರಯದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಮಹಿಳೆಯರ ರಕ್ಷಣೆಗಾಗಿ ಇಂದು ಸಾಕಷ್ಟು ಮಹಿಳಾ ಸಂಘಟನೆಗಳು ರಚನೆಗೊಂಡಿವೆ. ಆದರೆ ಕೆಲವು ಮಹಿಳಾ ಸಂಘಟನೆಗಳು ತನ್ನ ಸ್ವಹಿತಾಶಕ್ತಿಗೆ ಸಂಘಟನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ, ಇದು ಆಗಬಾರದು. ಶೋಷಣೆ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರ ಧ್ವನಿ ಎತ್ತುವ ಕೆಲಸ ಮಹಿಳಾ ಸಂಘಟನೆಗಳು ಮಾಡಬೇಕು. ಕಿತ್ತೂರು ರಾಣಿ ಚೆನ್ನಮ್ಮ ಹೋರಾಟದಿಂದಾಗಿಯೇ ಕಿತ್ತೂರು ಇತಿಹಾಸದಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ಸಲಹೆ ನೀಡಿದರು.
ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಅವರು, ಅನಾಥ ಮಕ್ಕಳಿಗಾಗಿ ಆಶ್ರಮ, ಅನಾಥ ವಯೋವೃದ್ದೆಯರಿಗಾಗಿ ವೃದ್ಧಾಶ್ರಮ, ಹಲವು ಸಂಘ-ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದರಿಂದ ಅವರು ಎಲ್ಲಾ ಮಹಿಳೆಯರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಇಂತಹ ಆದರ್ಶ ಗುಣಗಳು ಮತ್ತು ಮೌಲ್ಯಗಳನ್ನು ಪ್ರತಿಯೊಬ್ಬ ಮಹಿಳೆಯರು ರೂಡಿಸಿಕೊಳ್ಳಬೇಕೆಂದರು.
Read also : ದಾವಣಗೆರೆ: ಬಿ.ಇಡಿ ಕೋರ್ಸಿಗೆ ಅರ್ಜಿ ಆಹ್ವಾನ
ಕನ್ನಡಿಗರ ಮನೆ ಮಾತಾಗಿರುವ ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರö್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ದಿಟ್ಟ ಧೀರ ಮಹಿಳೆ. ದೇಶವನ್ನು ಎರಡು ನೂರು ವರ್ಷಗಳ ಕಾಲ ಆಳಿ ದೇಶದ ಸಂಪತ್ತನ್ನು ದೋಚಿ, ನಮ್ಮನ್ನು ಗುಲಾಮಗಿರಿಯಲ್ಲಿ ಇಟ್ಟಿದ್ದ ಬ್ರಿಟಿಷರನ್ನು ನಮ್ಮ ದೇಶ ಬಿಟ್ಟು ತೊಲಗಿಸಲು ಸ್ವಾತಂತ್ರö್ಯ ಕಹಳೆ ಊದಿದ ಮಹಾನ್ ವ್ಯಕ್ತಿಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅಗ್ರಗಣ್ಯರಾಗಿದ್ದಾರೆ. ಅವರ ಆದರ್ಶ, ತತ್ವ, ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಚೆನ್ನಮ್ಮ ಅವರು ತಾಯ್ನಾಡಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಬ್ರಿಟಿಷ್ ಸೈನ್ಯವನ್ನು ಬಗ್ಗು ಬಡಿದಿದ್ದರು. ಅವರ ದೇಶ ಭಕ್ತಿ ಹಾಗೂ ಸಾಹಸ ಗಾಥೆಗಳನ್ನು ಇಂದಿನ ಪೀಳಿಗೆಗೆ ಮತ್ತು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು. ಹೆಣ್ಣು ಮಕ್ಕಳಿಗೆ ಶೋಷಣೆ ನಡೆದಾಗ ಮಹಿಳೆಯರು ಮನೆಯಿಂದ ಹೊರಗೆ ಬಂದು ಹೋರಾಟದಲ್ಲಿ ದುಮಿಕಿದಾಗಲೇ ಶೋಷಣೆಗೆ ಒಳಗಾಗದ ಆ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಅಪರ ಜಿಲ್ಲಾಧಿಕಾರಿ ಶೀಲಾವಂತ್ ಶಿವಕುಮಾರ್, ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಅಶೋಕ್, ಜಿಲ್ಲಾಧ್ಯಕ್ಷ ಬಿ.ಸಿ.ಉಮಾಪತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
