Kannada News | Dinamaanada Hemme | Dinamaana.com | 02-07-2024
ಆತ ರಾತ್ರಿಯೆಲ್ಲಾ ಕುಳಿತು ಮಾತನಾಡುತ್ತಿದ್ದ.ಕಾರ್ಲ್ ಮಾರ್ಕ್ಸ್, ಲೋಹಿಯಾ, ಬುದ್ಧ, ಬಸವಣ್ಣ, ಹೆಗೆಲ್, ಅಂಬೇಡ್ಕರ್…ಶಾಂತವೇರಿ , ಕೆ.ಎಚ್.ರಂಗನಾಥ್ ಹೀಗೆ ಮಾತು ಮುಗಿಯುವಷ್ಟರಲ್ಲಿ ಮುಂಜಾನೆಯ ಬೆಳಕು ಹರಿದಿರುತ್ತಿತ್ತು .
ಅಪ್ಪಟ ಸಮಾಜವಾದಿ..
ಅರ್ಧರ್ಧ ಕೇಟಿ ಕುಡಿದು ಬದುಕಿನ ದಾರಿಯ ಕಡೆಗೆ ಪಯಣ ಬೆಳೆಸುತ್ತಿದ್ದೆವು.ಇದು ಮಹಾಬಲೇಶ್ವರ ಕಾಟ್ರಹಳ್ಳಿಯವರ ಒಂದು ಕಾಲದ ಸಂಗಾತಿ ಸನತ್ ಕುಮಾರ್ ಬೆಳಗಲಿಯವರು ನೆನಪಿಸಿಕೊಳ್ಳುವ ರೀತಿ. ಅಪ್ಪಟ ಸಮಾಜವಾದಿಯಾಗಿದ್ದ ಕಾಟ್ರಹಳ್ಳಿಯ ಒಳಗೆ ಒಬ್ಬ ಸಂಶೋಧಕನಿದ್ದ, ಕಥೆಗಾರನಿದ್ದ , ಕವಿಯಿದ್ದ. ಅಪಾರ ಓದಿನ ಹಸಿದವನಿದ್ದ. ರಾಜಕಾರಣಿಯಿದ್ದ.
ಮುಂಗಾರು ಪತ್ರಿಕೆ ಸೇರಿಕೊಂಡರು. ಅಲ್ಲಿಯೂ ಬರಕತ್ತಾಗಲಿಲ್ಲ
ಹುಬ್ಬಳ್ಳಿಯ ಪಾಪು ರವರ ವಿಶ್ವವಾಣಿ ಪತ್ರಿಕೆಯಲ್ಲಿ ಮೊದಲಿಗೆ ಕೆಲಸ. ಹೂವಿನ ಹಡಗಲಿಯ ಉತ್ತಂಗಿಯಂಥ ಊರಿನಲ್ಲಿ ರೆವರೆಂಡ್ ಚೆನ್ನಪ್ಪ ನವರ ಹೆಸರಿನ ಗ್ರಂಥಾಲಯ ಸ್ಥಾಪನೆ, ಹಾಲಿನ ಸಹಕಾರ ಸಂಘ, ನಂತರ ಪ್ರಜಾವಾಣಿ ಸೇರಿ, ಅದೂ ಬಿಟ್ಟು ವಡ್ಡರ್ಸೆಯವರ ಮುಂಗಾರು ಪತ್ರಿಕೆ ಸೇರಿಕೊಂಡರು. ಅಲ್ಲಿಯೂ ಬರಕತ್ತಾಗಲಿಲ್ಲ.
ಪ್ರಯೋಗಾತ್ಮಕ ನಾಟಕಗಳ ಆಡಿಸಿದಂತಹ ಕಾಲವದು.
ಹರಪನಹಳ್ಳಿಯಲ್ಲಿ ಆಗ ತಾನೆ ಚಳುವಳಿಗಳು ಕಣ್ತೆರೆಯುವ ಕಾಲವದು. ಎಸ್.ಎಸ್.ಹಿರೇಮಠರ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿಯ ಚಳುವಳಿ, ರೈತ , ವಿದ್ಯಾರ್ಥಿ ಚಳುವಳಿಗಳು ಉತ್ತುಂಗದಲ್ಲಿದ್ದ ಕಾಲ. ರಾಜಕೀಯವಾಗಿಯೂ, ಸಾಂಸ್ಕೃತಿಕವಾಗಿಯೂ ಎಂ.ಪಿ.ಪ್ರಕಾಶ ಬಹಳ ಕ್ರಿಯಾಶೀಲರಾಗಿದ್ದಂತಹ ಕಾಲ. ಉತ್ಪಲ್ ದತ್ತರ ಸೂರ್ಯ ಶಿಕಾರಿ ನಾಟಕ, ಜೋಕುಮಾರಸ್ವಾಮಿ ಗಳಂತಹ ಪ್ರಯೋಗಾತ್ಮಕ ನಾಟಕಗಳ ಆಡಿಸಿದಂತಹ ಕಾಲವದು.
ಪತ್ರಿಕೋದ್ಯಮದ ಬಹುದೊಡ್ಡ ಮಾದರಿ
ಧಾರವಾಡದ ಹಳೆಯ ನಂಟು ಕಾಟ್ರಹಳ್ಳಿಯವರನ್ನು ಹುಡುಕಿಕೊಂಡು ಎಂ.ಪಿ.ಪ್ರಕಾಶರು ಬರುವಂತೆ ಮಾಡುತ್ತಿತ್ತು. ಹರಪನಹಳ್ಳಿಯಲ್ಲಿ ಪ್ರಾರಂಭಿಸಿದ ‘ದಿನ ಬಿಟ್ಟು ದಿನ ‘ಪತ್ರಿಕೆ ವಿದ್ಯಾರ್ಥಿಗಳಾದ ನಮಗೊಂದು ಬೆರಗು.ಹಳ್ಳಿಗಾಡಿನ ನನಗೆ ಗುರುತು ಪರಿಚಿತರೆಲ್ಲರೂ ಬರೆಯುತ್ತಿದ್ದ ಪತ್ರಿಕೆ. ಅಪ್ಪಟ ಗ್ರಾಮೀಣ ಸೊಗಡಿನ ಪತ್ರಿಕೆಯು ಇಂದಿಗೂ ಪತ್ರಿಕೋದ್ಯಮದ ಬಹುದೊಡ್ಡ ಮಾದರಿಯಾಗಿದೆ. ಕಾಟ್ರಹಳ್ಳಿಯವರು ಚೀನಾದ ಜನಪದ ಕಾವ್ಯದ ಪುಟ್ಟ ಭಾಗವೊಂದನ್ನು ಅನುವಾದಿಸಿದ್ದಾರೆ.
ನನ್ನ ಜಗತ್ತಿನಲ್ಲಿ ತುಂಬಾ ಅನ್ಯಾಯ:
ಹತ್ತಿ ಬೆಳೆಯಲಾರದವನು ಅತ್ಯುತ್ತಮ ಬಟ್ಟೆ ಹೊದ್ದುಕೊಳ್ಳುತ್ತಾರೆ!
ಹೊಲದಲ್ಲಿ ಕೆಲಸ ಮಾಡದವರು
ಬೆಳ್ಳಕ್ಕಿ ಬೋನ ಸವಿಯುತ್ತಾರೆ!
ಮತ್ತೆ, ಉದ್ದನೆಯ ಗಡ್ಡದ ಸಭ್ಯನೊಬ್ಬ
ಹದಿಹರೆಯದ ಹುಡುಗಿ ಕೂಡುತ್ತಾನೆ.
ಕಾವ್ಯಕ್ಕೆ ಒಂದು ರೀತಿಯ ಸಮಗ್ರತೆ ಇರುತ್ತೆ. ಕವಿಯ ಕಣ್ಣಳತೆಯಲ್ಲಿ , ಕಿವಿಯಳತೆಯಲ್ಲಿ ಬರುವ ಎಲ್ಲಾ ಚಿತ್ರಗಳೂ ಇಲ್ಲಿ ಬರುತ್ತವೆ. ಕಾವ್ಯವನ್ನು ನಮಗೆ ನಾವೇ ನೋಡಿಕೊಳ್ಳುವ ಹಾಗೆ ಬರೆಯಬಲ್ಲ / ಅನುವಾದಿಸಬಲ್ಲ ತಾಕತ್ತಿದ್ದವರು -ಮಹಾಬಲೇಶ್ವರ ಕಾಟ್ರಹಳ್ಳಿ.
ಬಿಸಿಲು ನಾಡಿಗೆ ಆಂದೋಲನ, ಪ್ರಪಂಚ, ಪ್ರಜಾಮತ, ಕನ್ನಡಪ್ರಭ, ಪ್ರಜಾವಾಣಿ, ಮುಂಗಾರು, ಅಭಿಮಾನಿ, ಕರಾವಳಿ ದೈನಿಕ, ಲಂಕೇಶ್, ಸುದ್ದಿ ಸಂಗಾತಿಗಳಂತಹ ಪತ್ರಿಕೆಗಳನ್ನು ಪರಿಚಯಿಸಿದವರು. ಗೌರ್ಮೆಂಟ್ ಲೈಬ್ರರಿಗೆ ಬರುತ್ತಿದ್ದ ಈ ಎಲ್ಲಾ ಪತ್ರಿಕೆಗಳನ್ನು ಒಂದೇ ಏಟಿಗೆ ಓದುವ ಧಾವಂತ ನಮ್ಮದಾಗಿರುತ್ತಿತ್ತು.
ಬರಹ ಕುರಿತು ಸಂಶೋಧನೆಯೇ ಆಗಬೇಕಿದೆ
ಇಂಥದೊಂದು ಬಣ್ಣಬಣ್ಣದ ಸೀನರಿಯನ್ನು ನನ್ನ ಬಾಲ್ಯದಲ್ಲಿ ತೋರಿಸಿ ನೇಪಥ್ಯಕ್ಕೆ ಸರಿದು ಹೋದ ಮಹಾಬಲೇಶ್ವರ ಕಾಟ್ರಹಳ್ಳಿಯವರ ಬಗೆಗೆ ಕನ್ನಡದಲ್ಲಿ ಅಷ್ಟಾಗಿ ಬಂದು ಬರಹಗಳಿಲ್ಲ .ಇವರ ಬರಹ ಕುರಿತು ಸಂಶೋಧನೆಯೇ ಆಗಬೇಕಿದೆ.
ಬಳ್ಳಾರಿ ಸೀಮೆಯಾದ್ಯಂತ ತುಂಗಭದ್ರೆ, ಹಗರಿ, ಹಳ್ಳಕೊಳ್ಳ ಗಳು ತುಂಬಿ ಹರಿದು ಹೋಗಿವೆ. ಹರಿಯುವಾಗಿನ ಭೋರ್ಗರೆತ, ಬತ್ತಿದಾಗಿನ ಮೌನ ಎರಡರ ಸಮ್ಮಿಳನದಂತಿದ್ದ ಕಾಟ್ರಹಳ್ಳಿಯವರ ದಿನ ಬಿಟ್ಟು ದಿನ ಪತ್ರಿಕೆಯ ಖಾಲಿ ಫ್ರೇಮ್ , ಇಂದಿಗೂ ನೂರಾರು ಕಥೆಗಳನ್ನು ಹೊಸ ಹೊಸ ಸಾಧ್ಯತೆಗಳನ್ನು ನಮ್ಮೊಳಗೆ ಹುಟ್ಟುಹಾಕುತ್ತಲೇ ಇದೆ.
ಬಿ.ಶ್ರೀನಿವಾಸ
🙏🏽🙏🏽🙏🏽👏🏽👏🏽👏🏽👏🏽👍🏽ಅಭಿನಂದನೆಗಳು ಸರ್, ನಿಮ್ಮ ಲೇಖನ ವನ್ನು ಓದಿದಾಗ ಮಹಾಬಲಶ್ವರ ಕಟ್ರಹಳ್ಳಿ ಯವರನ್ನ ನಾನೂ ತುಂಬಾ ಹತ್ತಿರದ ದಿಂದ ಅವರೊಟ್ಟಿಗೆ ಕಳೆದ ದಿನಗಳು “ದಿನ ಬಿಟ್ಟು ದಿನ ” ಹರಪನಹಳ್ಳಿ ಯ ಜನರಿಗೆ ಅಂದು ಬಿಸಿಬಿಸಿ ಸುದ್ದಿಯನ್ನು ನೀಡುತಿತ್ತು.ತುಂಬಾ ಹಳೆಯ ನೆನಪನ್ನು ಮತ್ತೆ ಮತ್ತೆ ನೆನಪಾಗುವ ಹಾಗೆ ಇದೆ, ಹಳೆಯ ನೆನಪುಗಳು, ಹೊಸ ಅಲೋಚನೆಗೆ ಅನುವು ಮಾಡಿಕೊಟ್ಟಿದೆ.🙏🏽🙏🏽🙏🏽