ದಾವಣಗೆರೆ,ಫೆ.,7 : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, 2026 ರ ಮಾರ್ಚ್ 14 ರಂದು ದೇಶಾದ್ಯಂತ ಏಕಕಾಲದಲ್ಲಿ ವರ್ಷದ ಪ್ರಥಮ ‘ರಾಷ್ಟ್ರೀಯ ಲೋಕ ಅದಾಲತ್’ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ತಿಳಿಸಿದ್ದಾರೆ.
ರಾಷ್ಟ್ರೀಯ ಲೋಕ್ ಅದಾಲತ್ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿ ಕೊಳ್ಳಲು ಸುವರ್ಣಾವಕಾಶ ಕಲ್ಪಿಸಲಾಗಿದೆ. ಇದು ಶುಲ್ಕ ರಹಿತ ಸೇವೆಯಾಗಿದ್ದು ಲೋಕ ಅದಾಲತ್‍ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಯಾವುದೇ ನ್ಯಾಯಾಲಯದ ಶುಲ್ಕ ಇರುವುದಿಲ್ಲ. ಈಗಾಗಲೇ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪ್ರಕರಣ ಇತ್ಯರ್ಥವಾದ ನಂತರ ಪೂರ್ಣವಾಗಿ ಮರುಪಾವತಿಸಲಾಗುವುದು.
ತ್ವರಿತ ಮತ್ತು ಅಂತಿಮ ನ್ಯಾಯ: ಇಲ್ಲಿ ನೀಡಲಾಗುವ ತೀರ್ಪು ಸಿವಿಲ್ ನ್ಯಾಯಾಲಯದ ಡಿಕ್ರಿಗೆ ಸಮನಾಗಿದ್ದು, ಇದರ ವಿರುದ್ಧ ಮೇಲ್ಮನವಿಗೆ ಅವಕಾಶವಿರುವುದಿಲ್ಲ. ಇದರಿಂದ ಸಮಯ ಮತ್ತು ಹಣ ಉಳಿತಾಯವಾಗಲಿದೆ.
ಯಾರು ಗೆದ್ದವರಲ್ಲ, ಯಾರು ಸೋತವರಲ್ಲ: ಉಭಯ ಕಡೆಯವರು ಸೌಹಾರ್ದಯುತವಾಗಿ ರಾಜಿ ಮಾಡಿಕೊಳ್ಳುವುದರಿಂದ ವೈರತ್ವ ಕೊನೆಗೊಂಡು ಸಂಬಂಧಗಳು ಸುಧಾರಿಸುತ್ತವೆ.
ಸಿವಿಲ್ ಪ್ರಕರಣಗಳು: ಆಸ್ತಿ ವಿಭಾಗದ ದಾವೆಗಳು, ಗಡಿ ಸಮಸ್ಯೆ, ಬಾಡಿಗೆ ವಿವಾದ, ಚೆಕ್ ಬೌನ್ಸ್ ಪ್ರಕರಣಗಳು ಮತ್ತು ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು.
ಅಪರಾಧಿಕ ಪ್ರಕರಣಗಳು: ಕಾನೂನಿನಡಿ ರಾಜಿ ಮಾಡಿಕೊಳ್ಳಬಹುದಾದ ಸಣ್ಣಪುಟ್ಟ ಹೊಡೆದಾಟ, ವಿದ್ಯುತ್ ಕಳ್ಳತನ, ಅಬಕಾರಿ ಮತ್ತು ಅಕ್ರಮ ಮರಳು ಗಣಿಗಾರಿಕೆಯ ಕೆಲವು ಪ್ರಕರಣಗಳು.
ಕೌಟುಂಬಿಕ ವಿವಾದಗಳು: ವಿಚ್ಛೇದನ ಹೊರತುಪಡಿಸಿ ಉಳಿದ ವೈವಾಹಿಕ ಸಮಸ್ಯೆಗಳು ಹಾಗೂ ಜೀವನಾಂಶದ ಪ್ರಕರಣಗಳು. ಮೋಟಾರು ವಾಹನ ಅಪಘಾತ ಪರಿಹಾರ, ಕಾರ್ಮಿಕ ವಿವಾದಗಳು, ನೀರಿನ ಮತ್ತು ವಿದ್ಯುತ್ ಬಿಲ್ ಬಾಕಿ ಪ್ರಕರಣಗಳು.
ನ್ಯಾಯಾಲಯದಲ್ಲಿ ಈಗಾಗಲೇ ಪ್ರಕರಣ ಬಾಕಿ ಇದ್ದರೆ ಕಕ್ಷಿದಾರರು ತಮ್ಮ ವಕೀಲರ ಮೂಲಕ ಅಥವಾ ನೇರವಾಗಿ ನ್ಯಾಯಾಲಯಕ್ಕೆ ಮೌಖಿಕವಾಗಿ ವಿನಂತಿಸಿ ಪ್ರಕರಣವನ್ನು ಲೋಕ ಅದಾಲತ್‍ಗೆ ವರ್ಗಾಯಿಸಿಕೊಳ್ಳಬಹುದು. ವ್ಯಾಜ್ಯ ಪೂರ್ವ ಪ್ರಕರಣಗಳಿದ್ದರೆ ಜಿಲ್ಲಾ ಅಥವಾ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
Read also : ಗ್ರಾಮ ಪಂಚಾಯತ್‍ಗಳ ಸ್ವಾಯತ್ತತೆ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ
“ನ್ಯಾಯಾಲಯಗಳ ಅಲೆದಾಟ ತಪ್ಪಿಸಿ, ನೆಮ್ಮದಿಯ ಜೀವನ ನಡೆಸಲು ಲೋಕ ಅದಾಲತ್ ಅತ್ಯುತ್ತಮ ವೇದಿಕೆಯಾಗಿದೆ. ಸಾರ್ವಜನಿಕರು, ವಕೀಲರು, ವಿವಿಧ ಇಲಾಖೆಗಳು ಹಾಗೂ ವಿಮಾ ಕಂಪನಿಗಳು ಈ ಜನತಾ ನ್ಯಾಯಾಲಯಕ್ಕೆ ಪೂರ್ಣ ಬೆಂಬಲ ನೀಡಿ ಇದರ ಸದುಪಯೋಗ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತಾಲ್ಲೂಕು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಅಥವಾ ಉಚಿತ ಸಹಾಯವಾಣಿ ಸಂಖ್ಯೆ 15100 ಕ್ಕೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
