ದಾವಣಗೆರೆ : ಶೀಲ ಶಂಕಿಸಿ ಅಕ್ಕ-ತಂಗಿಯನ್ನು ಹತ್ಯೆ ಮಾಡಿದ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಘಟನೆ ವಿವರ : 29/07/2021 ರಂದು ಮಂಜುನಾಥ ಎನ್ನುವ ವ್ಯಕ್ತಿ ತನ್ನ ಹೆಂಡತಿ ಗೌರಮ್ಮನ ಮೇಲೆ ಅನುಮಾನಗೊಂಡು ಹಾಗೂ ತಂಗಿ ರಾಧಮ್ಮ ದಾರಿ ತಪ್ಪಿಸುತ್ತಿದ್ದಾಳೆಂದು ದ್ವೇಷದಿಂದ ಮಚ್ಚಿನಿಂದ ಇಬ್ಬರಿಗೂ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಸಂಬಂಧಿ ಚಂದ್ರಮ್ಮ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ವಿದ್ಯಾನಗರ ಪೊಲೀಸ್ ಠಾಣೆಯ ಸಿಪಿಐ ಗುರುಬಸವರಾಜ್ ತನಿಖೆ ನಡೆಸಿ ಆರೋಪಿ ಮಂಜುನಾಥ ಮಚ್ಚಿನಿಂದ ಇಬ್ಬರನ್ನು ಹೊಡೆದು ಕೊಲೆ ಮಾಡಿ ಕೊಲೆ ಮಾಡಲು ಬಳಸಿದ ಮಚ್ಚನ್ನು ಬಾಡಾಕ್ರಾಸ್ ಚರಂಡಿಯಲ್ಲಿ ಎಸೆದು, ಕೊಲೆ ಮಾಡಿದಾಗ ಧರಿಸಿದ ಬಟ್ಟೆಯನ್ನು ಬೆಂಗಳೂರು ನಗರದಲ್ಲಿ ಎಸೆದು ಸಾಕ್ಷ್ಯ ನಾಶ ಮಾಡಿದ್ದಾನೆ. ಕೊಲೆ ಮಾಡಲು ಎ2-ನಾಗರಾಜ ಎ3-ಮೇಘರಾಜ್ ರವರುಗಳು ಪ್ರಚೋದನೆ ಮಾಡಿರುವುದು ಸಾಕ್ಷಿಗಳ ಹೇಳಿಕೆಗಳಿಂದ, ಪರೀಕ್ಷಾವರದಿಗಳಿಂದ, ಇತರೆ ದಾಖಲೆಗಳಿಂದ ಕೃತ್ಯ ಎಸಗಿರುವುದು ತನಿಖೆಯಿಂದ ದೃಢಪಟ್ಟಮೇರೆಗೆ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿ ಸಲ್ಲಿಸಿದ್ದರು.
01 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ನ್ಯಾ. ಎಂ.ಹೆಚ್ ಅಣ್ಣಯ್ಯನವರ್ ಆರೋಪಿತನ ಮೇಲೆ ಆರೋಪ ಸಾಬೀತಾಗಿದ್ದರಿಂದ ಜು 7 ರಂದು ಎ1-ಮಂಜುನಾಥ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ 20,000/-ರೂ ದಂಡ ವಿಧಿಸಿದ್ದಾರೆ.
ಆರೋಪಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವುದರಿಂದ ಬಂಧನದ ಅವಧಿ ಪರಿಗಣಿಸಿ ಶಿಕ್ಷಾ ಅವಧಿ ಸೆಟ್ ಆಫ್ ಮಾಡಿ ಇನ್ನುಳಿದ ಶಿಕ್ಷೆಯನ್ನು ಆರೋಪಿಯು ಅನುಭವಿಸುವಂತೆ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಮೃತರ ತಂದೆ ಅಥವಾ ತಾಯಿಯವರಿಗೆ ಪ್ರಕರಣವನ್ನು ಪರೀಶಿಲನೆ ಮಾಡಿ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಮಾಡಿದ್ದಾರೆ.
Read also : Crime news | ಬಸ್ ಸ್ಟಾಂಡನಲ್ಲಿ ಕಳ್ಳತನ : ಇಬ್ಬರು ಮಹಿಳೆಯರ ಬಂಧನ
ಪ್ರಕರಣದಲ್ಲಿ ಸರ್ಕಾರಿ ವಕೀಲ ಸತೀಶ್ ಕೆ.ಎಸ್ ನ್ಯಾಯ ಮಂಡನೆ ಮಾಡಿದ್ದಾರೆ.
ತನಿಖಾಧಿಕಾರಿ ಹೆಚ್ .ಗುರುಬಸವರಾಜ್ ಈ ಹಿಂದೆ ತನಿಖೆ ಮಾಡಿದ 07 ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಆಗಿದ್ದು, ಇದು 08 ನೇ ಕೊಲೆ ಪ್ರಕರಣ ಜೀವಾವಧಿ ಶಿಕ್ಷೆ ಆಗಿದೆ.
ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ ತನಿಖಾಧಿಕಾರಿ ಹೆಚ್ . ಗುರುಬಸವರಾಜ್, ಸಿಪಿಐ ಕೇಂದ್ರ ವೃತ್ತ ರವರನ್ನು & ಸಿಬ್ಬಂದಿಗಳನ್ನು ಹಾಗೂ ಪರ್ಯಾದಿದಾರರ ಪರವಾಗಿ ನ್ಯಾಯಾಮಂಡನೆ ಮಾಡಿದ ಸರ್ಕಾರಿ ವಕೀಲ ಸತೀಶ್ ಕೆ.ಎಸ್ ಎಸ್ಪಿ ಉಮಾ ಪ್ರಶಾಂತ್ ಶ್ಲಾಘೀಸಿದ್ದಾರೆ.