ದಾವಣಗೆರೆ (Davanagere) : ಸುಪ್ರೀಂ ಕೋರ್ಟ್ ನ ಆದೇಶದಂತೆ ಒಳ ಮೀಸಲಾತಿ ಜಾರಿಗೊಳಿಸಿ ಶೋಷಿತ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಲು ಒತ್ತಾಯಿಸಿ ದಾವಣಗೆರೆ ಜಿಲ್ಲಾ ಮಾದಿಗ ಜಾಗೃತಿ ಸಮಿತಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿ ಒತ್ತಾಯಿಸಿತು.
ಈ ವೇಳೆ ಮಾತನಾಡಿದ ಮುಖಂಡ ಆಲೂರು ನಿಂಗರಾಜ, ಒಳಮಿಸಲಾತಿಗಾಗಿ ಮಾದಿಗ ಸಮುದಾಯ ಕಳೆದ 30 ವರ್ಷಗಳಿಂದ ಅನೇಕ ಹೋರಾಟ ಮಾಡುತ್ತಾ ಬಂದಿರುವುದು ತಮಗೆಲ್ಲಾ ತಿಳಿದಿರುವ ವಿಷಯ. ಈ ಹೋರಾಟದ ಫಲವಾಗಿ 2004 ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ನೇತೃತ್ವದ ಎಸ್.ಎಂ. ಕೃಷ್ಣ ಸರ್ಕಾರ ಹೋರಾಟದ ಮನವಿಗೆ ಸ್ಪಂದಿಸಿ ಹೈಕೋರ್ಟನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಎ.ಜೆ. ಸದಾಶಿವ ರವರ (ಆಯೋಗ) ರಚನೆ ಮಾಡಿ ನೂರಾರು ಕೋಟಿ ವ್ಯಯಮಾಡಿ ನಿಕರವಾದ ವರದಿ ಸರಕಾರಕ್ಕೆ ನೀಡಿತು.
ನಂತರ ಅನೇಕ ಸಮಸ್ಯೆಗಳ ನೆಪವೊಡ್ಡಿ ಸದಾಶಿವ ಆಯೋಗದ ವರದಿ ಮೂಲೆ ಗುಂಪಾಯಿತು. ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಈ ಸಮುದಾಯದ ನ್ಯಾಯಕ್ಕೋಸ್ಕರ ಮಾಧುಸ್ವಾಮಿ ಆಯೋಗ ರಚನೆ ಮಾಡಿತ್ತು. ಈ ಆಯೋಗವು ವರದಿಯ ಎಲ್ಲಾ ದತ್ತಾಂಶಗಳನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಅದರ ಫಲವಾಗಿ ಬಸವರಾಜ ಬೊಮ್ಮಾಯಿ ರವರ ಸರ್ಕಾರ ಪ. ಜಾತಿಯ ಮೀಸಲಾತಿಯನ್ನು ಶೇಕಡಾ 2% ಹೆಚ್ಚಿಸುವುದರೊಂದಿಗೆ ಮಾದಿಗ ಸಮುದಾಯಕ್ಕೆ ಶೇಕಡಾ 6%, ಛಲವಾದಿ ಸಮುದಾಯಕ್ಕೆ 5.5%, ಕೊರಚ,ಲಂಬಾಣಿ, ಭೋವಿ ಜಾತಿಗಳಿಗೆ 4%, ಇತರೆ 1.5% ಸಣ್ಣ ಮಟ್ಟ ಸಮುದಾಯಗಳಿಗೆ ನ್ಯಾಯ ಸಮ್ಮತವಾಗಿ ಮೀಸಲಾತಿಯನ್ನು ಹಂಚಿಕೆ ಮಾಡಿತ್ತು ಎಂದರು.
ಸಮಾಜವಾದಿ ಹಿನ್ನಲೆಯಲ್ಲಿ ಬಂದಿರುವ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುತ್ತೇನೆಂದು ಹೇಳುತ್ತಾ ಬಂದಿರುವ ಸಿದ್ದರಾಮಯ್ಯ ಸರ್ಕಾರವನ್ನು ನಮ್ಮ ಸಮುದಾಯವು ಹಿಂದಿನಿಂದಲೂ ಬೆಂಬಲಿಸಿತ್ತು. ಆದರೆ ನೀವುಗಳು ನಮ್ಮ ಬೇಡಿಕೆಯನ್ನು ಅತಿ ಲಘುವಾಗಿ ತೆಗೆದುಕೊಂಡಿರುವುದನ್ನು ನಮ್ಮ ಸಮುದಾಯ ಉಗ್ರವಾಗಿ ಖಂಡಿಸುತ್ತದೆ. ಈಗಲೂ ಸಹ ಮೂರು ಕ್ಷೇತ್ರಗಳ ಉಪ ಚುನಾವಣಾ ಸಂದರ್ಭದಲ್ಲಿಯೂ ಮೂರು ತಿಂಗಳ ಸಮಯದಲ್ಲಿ ಹೊಸದಾಗಿ ಆಯೋಗ ರಚನೆ ಮಾಡಿ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಹೇಳುತ್ತಿರುವುದು ಈ ಸಮುದಾಯಕ್ಕೆ ಮಾಡುತ್ತಿರುವ ಮತ್ತೊಂದು ಮೂರ್ಖ ಭರವಸೆ ಎಂದುಕೊಳ್ಳಬೇಕಾಗುತ್ತದೆ ಕಿಡಿಕಾರಿದರು.
ಸಮಾಜವಾದಿ ಮುಖ್ಯಮಂತ್ರಿ ಹಾಗೂ ಎಲ್ಲಾ ಕಷ್ಟದ ಸಂದರ್ಭದಲ್ಲಿ ಅಹಿಂದ ಸಮುದಾಯ ಸಿದ್ದರಾಮ್ಯಯ ಅವರೇ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯ ಈ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸಿ ಸಾಮಾಜಿಕವಾಗಿ ಶೋಷಣೆಗೊಳಗಾಗಿರುವ ಈ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
Read also : ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾದಿಗ ಮತ್ತು ಚಲವಾದಿ ಸಮಾಜಗಳಿಂದ ಬೃಹತ್ ಪ್ರತಿಭಟನೆ
ಮಾದಿಗ ಜಾಗೃತಿ ಸಮಿತಿಯ ಗುಡ್ಡಪ್ಪ, ಜಯಪ್ರಕಾಶ್ ಎಂ, ಚಂದ್ರಪ್ಪ, ಜಿ ಎಚ್ ನಾಗರಾಜ್, ಪಾಲಿಕೆಯ ಮಾಜಿ ಸದಸ್ಯ ಎಂ. ಹಾಲೇಶ್, ರವಿ, ಹೆಗ್ಗೆರೆ ರಂಗಪ್ಪ , ಅವರಗೆರೆ ನಾಗರಾಜ, ಶಿವಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.