ದಾವಣಗೆರೆ (Davanagere): ಸೂಳೆಕೆರೆ ನಮ್ಮ ಜಿಲ್ಲೆಯ ಐತಿಹಾಸಿಕ ಹೆಮ್ಮೆ. ಈ ಕೆರೆ ಕುರಿತು ಒಂದು ಸಂಶೋಧನಾತ್ಮಕ ಕೃತಿ ಬೇಕಿತ್ತು. ಇದುವರೆಗೂ ಇಂತಹ ಪ್ರಯತ್ನ ನಡೆದಿಲ್ಲ. ಇದೀಗ ದಾವಣಗೆರೆಯ ಪ್ರತಿಭಾನ್ವಿತ ಸಾಹಿತಿ, ಯುವ ಪೀಳಿಗೆಯ ಬರಹಗಾರ ಶಾಂತಾದೇವಿ ಕಾದಂಬರಿ ಪರಿಪೂರ್ಣವಾಗಿ ಕಟ್ಟಿಕೊಡಲಿದ್ದಾರೆ ಎಂದು ದಾವಣಗೆರೆ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಪಾಪುಗುರು ರಚನೆಯ ಉಷಾ ಪ್ರಕಾಶನದಿಂದ ಹೊರ ಬರುತ್ತಿರುವ ಸೂಳೆಕೆರೆಯ ಐತಿಹಾಸಿಕ ಕಾದಂಬರಿ ಶಾಂತಾದೇವಿ ಮುಖಪುಟವನ್ನು ಅನಾವರಣಗೊಳಿಸಿ ರವರು ಮಾತನಾಡಿದರು.
ಸೂಳೆಕೆರೆ ಈ ಭಾಗದ ರೈತರಿಗೆ ನೀರಿನ ಜೊತೆಗೆ ನಮ್ಮೆಲ್ಲರ ಸಾಂಸ್ಕೃತಿಕ ಪ್ರತಿಷ್ಠೆಯೂ ಹೌದು. ಇದು ಮಾನವ ನಿರ್ಮಿತ ಕೆರೆಯಾಗಿದ್ದು ಈ ಕೆರೆಯ ಬಗ್ಗೆ ಅನೇಕ ಐತಿಹ್ಯ ಕಥೆಗಳಿವೆ. ಆದರೆ, ಸೂಳೆಕೆರೆಯ ಐತಿಹಾಸಿಕ ಕಾದಂಬರಿ ಶಾಂತಾದೇವಿ ಇದು ಐತಿಹಾಸಿಕವಾಗಿ ಮಹತ್ವವನ್ನು ಪಡೆಯಲಿದೆ. ಜೊತೆಗೆ ಒಂದು ಆಕರ ಗ್ರಂಥವಾಗಿಯೂ ಉಳಿಯಲಿದೆ ಎಂದರು.
ಹಿರಿಯ ಸಾಹಿತಿಗಳು ಹಾಗೂ ಪತ್ರಕರ್ತರಾದ ಬಿ ಎನ್ ಮಲ್ಲೇಶ್ ಮಾತನಾಡಿ, ಸಾಹಿತ್ಯದ ಪ್ರಕಾರದಲ್ಲಿ ಕಾದಂಬರಿಯ ರಚನೆಯೂ ಸುದೀರ್ಘ ಕೆಲಸವಾಗಿದ್ದು ಅದರಲ್ಲೂ ಐತಿಹಾಸಿಕ ಕಾದಂಬರಿಗಳು ಆ ಪ್ರದೇಶದ ನೆಲ ಜಲ, ಆರ್ಥಿಕತೆ, ಆಮದು, ರಫ್ತು, ಉತ್ಪಾದನೆ ಈ ಎಲ್ಲಾ ಮೂಲಗಳನ್ನು ಕಟ್ಟಿಕೊಡುವ ಮೂಲಕ ಆ ಪ್ರದೇಶದ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಕೆಲಸಗಳನ್ನು ಮಾಡುತ್ತವೆ ಎಂದರು.
Read also : Davanagere | ಕನ್ನಡ ಜ್ಯೋತಿ ರಥ ಯಾತ್ರೆಗೆ ಕುರ್ಕಿ ಗ್ರಾಮದಲ್ಲಿ ಅದ್ದೂರಿ ಸ್ವಾಗತ
ಲೇಖಕ ಪಾಪುಗುರು ಮಾತನಾಡಿ, ಈ ಕಾದಂಬರಿಯ ನಿರ್ಮಾಣಕ್ಕೆ, ಸ್ಥಳಪುರಾಣ, ಜಾಗನ್ವೇಷಣೆ, ಜನಸಂಪರ್ಕ ಮಾಡಿ ಸುದೀರ್ಘ ಸಮಯ ವ್ಯಯ ಮಾಡಿ ಕೃತಿ ರಚನೆಗೆ ಕೈ ಹಾಕಿದ್ದೇನೆ. ಸಾಕಷ್ಟು ಅಧ್ಯಯನದ ನಂತರ ಹೊರ ಬರುತ್ತಿರುವ ಈ ಕಾದಂಬರಿ ಸೂಳೆಕೆರೆ ನಿರ್ಮಾಣದ ಬಗ್ಗೆ ಒಂದು ಸಂಪೂರ್ಣ ಚಿತ್ರಣವನ್ನು ಓದುಗರಿಗೆ ಕಟ್ಟಿಕೊಡಲಿದೆ ಎಂದರು.
ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ್ ಬಡದಾಳ, ಸಾಹಿತಿಗಳಾದ ಸಂತೆಬೆನ್ನೂರು ಫೈಜ್ನಟ್ರಾಜ್, ಸುಬ್ರಹ್ಮಣ್ಯ ಭದ್ರಾವತಿ, ಸನಾವುಲ್ಲಾ ನವಿಲೇಹಾಳ್, ಫಕೀರೇಶ ಆದಾಪುರ, ಹಾಗೂ ಮೊಹಮ್ಮದ್ ರಫಿ ಹಾಜರಿದ್ದರು.