ದಾವಣಗೆರೆ (Davangere) : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ವಿವಿಧ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜನ್ ನೇತೃತ್ವದಲ್ಲಿ ಪಾಲಿಕೆಯ ಸದಸ್ಯರ ನಿಯೋಗ ಸಿಎಂ ಅವರಲ್ಲಿ ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೇಯರ್ ಚಮನಸಾಬ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸುಗಮ ಸಂಚಾರ, ಉತ್ತಮವಾದ ರಸ್ತೆಗಳು, ಮಳೆ ನೀರು ಮತ್ತು ಒಳಚರಂಡಿ, ಬೀದಿ ದೀಪಗಳು, ನಗರದ ಸ್ವಚ್ಛತೆ ಮತ್ತು ನಾಗರೀಕರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಕಸಾಯಿ ಖಾನೆ ಮತ್ತು ಅವಶ್ಯಕತೆ ಇರುವ ಹೆಚ್ಚಿನ ಪೌರ ಕಾರ್ಮಿಕರ ನೇಮಕಾತಿಗಾಗಿ ಮನವಿ ಮಾಡಲಾಯಿತು ಎಂದು ಹೇಳಿದರು.
2023-24 ನೇ ಸಾಲಿನ ಎಸ್.ಎಫ್.ಸಿ. ವಿಶೇಷ ಅನುದಾನದಡಿ ದಾವಣಗೆರೆ ದಕ್ಷಿಣ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರದಿಂದ ರೂ.32.46 ಕೋಟಿ ಮಂಜೂರಾಗಿರುತ್ತದೆ. ಅದರಲ್ಲಿ 62 ಕಾಮಗಾರಿಗಳನ್ನು ತೆಗೆದುಕೊಂಡಿದ್ದು, ಕೆಲವು ಕಾಮಗಾರಿಗಳು ಮುಕ್ತಾಯಗೊಂಡಿರುತ್ತವೆ ಹಾಗೂ ಉಳಿದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಎಸ್.ಎಫ್.ಸಿ. ವಿಶೇಷ ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ವಾಹನ ದಟ್ಟಣಿ ಕಡಿಮೆ ಮಾಡಲು ಪಿ.ಬಿ. ರಸ್ತೆ ಗೋಶಾಲೆಯಿಂದ ಬಸಾಪುರ ಮೂಲಕವಾಗಿ ಬೇತೂರು ರಸ್ತೆಯವರೆಗೆ ರಿಂಗ್ ರಸ್ತೆ ನಿರ್ಮಾಣಕ್ಕೆ ರೂ.120.00 ಕೋಟಿಗಳ ವಿಶೇಷ ಅನುದಾನ , ಪಾಲಿಕೆ ವ್ಯಾಪ್ತಿಯಲ್ಲಿ ಹೊರವಲಯದ ಬಡಾವಣೆಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕ್ಕೆ ರೂ.200.00 ಕೋಟಿಗಳ ಎಸ್.ಎಫ್.ಸಿ. ವಿಶೇಷ ಅನುದಾನ ನೀಡಬೇಕು, ಪಾಲಿಕೆಯ ಒಳಚರಂಡಿ ವಲಯ-2 ರ ಒಳಚರಂಡಿ ಹಾಗೂ ಎಸ್.ಟಿ.ಪಿ. ಘಟಕದ ನಿರ್ಮಾಣ ಕಾಮಗಾರಿಯು ಅವಶ್ಯಕತೆ ಇದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳ (KUWSDB) ಯಿಂದ ಸರ್ವೆ ಮಾಡಿ ರೂ.142.00 ಕೋಟಿ ವಿಸ್ತುತ ಯೋಜನಾ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಗೊಳಿಸುವುದು. ಸುಸಜ್ಜಿತ ಕಸಾಯಿ ಖಾನೆ , ಬೀದಿ ದೀಪ , 417 ಖಾಯಂ ಪೌರಕಾರ್ಮಿಕರಿದ್ದು, 440 ಪೌರಕಾರ್ಮಿಕರ ಕೊರತೆಯಿರುತ್ತದೆ. ಸ್ವಚ್ಛತಾ ಕಾರ್ಯವನ್ನು ಹೊರಗುತ್ತಿಗೆ ಮೂಲಕ ನಿರ್ವಹಿಸುವುದನ್ನು ಸ್ಥಗಿತಗೊಳಿಸಿ ಆದೇಶಿಸಿರುವುದರಿಂದ, ಘನತ್ಯಾಜ್ಯ ನಿರ್ವಹಣಾ ನಿಯಮಗಳು 2016 ರ ಅನುಷ್ಠಾನ, ಸ್ವಚ್ಛ ಭಾರತ ಮಿಷನ್ ಸಂಬಂಧಿತ ಚಟುವಟಿಕೆಗಳಾದ ಸ್ಮಚ್ಛ ಸರ್ವೇಕ್ಷಣ, ಗಾರ್ಬೇಜ್ ಫೀಸಿಟಿ ರೇಟಿಂಗ್ ಗಳಲ್ಲಿ ಪ್ರಗತಿ ಸಾಧಿಸಲು ಕಷ್ಟವಾಗುತ್ತಿದ್ದು, ಅಗತ್ಯವಿರುವ 440 ಪೌರಕಾರ್ಮಿಕರನ್ನು ಹೊರಗುತ್ತಿಗೆ ಮೂಲಕ ನಿರ್ವಹಿಸಲು ಅನುಮತಿ ಮನವಿ ಸಲ್ಲಿಸಲಾಯಿತು ಎಂದು ಹೇಳಿದರು.
Read also : Davanagere | ಪಟಾಕಿ ಹಾರಿಸುವಾಗ ಜಾಗೃತವಾಗಿರಿ : ಶಾಮನೂರು ಶಿವಶಂಕರಪ್ಪ
ಬಿ.ಬಿ.ಎಂ.ಪಿಯಲ್ಲಿ ಜಾರಿಗೆ ತಂದ One Time Settlement ಯೋಜನೆಯಂತೆ ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೇಬಾಕಿ ಆಸ್ತಿ ತೆರಿಗೆ ಮೊತ್ತವನ್ನು ಪಾವತಿಸಲು ದಂಡದ ಮೊತ್ತಕ್ಕೆ ವಿನಾಯಿತಿ ಹಾಗೂ ಕೈಗಾರಿಕೆ ಕಟ್ಟಡಗಳಿಗೆ ವಿನಾಯಿತಿ ಹೆಚ್ಚಿಸಲು ಸಾರ್ವಜನಿಕರಿಂದ ಮತ್ತು ಕೈಗಾರಿಕಾ ಉದ್ಯಮಿದಾರರು ಕೋರಿರುತ್ತಾರೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಂಡ ಪಾವತಿಸಲು ವಿನಾಯಿತಿ ನೀಡಲು ಮತ್ತು ಕೈಗಾರಿಕ ಕಟ್ಟಡಗಳಗೆ ನೀಡಿರುವ ವಿನಾಯಿತಿಯನ್ನು ಹೆಚ್ಚಿಸಿ ತೆರಿಗೆ ಪಾವತಿಸಿಕೊಳ್ಳುವಂತೆ ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ಕ ತಿದ್ದುಪಡಿ ತಂದು ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಲು ಮನವಿ ಸಲ್ಲಿಸಲಾಗಿದೆ ಎಂದರು.
ಈ ವೇಳೆ ಉಪಮೇಯರ್ ಸೋಗಿ ಶಾಂತಕುಮಾರ, ಪಾಲಿಕೆ ಸದಸ್ಯರಾದ ಎ.ನಾಗರಾಜ, ಗಡಿಗುಡಾಳ ಮಂಜುನಾಥ, ಎಲ್.ಡಿ.ಗೋಣೆಪ್ಪ, ಮುಖಂಡರಾದ ಉಮೇಶ ಉಪಸ್ಥಿತರಿದ್ದರು.