ಹರಿಹರ: ಕಲಬೆರಕೆ, ಆಸುರಕ್ಷಿತ ಮತ್ತು ಗುಣಮಟ್ಟವಿಲ್ಲದ ಆಹಾರ ತಯಾರಿಕೆ ಹಾಗೂ ವಿತರಣೆ ಮಾಡುವುದು ದಂಡ ಮತ್ತು ಶಿಕ್ಷೆ ವಿಧಿಸಬಹುದಾದ ಆಪರಾಧವಾಗಿರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಶಾರದಾದೇವಿ ಸಿ. ಹಟ್ಟಿ ಹೇಳಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಮತ್ತು ನಗರಸಭೆ ಸಂಯುಕ್ತಾಶ್ರಯದಲ್ಲಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಬೀದಿಬದಿ ವ್ಯಾಪಾರಿಗಳಿಗೆ ಮತ್ತು ಆಹಾರ ಉತ್ಪಾದನಾ ಹಾಗೂ ಮಾರಾಟಗಾರರಿಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯದ ಮೇಲೆ ದುಷ್ಪಾರಿಣಾಮ
ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವ ಬಣ್ಣ ಹಾಗೂ ರುಚಿಯ ಪೌಡರ್‌ಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಿದರೆ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತದೆ. ಇವುಗಳನ್ನು ಬಳಸದಂತೆ ಎಚ್ಚರಿಕೆ ನೀಡಿದ ಅವರು ಗುಣಮಟ್ಟಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಬೇಕೆಂದರು.
ಬಣ್ಣದ ತಿನಿಸುಗಳ ಆಕರ್ಷಣೆಯೆ ಆಪತ್ತಿಗೆ ಕಾರಣ
ಬಣ್ಣ, ಬಣ್ಣದ ತಿನಿಸುಗಳ ಆಕರ್ಷಣೆಯೆ ಆಪತ್ತಿಗೆ ಕಾರಣವಾಗಬಹುದು. ಇತ್ತೀಚಿಗೆ ಮಲೆಬೆನ್ನೂರಿನಲ್ಲಿ ಬೀದಿಬದಿ ತಿಂಡಿ ತಿಂದು ಬಾಲಕನೋರ್ವ ಮೃತಪಟ್ಟಿದ್ದಾನೆ. ಈ ದುರ್ಘಟನೆಯು ಬೀದಿ, ಬದಿ ವ್ಯಾಪಾರಿಗಳ ಜವಾಬ್ದಾರಿಯನ್ನು ಮನವರಿಗೆ ಮಾಡಿಕೊಡುತ್ತದೆ. ನಿಮ್ಮ ನಿರ್ಲಕ್ಷ್ಯವು ಇನ್ನೋಬ್ಬರ ಜೀವಕ್ಕೆ ಕಂಟಕವಾಗದಿರಲಿ ಎಂದು ಕಿವಿ ಮಾತು ಹೇಳಿದರು.
ಸ್ವಚ್ಚತೆ ಮತ್ತು ಗುಣಮಟ್ಟಕ್ಕೆ ಅಧ್ಯತೆ ನೀಡಿ
ಇತ್ತೀಚಿನ ದಿನಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರ ಮೇಲೆ ಆನೇಕರು ಆವಲಂಬಿತರಾಗಿದ್ದಾರೆ. ನೀವು ಸ್ವಚ್ಚತೆ ಮತ್ತು ಗುಣಮಟ್ಟಕ್ಕೆ ಅಧ್ಯತೆ ನೀಡಿ, ದಂಡ ಹಾಕುವುದು, ಶಿಕ್ಷೆಗೆ ಈಡು ಮಾಡುವುದು ಸುಲಭ, ಆದರೆ ನಿಮಗೆ ಮೊದಲು ಅರಿವು ಮತ್ತು ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಎಚ್ಚರಿಕೆ ವಹಿಸದಿದ್ದರೆ ಕಾಯ್ದೆಯನ್ವಯ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಿಂಡಿ, ತಿನಿಸು ತಯಾರಿಸಿ ಕಾಳಜಿಯಿಂದ ಮಾರಾಟ ಮಾಡಿ
ಪ್ರಧಾನ ಸಿವಿಲ್ ನ್ಯಾಯಾದೀಶರಾದ ಮಹಾದೇವ ಕಾನಟ್ಟಿ ಮಾತನಾಡಿ, ಸುರಕ್ಷಿತ, ಗುಣಮಟ್ಟ ಮತ್ತು ಸ್ವಚ್ಚತೆಯಿಂದ ಗ್ರಾಹಕರಿಗೆ ಆಹಾರ ನೀಡುವುದು ನಿಮ್ಮ ಜವಾಬ್ದಾರಿಯಾಗಿದೆ. ನಿಮ್ಮ ಕುಟುಂಬದ ಸದಸ್ಯರೆ ನೀವು ತಯಾರು ಮಡಿದ ಆಹಾರ ಸೇವಿಸುತ್ತಿದ್ದಾರೆಂದು ತಿಳಿದು ತಿಂಡಿ, ತಿನಿಸು ತಯಾರಿಸಿ ಕಾಳಜಿಯಿಂದ ಮಾರಾಟ ಮಾಡಬೇಕು, ಆಹಾರ ಸೇವನೆಯಿಮದ ಯಾರಿಗಾದರೂ ತೊಂದರೆಯಾದರೆ ನೀವು ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಬೇಸಿಗೆ ಆರಂಭವಾಗಿದ್ದು ನಗರಸಭೆಯವರು ನಗರದ ಸ್ವಚ್ಚತೆ ಹೆಚ್ಚಿನ ಆಧ್ಯತೆ ನೀಡಬೇಕು. ಎಲ್ಲೆಂದರಲ್ಲಿ ಕಸ ಬೀಸಾಕುವುದನ್ನು ತಡೆಯಬೇಕು, ನಿರಂತರವಾಗಿ ಕಸ ವೀಲೆವಾರಿ ಕಡೆ ವಿಶೇಷ ಗಮನಹರಿಸ ಬೇಕು ಎಂದರು ಪೌರಾಯುಕ್ತರು ಮತ್ತು ಸಿಬ್ಬಂದಿಗಳಿಗೆ ಕಿವಿ ಮಾತು ಹೇಳಿದರು.
ತಹಸೀಲ್ದಾರ್ ಕೆ.ಎಂ.ಗುರುಬಸವರಾಜ್ ಮಾತನಾಡಿ, ವಿಷೇಶವಾಗಿ ಗ್ರಾಹಕರು ಪಾನಿ ಪೂರಿ, ಗೋಬಿ ಮಂಚೂರಿ, ಚಿಕನ್ ಕಬಾಬ್, ಎಗ್‌ರೈಸ್, ಜುಲೇಬಿ, ಪಾವ್‌ಭಾಜಿ, ಸೇರಿದಂತೆ ಇತರೆ ಪದಾರ್ಥಗಳನ್ನು ಬೀದಿಬದಿಯ ಅಂಗಡಿಗಳಲ್ಲಿ ಸೇವಿಸುತ್ತಾರೆ. ಸಾರ್ವಜನಿಕರೂ ಕೂಡ ತಾವು ತಿಂಡಿ, ತಿನಿಸು ಸೇವಿಸುವ ಮುನ್ನ ಸದರಿ ಅಂಗಡಿಯ ಸ್ವಚ್ಚತೆ, ಶುದ್ಧ ಕುಡಿಯುವ ನೀರಿನ ಬಗ್ಗೆ ಗಮನಹರಿಸಬೇಕೆಂದರು.
ಪ್ರತಿಯೊಂದು ಬೀದಿ ಬದಿ ಅಂಗಡಿ, ಬೇಕರಿ ಮತ್ತು ಹೋಟೆಲ್ ಮಾಲೀಕರು ಕಡ್ಡಾಯವಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪರವಾನಿಗೆಯನ್ನು ಪಡೆದುಕೊಳ್ಳುವಂತೆ ಸೂಚನೆ ನೀಡಿದ ಅವರು ಶುದ್ಧ ಆಹಾರ ನೀಡಿದರೆ ಗ್ರಾಹಕರು ಸಾಲಿನಲ್ಲಿ ನಿಂತು ಸೇವನೆ ಮಾಡುತ್ತಾರೆ. ಇದರಿಂದ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಎಂದರು.
ಈ ವೇಳೆ ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್, ಹರಿಹರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಅನಂದ ಕುಮಾರ್, ಆಹಾರ ಸುರಕ್ಷತಾ ಅಧಿಕಾರಿ ನವೀನ್‌ಕುಮಾರ್, ಆರೋಗ್ಯ ಇಲಾಖೆಯ ಎಂ.ಉಮ್ಮಣ್ಣ, ನಗರಸಭೆ ಆರೋಗ್ಯ ನೀರಿಕ್ಷಕ ರವಿಪ್ರಕಾಶ್, ನಗರಸಭೆ ವ್ಯವಸ್ಥಾಪ ಶಿವಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.