ನವದೆಹಲಿ/ದಾವಣಗೆರೆ : ಇಎಸ್ ಐ ವೇತನಮಿತಿಯನ್ನು 21,000 ದಿಂದ 30,000 ಸಾವಿರಕ್ಕೆ ಏರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನವದೆಹಲಿಯ ಸಂಸತ್ ಕಲಾಪದ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಂಸದರು ನೌಕರರ ವಿಮಾ (ಇಎಸ್‌ಐ) ಯೋಜನೆಯ ಹಳೆಯದಾದ ವೇತನಮಿತಿಯನ್ನು ತಕ್ಷಣ ಪರಿಷ್ಕರಿಸಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಪ್ರಸ್ತುತ ತಿಂಗಳಿಗೆ ₹21,000 ಕ್ಕಿಂತ ಹೆಚ್ಚು (ವಿಕಲಚೇತನರಿಗೆ ₹25,000) ವೇತನ ಹೊಂದಿರುವ ಕಾರ್ಮಿಕರು ಇಎಸ್‌ಐ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ. 2017ರಿಂದ ಈ ಮಿತಿಯನ್ನು ಪರಿಷ್ಕರಿಸಲಾಗದ ಪರಿಣಾಮ, ಲಕ್ಷಾಂತರ ದುರ್ಬಲ ಕಾರ್ಮಿಕರು ಸಾಮಾಜಿಕ ಭದ್ರತೆಯಿಂದ ವಂಚಿತರಾಗುತ್ತಿದ್ದಾರೆಂದು ಸಂಸದರು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಸೇರಿದಂತೆ ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳು ವೈಜ್ಞಾನಿಕ ಕನಿಷ್ಠ ವೇತನ ಪರಿಷ್ಕರಣೆ ನಡೆಸುತ್ತಿದ್ದು, ಕರ್ನಾಟಕದ ಕರಡು ಅಧಿಸೂಚನೆಯ ಪ್ರಕಾರ ಮಾಸಿಕ ವೇತನ ₹19,000 ರಿಂದ ₹34,000 ಕ್ಕೆ ಏರಿಕೆಯ ನಿರೀಕ್ಷೆ ಇದೆ. ಬೆಂಗಳೂರಿನಂತಹ ನಗರಗಳಲ್ಲಿ ₹31,000 ಸಂಪಾದಿಸುವ ಕಾರ್ಮಿಕರು ಇನ್ನೂ ಆರ್ಥಿಕವಾಗಿ ದುರ್ಬಲರಾಗಿದ್ದರೂ, ಇಎಸ್‌ಐ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಇಎಸ್‌ಐ ವೇತನಮಿತಿಯನ್ನು ₹21,000 ರಿಂದ ₹30,000 ಕ್ಕೆ ತಕ್ಷಣ ಏರಿಕೆ ಮಾಡಬೇಕು.ಇಎಸ್‌ಐ ಕಾಯ್ದೆ 1948ಕ್ಕೆ ತಿದ್ದುಪಡಿ ಮಾಡಿ, ದರ ಏರಿಕೆ ಅಥವಾ ವೇತನ ಸೂಚ್ಯಂಕ ಆಧಾರಿತ ನಿಯಮಿತ ಪರಿಷ್ಕರಣೆ ವ್ಯವಸ್ಥೆ ಜಾರಿ ಮಾಡಬೇಕು. ಕನಿಷ್ಠ ವೇತನ ಏರಿಕೆಯ ಕಾರಣದಿಂದ ಸಾಮಾಜಿಕ ರಕ್ಷಣೆಯಿಂದ ಹೊರಗುಳಿಯುವ ಕಾರ್ಮಿಕರಿಗೆ ಹಾಲಿ ಸೌಲಭ್ಯ ಮುಂದುವರಿಯುವಂತೆ ಕ್ರಮ ವಹಿಸಬೇಕು. 51ನೇ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಬೇಕು ಹಾಗೂ ರಾಜ್ಯಗಳು ಮತ್ತು ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಫಲಾನುಭವಿಗಳ ಹಿತಾಸಕ್ತಿ ಕಾಪಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರವು ತ್ವರಿತ ಕ್ರಮ ಕೈಗೊಂಡು, ವೇತನ ಏರಿಕೆ ಹಾಗೂ ಹಣದುಬ್ಬರದ ಬೆಳವಣಿಗೆ ಹಿನ್ನೆಲೆಯಲ್ಲಿ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.