ದಾವಣಗೆರೆ: ಮನುಷ್ಯ-ಮನುಷ್ಯರನ್ನೇ ಪ್ರೀತಿಸದೆ, ಸ್ವಾರ್ತದ ಭಾವನೆಗಳನ್ನು ಹೊಂದಿರುವ, ಕಂದಾಚಾರ, ಮೌಢ್ಯತೆ ತುಂಬಿರುವ ಕಾಲದಲ್ಲಿ ಅವುಗಳನ್ನು ಹೋಗಲಾಡಿಸುವ ಮೂಲಕ ಮನುಷ್ಯ-ಮನುಷ್ಯರನ್ನು ಪ್ರೀತಿಸುವಂತೆ ಬೆಸೆಯುವ ಕೆಲಸ ಮಾಡಿದವರು ಬ್ರಹ್ಮಶ್ರೀ ನಾರಾಯಣ ಗುರು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಭಾನುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂದು ಮನುಕುಲ ಕುಟುಂಬಕ್ಕೆ ಸಾರಿದವರು ಬ್ರಹ್ಮಶ್ರೀ ನಾರಾಯಣ ಗುರು. ಆ ಕಾಲದಲ್ಲಿ ಹಿಂದುಳಿದವರನ್ನು ಶೋಷಣೆ ಮಾಡಲಾಗುತ್ತಿತ್ತು. ಜೊತೆಗೆ ದೇವಸ್ಥಾನಗಳಿಗೆ ಪ್ರವೇಶವಿರಲಿಲ್ಲ. ಮೇಲು ಜಾತಿಯವರು ನಡೆಯುವ ದಾರಿಯಲ್ಲಿ ನಡೆಯುವಂತಿರಲಿಲ್ಲ. ಮಹಿಳೆಯರು ಕುಪ್ಪಸ ತೊಡುವಂತಿರಲಿಲ್ಲ. ಆಭರಣ ಧರಿಸುವಂತಿರಲಿಲ್ಲ. ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಸುಧಾರಣೆಗಾಗಿ ಬಂದ ಗುರುಗಳು ಕಂದಾಚಾರ, ಮೂಢನಂಬಿಕೆಗಳನ್ನು ಹೋಗಲಾಡಿಸಿ ಸಾಮಾಜಿಕ ಕ್ರಾಂತಿ ಮಾಡಿದವರು ನಾರಾಯಣ ಗುರು ಎಂದು ಬಣ್ಣಿಸಿದರು.
ವಿದ್ಯೆಯನ್ನು ಪಡೆದು ಸ್ವಾತಂತ್ರರಾಗಿರಿ, ಸಂಘಟನೆಯಿಂದ ಶಕ್ತಿವಂತರಾಗಿರಿ ಎಂಬ ಸಂದೇಶ ಸಾರಿದರು. ಮನುಷ್ಯ ಜಾತಿಯಿಂದ ದೊಡ್ಡವನಾಗುವುದಿಲ್ಲ. ಬದಲಾಗಿ ಆತ ಬದುಕಿನ ನೀತಿಯಿಂದ, ರೀತಿಯಿಂದ ದೊಡ್ಡವನಾಗುತ್ತಾನೆ ಎಂದು ತೋರಿಸಿಕೊಟ್ಟವರು ನಾರಾಯಣ ಗುರು ಎಂದರು.
ಬ್ರಹ್ಮಶ್ರೀ ನಾರಾಯಣ ಗುರು ಕೇವಲ ಒಂದು ಸಮುದಾಯಕ್ಕೆ ಗುರು ಅಲ್ಲ. ಅವರು ಮಾನವ ಜನಾಂಗದ ಗುರು. ಸಾಮಾಜಿಕ ಕ್ರಾಂತಿಯ ಹರಿಕಾರ. ತಮ್ಮ ಆಧ್ಯಾತ್ಮಿಕ ಚಿಂತನೆ ಮೂಲಕ ಮತಾಂತರವನ್ನು ತಪ್ಪಿಸಿದರು. ಸಮಾನತೆಯನ್ನು ತರುವ ನಿಟ್ಟಿನಲ್ಲಿ ಕ್ರಾಂತಿಕಾರಿ ಹೋರಾಟ ಮಾಡಿದರು. ಈ ಸಂದರ್ಭದಲ್ಲಿ ನಾರಾಯಣ ಗುರು ಜಯಂತಿ ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯ ಪಟ್ಟರು.
Read also : ರಾಣಿ ಅಬ್ಬಕ್ಕನ ದೇಶಪ್ರೇಮ ನಮಗೆಲ್ಲರಿಗೂ ಪ್ರೇರಣೆ : ಎನ್ ರವಿಕುಮಾರ್
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಪನಿರ್ದೇಶಕ ರವಿಚಂದ್ರ, ಈಡಿಗ ಸಮಾಜದ ಅಧ್ಯಕ್ಷರು ಹಾಗೂ ಮಹಾನಗರಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ್, ಸಮಾಜದ ಮುಖಂಡರಾದ ಶಂಕರ್, ಶಾಂತರಾಮ್, ದೇವೇಂದ್ರಪ್ಪ, ಲಕ್ಷ್ಮೀ ಸೇರಿದಂತೆ ಸಮಾಜದ ಬಂಧುಗಳು ಉಪಸ್ಥಿತರಿದ್ದರು.
ಜಾತಿ, ಧರ್ಮದ ಭೇದಗಳಿಲ್ಲದ ವಿಶ್ವಪ್ರಜ್ಞೆಯನ್ನು ಬೆಳೆಸಲು ಪ್ರೇರಣೆ
ನಾರಾಯಣ ಗುರುಗಳ ಸುಧಾರಣಾ ಚಳವಳಿ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಆಯಾಮಗಳನ್ನು ಪಡೆದುಕೊಂಡು ಕೇರಳದ ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು. ಅವರ ಆದರ್ಶಗಳು ಮತ್ತು ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಜಾತಿ, ಧರ್ಮದ ಭೇದಗಳಿಲ್ಲದ ವಿಶ್ವಪ್ರಜ್ಞೆಯನ್ನು ಬೆಳೆಸಲು ಪ್ರೇರಣೆಯಾಗಿದೆ.
-ಕೆ.ಎಸ್.ಬಸವಂತಪ್ಪ, ಮಾಯಕೊಂಡ ಶಾಸಕ.