ಹರಿಹರ: ತಾಲ್ಲೂಕಿನ ಕಡ್ಲೆಗೊಂದಿ ಗ್ರಾಮದ ವಸತಿ ರಹಿತರಿಗೆ ವಸತಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ಮಂಗಳವಾರದಂದು ಬೆಳಿಗ್ಗೆ 10ಕ್ಕೆ ಹೊರವಲಯದ ಪ್ರೊ.ಬಿ.ಕೃಷ್ಣಪ್ಪರ ಸಮಾಧಿ ಸ್ಥಳದಿಂದ ತಾಲ್ಲೂಕು ಕಚೇರಿವರೆಗೆ ಪಾದಯಾತ್ರೆ ಹೋರಾಟ ಹಮ್ಮಿಕೊಳ್ಳುವ ಕುರಿತು ಗ್ರಾಮದಲ್ಲಿ ಭಾನುವಾರ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತೆಂದು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ತಿಳಿಸಿದ್ದಾರೆ.
ಬೇಡಿಕೆ ಈಡೇರಿಕೆಗಾಗಿ ಈ ಹಿಂದೆ ಪ್ರೊ.ಬಿ.ಕೃಷ್ಣಪ್ಪರ ಸಮಾಧಿ ಸ್ಥಳದಿಂದ ತಾಲ್ಲೂಕು ಕಚೇರಿವರೆಗೆ ತಮಟೆ ಚಳವಳಿ, ತಾಲ್ಲೂಕು ಕಚೇರಿ ಎದುರು ಸತತವಾಗಿ 60 ದಿನಗಳ ಕಾಲ ಧರಣ ಸತ್ಯಾಗ್ರಹ ಹಾಗೂ ಬೆಂಗಳೂರಿನಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಸಿಎಂ ಇವರಿಗೆ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಒ ರಿಗೆ ಮನವಿ ನೀಡಲಾಗಿದ್ದರೂ ಈವರೆಗೆ ಯಾವುದೆ ಪ್ರಯೋಜನವಾಗಿಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ಮೂಡಿ ಬಂದಿದೆ.
ಗ್ರಾಮದಲ್ಲಿ ಸರ್ವೆ ನಂ.37/2 ರಲ್ಲಿ ಲಭ್ಯವಿರುವ ಸರ್ಕಾರದ ಜಮೀನಿನಲ್ಲಿ ವಸತಿ ಯೋಜನೆ ಜಾರಿಗೊಳಿಸಲು ಸಂಘಟನೆಯ ಹೋರಾಟದ ಫಲವಾಗಿ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ 73 ಜನ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯ್ತಿಯಿಂದ 9 ತಿಂಗಳ ಹಿಂದೆಯೆ ಸಿದ್ಧಪಡಿಸಲಾಗಿದೆ. ಪಟ್ಟಿ ಸಿದ್ಧಪಡಿಸಿದ ನಂತರವೂ ನಿವೇಶನಗಳ ಹಂಚಿಕೆ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನೆಗೆ ತಾಲ್ಲೂಕು ಮಟ್ಟದಲ್ಲಿ ಭೂ ನ್ಯಾಯ ಮಂಡಳಿ ರಚನೆಯಾಗಬೇಕಿದೆ ಎಂದು ತಾಲ್ಲೂಕು ಮಟ್ಟದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದರು.
ಇತ್ತೀಚಿಗೆ ಭೂ ನ್ಯಾಯ ಮಂಡಳಿಯೂ ರಚನೆಯಾಗಿದೆ. ಈಗಲೂ ಕೂಡ ಯಾವುದೆ ಕಾರಣಗಳನ್ನು ಹೇಳದೆ ಆಷ್ಟು ಬೇಗನೆ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಆದಷ್ಟು ಶೀಘ್ರ ನಡೆಸುವಂತೆ ಆಗ್ರಹಿಸಲು ಪಾದಯಾತ್ರೆ ಹೋರಾಟವನ್ನು ಹಮ್ಮಿಕೊಳ್ಳುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತೆಂದು ತಿಳಿಸಿದರು.
Read also : ದಾವಣಗೆರೆ|ಮನೆ ಕಳ್ಳತನ ಪ್ರಕರಣ : ಆರೋಪಿಗಳ ಬಂಧನ
ಸಭೆಯಲ್ಲಿ ಕಡ್ಲೆಗೊಂದಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮಾತೆಂಗೆಮ್ಮ ತಿಮ್ಮಣ್ಣ ಮಾತನಾಡಿ, ತಾಲ್ಲೂಕು ಮತ್ತು ಜಿಲ್ಲಾಡಳಿತದ ಗಮನ ಸೆಳೆಯಲು ಎಲ್ಲಾ ಫಲಾನುಭವಿಗಳು ಕುಟುಂಬ ಸಮೇತ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.
ವಿಜಯ್ ಕೆ.ಬೇವಿನಹಳ್ಳಿ, ಹನುಮಂತಪ್ಪ ಕೆ.ಎಚ್., ರಂಗಪ್ಪ, ಶೀಲಾ ರಾಜಪ್ಪ, ಶಿವಣ್ಣ, ಹನುಮಂತ, ಸಣ್ಣ ನಿಂಗಪ್ಪ, ಶೈಲೂ ಅಣ್ಣಪ್ಪ, ಮೈಲಮ್ಮ, ದುರ್ಗಜ್ಜ, ಲೋಕೇಶ್, ರುಕ್ಮಿಣ , ನಾಗಮ್ಮ, ನಿಂಗರಾಜ್, ಕೊಟ್ರಪ್ಪ, ದುರ್ಗಮ್ಮ, ಮೊಹಮ್ಮದ್ ಅಲಿ, ರತ್ನಕ್ಕ, ಬಸವರಾಜ್, ಮೈಲಮ್ಮ, ಪ್ರಭು., ಸಂಜೀವ್ ಭಾಗವಹಿಸಿದ್ದರು.