ದಾವಣಗೆರೆ (Davangere): ಸುರಕ್ಷತೆ ನಿರ್ಲಕ್ಷ್ಯದಿಂದ ದಿನನಿತ್ಯ ದೇಶದೆಲ್ಲೆಡೆ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಗಂಟೆಗೆ 20 ಜನರು ಮೃತಪಡುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಕಳವಳ ವ್ಯಕ್ತಪಡಿಸಿದರು.
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಹಾಗೂ ಸಪ್ತಾಹದ ಅಂಗವಾಗಿ ಪೊಲೀಸ್ ಇಲಾಖೆ ವತಿಯಿಂದ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬುಧವಾರ ಏರ್ಪಡಿಸಿದ್ದ ಬೈಕ್ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ, ಮಾತನಾಡಿದರು.
2024ರಲ್ಲಿ ದೇಶದಲ್ಲಿ ನಡೆದಿರುವ 4 ಲಕ್ಷ ಅಪಘಾತಗಳಲ್ಲಿ ರಸ್ತೆ ಸುರಕ್ಷತಾ ಕ್ರಮ ಪಾಲಿಸದ ಕಾರಣ 1.70 ಲಕ್ಷ ಜನರು ಮೃತಪಟ್ಟಿದ್ದಾರೆ. ಆದ್ದರಿಂದ ವಾಹನ ಓಡಿಸುವ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಹಾಕುವುದು ಸೇರಿದಂತೆ ಎಲ್ಲ ಬಗೆಯ ರಸ್ತೆ ಸುರಕ್ಷತಾ ಕ್ರಮ ಪಾಲಿಸಬೇಕು ಎಂದರು.
ಜ.1ರಿಂದ 31ರ ವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಹಾಗೂ ಜ.11ರಿಂದ 17ರ ವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದ್ದು, `ಬೀ ಎ ರೋಡ್ ಸೇಫ್ಟಿ ಹೀರೋ’ ಎಂಬುದು ಈ ವರ್ಷದ ಘೋಷಣೆಯಾಗಿದೆ. ಹಾಗಾಗಿ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿ ಎಲ್ಲ ಜನರು ನೂರಕ್ಕೆ ನೂರು ಸಂಚಾರ ನಿಯಮ ಪಾಲಿಸಬೇಕು ಎಂದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ಜಾಥಾದಲ್ಲಿ ಬೈಕ್‍ಗಳಲ್ಲಿ ಸಾಗಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ರಿಂಗ್ ರಸ್ತೆ, ಲಕ್ಷ್ಮೀ ಪ್ಲೋರ್ ಮಿಲ್, ಗುಂಡಿ ಮಹಾದೇವಪ್ಪ ವೃತ್ತ, ವಿದ್ಯಾರ್ಥಿ ಭವನ, ಹದಡಿ ರಸ್ತೆ ಸೇರಿದಂತೆ ಹಲವೆಡೆ ಸಂಚರಿಸಿ ರಸ್ತೆ ಸುರಕ್ಷಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಜಾಥಾದಲ್ಲಿ ಎಎಸ್ಪಿಗಳಾದ ವಿಜಯಕುಮಾರ್ ಎಂ. ಸಂತೋಷ, ಜಿ. ಮಂಜುನಾಥ, ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ಸಿಪಿಐಗಳಾದ ಲಕ್ಷಣ್‍ನಾಯ್ಕ, ನಲವಾಗಲು ಮಂಜುನಾಥ, ಶಿಲ್ಪಾ, ಅಶ್ವಿನ್‍ಕುಮಾರ್, ಸುನೀಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Read also : ಮಣ್ಣು ಮಾಫಿಯಾ : ವಿದ್ಯುತ್ ಪ್ರಸರಣದ ಬೃಹತ್ ಟವರ್ ಗೆ ಗಂಡಾಂತರ