ದಾವಣಗೆರೆ.ಅ.10 (Davanagere) : ಬ್ಯಾಂಕಿನಲ್ಲಿ ಅಡವಿಟ್ಟಿದ್ದ ಆಭರಣಗಳನ್ನು ಬಿಡಿಸಿಕೊಡುಂತೆ ಕೇಳಿದ ಹೆಂಡತಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆಕೆಯ ಸಾವಿಗೆ ಕಾರಣನಾಗಿದ್ದ ಗಂಡ, ಮಾವ ಮತ್ತು ಅತ್ತೆಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ 2 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಹೊನ್ನಾಳಿ ತಾಲ್ಲೂಕು ಚಿಕ್ಕ ಬಾಸೂರು ತಾಂಡದ ಪತಿ ಗಿರಿಧರ್ (32), ತಂದೆ ಹಾಲಪ್ಪನಾಯ್ಕ(58) ಮತ್ತು ತಾಯಿ ಲಲಿತಾಬಾಯಿ(50) ಶಿಕ್ಷೆಗೆ ಗುರಿಯಾದ ಆರೋಪಿಗಳು.
ಚಿಕ್ಕ ಬಾಸೂರು ಗ್ರಾಮದ ಸುಮ(24)ಎಂಬ ಯುವತಿಯನ್ನು ಅದೇ ಗ್ರಾಮದ ಗಿರಿಧರ ಎಂಬ ಯುವಕನಿಗೆ 5 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ 6 ತೊಲ ಬಂಗಾರ, 40 ಸಾವಿರ ರೂ ನಗದು, ಒಂದು ಬೈಕನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮದುವೆಯ ನಂತರ 3 ವರ್ಷಗಳ ಕಾಲ ಅತ್ತೆ, ಮಾವ ಚೆನ್ನಾಗಿ ನೋಡಿಕೊಂಡರು.
ಮದುವೆ ಸಂದರ್ಭದಲ್ಲಿ ತವರು ಮನೆಯವರು ನೀಡಿದ್ದ 6 ತೊಲ ಬಂಗಾರದ ಆಭರಣಗಳನ್ನು ಗಿರಿಧರ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದಿದ್ದ. ಈ ಆಭರಣಗಳನ್ನು ಬಿಡಿಸಿಕೊಡುವಂತೆ ಕೇಳಿದಾಗ ಸುಮಾಳಿಗೆ ಗಂಡ, ಅತ್ತೆ,ಮಾವ ಸೇರಿಕೊಂಡು ದೈಹಿಕವಾಗಿ ಹಲ್ಲೆ ಮಾಡಿ, ಮನೆಯಲ್ಲಿದ್ದ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಇದರಿಂದ ರಕ್ಷಣೆ ಮಾಡಿಕೊಳ್ಳಲು ಮನೆಯಲ್ಲಿದ್ದ ನೀರಿನ ಡ್ರಂನಲ್ಲಿ ಮುಳುಗಿ ಬೆಂಕಿ ನಂದಿಸಿಕೊಂಡಿದ್ದೆ. ನಂತರ ಅಕ್ಕಪಕ್ಕದ ಮನೆಯವರು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ನಂಥರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಗಾಯಾಳು ಸುಮ ಮರಣಪೂರ್ವ ಹೇಳಿಕೆ ನೀಡಿದ್ದರು.
Read also : Davanagere news | ಕುಷ್ಠರೋಗ, ಕ್ಷಯರೋಗದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ : ಜಿಲ್ಲಾಧಿಕಾರಿ ಗಂಗಾಧರಸ್ವಾಮಿ
ಗಾಯಾಳು ಸುಮ ದೂರಿನ ಮೇರೆಗೆ ಪ್ರಕರಣ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖಾಧಿಕಾರಿ ಮಂಜುನಾಥ .ಕೆ ಗಂಗಲ್ ತನಿಖೆ ಕೈಗೊಂಡು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವೀಣ್ ಕುಮಾರ್ ಆರ್.ಎನ್ ಅವರು, ಸಾಕ್ಷಿ ಆಧಾರಗಳಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸುಮಳ ಗಂಡ ಗಿರಿಧರ, ಮಾವ ಹಾಲಪ್ಪನಾಯ್ಕ ಅತ್ತೆ ಲಲಿತಾಬಾಯಿ ಅವರಿಗೆ ಜೀವಾವಧಿ ಶಿಕ್ಷೆ ಮತ್ತು 38 ಸಾವಿರ ರೂ ದಂಡ ವಿಧಿಸಿ ಗುರುವಾರ ತೀರ್ಪು ನೀಡಿದರು. ಪ್ರಕರಣದಲ್ಲಿ ಪಿರ್ಯಾದಿಯವರ ಪರವಾಗಿ ಸರ್ಕಾರಿ ವಕೀಲ ಕೆ.ಜಿ ಜಯ್ಯಪ್ಪ ವಾದ ಮಂಡಿಸಿದ್ದರು.