ದಾವಣಗೆರೆ: ಆಟೋಟಗಳಲ್ಲಿ ಭಾಗವಹಿಸುವುದರಿಂದ ದೇಹದ ಸರ್ವಾಂಗೀಣ ಬೆಳವಣಿಗೆಯಾಗುವುದಲ್ಲದೇ ಸದೃಢ ಆರೋಗ್ಯ ನಿರ್ಮಾಣವಾಗುತ್ತದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ತ್ಯಾವಣಗಿ ಗ್ರಾಮದಲ್ಲಿ ಮದಕರಿ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಕರು ಸದೃಢರಾಗಬೇಕಾದರೆ ಕ್ರೀಡೆಗಳು ಅವಶ್ಯಕ. ಆದರೆ ಇಂದಿನ ಮೊಬೈಲ್ ಯುಗದಲ್ಲಿ ಯುವಕರು ಕ್ರೀಡೆಗಳಿಂದ ದೂರವಾಗಿ ಮಾನಸಿಕ ಮತ್ತು ದೈಹಿಕವಾಗಿ ದೌರ್ಬಲ್ಯಕ್ಕೊಳಗಾಗುತ್ತಿದ್ದಾರೆ. ಆದ್ದರಿಂದ ಯುವಕರು ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಗೋವಿಂದಸ್ವಾಮಿ, ಪ್ರದೀಪ್, ಹರೀಶ್, ಮಹಾಬಲೇಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ವಿದ್ಯಾಥಿ ನಿಲಯಕ್ಕೆ ದಿಢೀರ್ ಭೇಟಿ…
ತ್ಯಾವಣಗಿ ಗ್ರಾಮದಲ್ಲಿರುವ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ ಪರಿಶೀಲನೆ ನಡೆಸಿದರು. ಪ್ರತಿನಿತ್ಯ ಸರ್ಕಾರದ ಮೆನು ಪ್ರಕಾರ ಊಟ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಬಗ್ಗೆ ಮಾಹಿತಿ ಪಡೆದರು.
ರಾಜ್ಯದಲ್ಲಿರುವ ಕೆಲವು ವಸತಿ ಶಾಲೆಗಳಲ್ಲಿ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ವಸತಿ ಶಾಲೆಯಲ್ಲಿರುವ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಿಗಾ ವಹಿಸಬೇಕು. ಜೊತೆಗೆ ಕಳಪೆ ಗುಣಮಟ್ಟದ ತರಕಾರಿ, ಆಹಾರ ಪದಾರ್ಥ ಬಳಸದೆ ಪ್ರತಿನಿತ್ಯ ತಾಜಾ ತರಕಾರಿ, ಗುಣಮಟ್ಟ
ದ ಆಹಾರ ಪದಾರ್ಥಗಳನ್ನು ಬಳಸಿ ಆಹಾರ ತಯಾರಿಸಬೇಕು ಎಂದು ವಸತಿ ಶಾಲೆಯ ಮೇಲ್ವಿಚಾರಕರು ಮತ್ತು ಅಡುಗೆ ತಯಾರಿಸುವ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ರಾಜ್ಯ ಸರ್ಕಾರ ವಸತಿ ಶಾಲೆಗಳ ಮಕ್ಕಳ ಶಿಕ್ಷಣ ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿ ದೆ. ಅದನ್ನು ದುರುಪಯೋಗ ಮಾಡಿಕೊಳ್ಳದಂತೆ ನಿಮ್ಮ ಮನೆಯ ಮಕ್ಕಳಿಗೆ ಯಾವ ರೀತಿಯಲ್ಲಿ ಪಾಲನೆ, ಪೋಷಣೆ ಮಾಡಿದಂತೆ ಈ ಮಕ್ಕಳಿಗೂ ಪಾಲನೆ, ಪೋಷಣೆ ಮಾಡಬೇಕು. ಕ್ಷೇತ್ರದ ವ್ಯಾಪ್ತಿಯ ವಸತಿ ಶಾಲೆಗಳ ಮಕ್ಕಳಿಗೆ ತೊಂದರೆ ನೀಡುವುದು, ಕಳಪೆ ಗುಣಮಟ್ಟದ ಆಹಾರ ಕೊಡುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.