ಹಾವೇರಿ :
ಮೆಣಸಿನಕಾಯಿ ಬೆಳೆಗೂ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೃಷಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಮಾರುಕಟ್ಟೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಬುಧವಾರ ಬ್ಯಾಡಗಿ ಎಪಿಎಂಸಿಗೆ ಭೇಟಿ ನೀಡಿ, ಬೆಂಕಿಯಿಂದ ನಾಶವಾದ ಕಟ್ಟಡ, ದಾಖಲಾತಿಗಳು ಮತ್ತು ಪೀಠೋಪಕರಣ, ಸುಟ್ಟುಹೋದ ವಾನಗಳನ್ನು ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಡಗಿ ಘಟನೆ ದುರದೃಷ್ಟಕರ ಎಂದರು.
ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ಇಲ್ಲಿ ಈ ರೀತಿ ಮಾಡಬಾರದು. ತಮ್ಮ ಬೆಳೆಗೆ ದರ ಕಡಿಮೆ ಆದ ಕುರಿತು ನೋವು ವ್ಯಕ್ತಪಡಿಸಲು ಸಾಕಷ್ಟು ದಾರಿ ಇವೆ. ಈ ಕುರಿತು ನಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಬಹುದಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಮಾರುಕಟ್ಟೆ ಮತ್ತಷ್ಟು ಅಭಿವೃದ್ಧಿಗೆ ಒತ್ತು
ಇಲ್ಲಿನ ಎಪಿಎಂಸಿ ಕಟ್ಟಡಕ್ಕೆ ಆದ ಹಾನಿ ಅಂದಾಜು ಮಾಡಿ ವರದಿ ಕಳಿಸಲು ತಿಳಿಸಿದ್ದೇನೆ. ಶೀಘ್ರವಾಗಿ ಮರುಸೌಂದರ್ಯಿಕರಣ ಮಾಡಿ ಪುನರಾರಂಭಿಸಲಾಗುವುದು. ಅಲ್ಲದೇ ಜಾಗ ಕಡಿಮೆ ಬಿದ್ದಲ್ಲಿ ಸರ್ಕಾರದ ವತಿಯಿಂದ 40 ಎಕರೆ ಜಾಗ ಕೊಡಲು ಇಲಾಖೆ ಸಿದ್ದವಿದೆ. ಒಟ್ಟಾರೆ ಈ ಮಾರುಕಟ್ಟೆಯನ್ನು ಮತ್ತಷ್ಟು ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ನೈಜ ಅಪರಾಧಿಗಳಿಗೆ ಶಿಕ್ಷೆ
ಈ ಘಟನೆಗೆ ಕಾಣದ ಕೈಗಳ ಹಿನ್ನೆಲೆ ಕುರಿತು ತನಿಖೆ ನಡೆದಿದೆ. ದುರ್ಘಟನೆಯ ವಿಡಿಯೋದಲ್ಲಿ ಕಂಡ ಕೆಲ ಪ್ರಮುಖರು ಕಣ್ಮರೆಯಾಗಿದ್ದು ಎಲ್ಲರನ್ನೂ ಪತ್ತೆ ಮಾಡಲಾಗುವುದು. ನೈಜ ಅಪರಾಧಿಗಳಿಗೆ ಶಿಕ್ಷೆ ಮತ್ತು ನಿರಪರಾಧಿಗಳ ಬಿಡುಗಡೆಗೆ ಆದ್ಯತೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.