ಅದೇನೋ ಏನೋ, ತೊಂಭತ್ತರ ದಶಕವೆಂದರೆ ಅದೆಂಥದೋ ಸ್ಪೀಡು.ಒಂದ್ಕಡೆ ಮಂಡಲ್ ವರದಿ ಜಾರಿಗಾಗಿ ಹೋರಾಟ ನಡೆಯುತ್ತಿದ್ದರೆ ಮತ್ತೊಂದ್ಕಡೀಗೆ ಕಮಂಡಲ ಹಿಡಿದು ಹೊರಟ ರಥಯಾತ್ರೆ. ಜಾಗತೀಕರಣ,ಉದಾರೀಕರಣ,ಖಾಸಗೀಕರಣಗಳ ಅಂಬೆಗಾಲು ಪ್ರವೇಶವು ಹುಟ್ಟುಹಾಕುತ್ತಿದ್ದ ಚರ್ಚೆಗಳು ಹೂವಿನಹಡಗಲಿಯೆಂಬ ಮಲ್ಲಿಗೆಯ ಪರಿಮಳದಷ್ಟೇ ಬೇಗ ಪಸರಿಸಿಬಿಟ್ಟಿತು.
ಬಿ.ಎಸ್.ಸಿ. ಓದುತ್ತಿದ್ದ ನನಗೆ, ಪ್ರಿಯ ಸ್ನೇಹಿತರೆ…,ಎಂದು ವಿದ್ಯಾರ್ಥಿಗಳನ್ನು ಸಂಬೋಧಿಸಿ ಪಾಠ ಶುರುಮಾಡುತ್ತಿದ್ದ ಮಹೇಶ್ವರಪ್ಪ ಎಂಬ ಸಮಾಜಶಾಸ್ತ್ರದ ಮೇಷ್ಟ್ರ ಪಾಠ ಬಹಳ ಅಪ್ಯಾಯಮಾನವಾಗಿ ಕೇಳಿಸುತ್ತಿತ್ತು.ಹಾಗಾಗಿ ನೀರಸವೆನಿಸಿದ ಶಾಸ್ತ್ರಿ ಲೆಕ್ಚರರ್ ಗಣಿತಶಾಸ್ತ್ರದ ಕ್ಲಾಸಿಗೆ ಚಕ್ಕರ್ ಹಾಕಿ ಕಿಕ್ಕಿರಿದು ನೆರೆದಿರುತ್ತಿದ್ದ ಇಂತಹ ಕ್ಲಾಸುಗಳೆ ಚೇತೋಹಾರಿಯಾಗಿ ಕಾಣಿಸುತ್ತಿದ್ದವು.
ಗೌರ್ಮೆಂಟ್ ಲೈಬ್ರೆರಿಯ ಕಟ್ಟೆ ಮೇಲೆ ನಡೆಯುತ್ತಿದ್ದ ಚರ್ಚೆಗಳು ಎಲ್ಲಿಂದೆಲ್ಲಿಗೋ ಕರೆದೊಯ್ಯುತ್ತಿದ್ದವು.ಓದು,ಬರೆಹ,ನಾಟಕ,ಚಳುವಳಿಗಳ ಕುರಿತು ಈ ಚರ್ಚೆಗಳಿಗೆ ಇಂಥದ್ದೇ ಸೀಮಿತ ಸಮಯವೆಂದು ಇರಲಿಲ್ಲ.ಸೋವಿಯತ್ ರಷಿಯಾದ ವಿದ್ಯಮಾನಗಳನ್ನು ಇಲ್ಲೇ ನಮ್ಮೂರಲ್ಲೆ ನಡೆಯುತ್ತಿರುವ ಹಾಗೆ ಮಂಡಿಸುವ ಅಪ್ರತಿಮ ಮಾತುಗಾರರು ಇದ್ದರು.ದೇವರ ಚರ್ಚೆ, ರಾಜಕಾರಣಿಗಳ ರಂಗುರಂಗಿನ ಕಥೆಗಳು,
ವಸ್ತುನಿಷ್ಟ ಟೀಕೆಗಳು…ಎಲ್ಲವೂ ಸೇರಿ,ಹೂವಿನ ಹಡಗಲಿ ಎಂಬ ಊರು ಓಪನ್ ಯುನಿವರ್ಸಿಟಿ ಆಗಿಹೋಗಿತ್ತು.
ಹೂವಿನ ಹಡಗಲಿಯ ಗೌರ್ನಮೆಂಟ್ ಆಸ್ಪತ್ರೆಯ ಎದುರಿಗೆ ಅದೊಂದು ದಿನ ಜನವೋ ಜನ. ಕರಿ-ಕಪ್ಪು ,ಬಿಳಿಗಡ್ಡಗಳ ಮಾಸಿದ ಅಂಗಿ ಪಂಚೆಗಳ ಜನ.ಅಲ್ಲೊಬ್ಬ ಇಲ್ಲೊಬ್ಬರಂತೆ ಸುಧಾರಿಸಿದ ಬಟ್ಟೆ ಧರಿಸಿದ ಕೆಲವು ಜನರೂ ಇದ್ದರು.ಎಲ್ಲರ ಹೆಗಲ ಮೇಲೂ ಹಸಿರು ಟವೆಲ್ಲುಗಳಿದ್ದವು.ಮಣ್ಣು ಮೆತ್ತಿದ ಬರಿಕಾಲಲಿ ಬಂದ ರೈತರೇ ಹೆಚ್ಚಾಗಿರುವಂತೆ ಕಾಣಿಸುತ್ತಿತ್ತು.ಬಡ ರೈತ ಮುಖಂಡ ಗೂಡುಸಾಬ್ ಹೊಸ ಸಾಹಸಕ್ಕೆ ಕೈ ಹಾಕಿದ್ದರು.
ಕೈಯ್ಯಲ್ಲಿ ಗಣೇಶ ಬೀಡಿ ಹೊಗೆ ಬಿಡುತ್ತಲೇ ದೇಶ ವಿದೇಶಗಳ ಆಗುಹೋಗುಗಳ ಬಗ್ಗೆ ಮಾತನಾಡಬಲ್ಲವರಂತೆ ತೋರುತ್ತಿದ್ದ ಗೂಡೂಸಾಬರ ದೊಗಲೆ ಪೈಜಾಮದೊಳಗೆ ಅದೆಷ್ಟು ಬೀಡಿಕಟ್ಟುಗಳಿದ್ದವೋ? ಬಂದವರಿಗೆಲ್ಲ ಮಾತಾಡಿಸಿ ಕೇಳಿದವರಿಗೆಲ್ಲ ಬೀಡಿ ಕೊಟ್ಟು, ತನ್ನ ಬಾಯಿ ಬೀಡಿಯಿಂದಲೆ ಅವರ ಬೀಡಿಗೂ ಹಚ್ಚಿ ಪುಸಪುಸನೆ ಹೊಗೆ ಬಿಟ್ಟರೆ ಅಲ್ಲಿಗೆ ಒಂದು ಧಮ್ ಮಾತಿಗೆ ವೇದಿಕೆ ಸಿದ್ಧವಾಯಿತೆಂದೇ ತಿಳಿಯಬೇಕು.
ಅಸಲಿಗೆ,ಈ ಗೂಡುಸಾಬರಿಗೆ ಇರಲೊಂದು ಗೂಡು,ಐದೆಕರೆಯಷ್ಟು ಬೆದ್ಲು ಹೊಲ ಬಿಟ್ಟರೆ ಮತ್ತೇನೂ ಇರಲಿಲ್ಲ.ಅದೇನೋ ಏನೋ ರೈತಸಂಘದ ನಂಜುಂಡಸ್ವಾಮಿಯವರ ಮಾತಿಗೆ ಶರಣಾಗಿ ಕ್ರಾಂತಿಯ ಕನಸು ಕಂಡು,ನನಸಾಗಿಸಲು ಹರಸಾಹಸಪಡುತ್ತಿರುವವನಂತೆ ಕಾಣಿಸುತಿದ್ದ ಗೂಡುಸಾಬರಿಗೆ ಏನೇನೋ ಕನಸುಗಳಿದ್ದವು.
ಇಂಥ ಗೂಡುಸಾಬರಿಗೆ ಸ್ವಾಮ್ ಸ್ವಾಮವಾರದ ದಿನ ಹಡಗಲಿಗೆ ಬಂದು ಬ್ಯಾಸಾಯದ ಕುಳ,ಕೂರಿಗಿ,ಸಾಮಾನು,ಬಿತ್ತನೆ ಬೀಜ,ಗೊಬ್ಬರ ಎಂದೆಲ್ಲಾ ಓಡಾಡಿ ಹಸಿದ ರೈತರಿಗೆ ಒಂದ್ರುಪಾಯಿಯಲ್ಲಿ ಊಟ ಕೊಡಬೇಕೆಂದು ಯಾವಾಗ ನಿರ್ಧರಿಸಿದರೋ ಏನೋ,ತಾನೇ ಸ್ವಂತ ಬೆಳೆದ ಜ್ವಾಳವನ್ನೆಲ್ಲ ಚೀಲಗಟ್ಟಳೆ ಗಿರಣಿಗೆ ಹಾಕಿಸಿ ಹಿಟ್ಟು ಮಾಡಿಸಿದ.ಮನೆಯ ಹೆಣ್ಣುಮಕ್ಕಳನ್ನು ರೊಟ್ಟಿ ಬಡಿಯಲು ಹಚ್ಚಿದ.ಹಳ್ಳಿಗಳಿಂದ ಹಾಲು ತೋರಿಸಿ ಹೆಪ್ಪಾಕಿ ಮೊಸರು ಮಾಡಿದ.
ಹುಚ್ಚಣ್ಣಶೆಟ್ಟರ ಅಂಗಡಿಯಿಂದ ಗುರೆಳ್ಳು ತಂದು ಹುರಿದು ಚಟ್ನಿ ಪುಡಿ ಮಾಡಿಸಿದ.ಹೆಸರು ಕಾಳು,ಮಡಕೆ ಕಾಳುಗಳನ್ನೂ ಸ್ಟಾಕ್ ಮಾಡಿಟ್ಟುಕೊಂಡಿದ್ದ.ಹೀಗೆ ಎಲ್ಲ ತಯಾರಿ ಆದ ನಂತರ ಒಂದು ದಿನ ಹೀಗೆ “ರೈತರಿಗಾಗಿ ಒಂದ್ರುಪಾಯಿಗೊಂದೂಟದ ಹೋಟೆಲ್”ಎಂದು ಹಸಿರು ಇಂಕಿನಲ್ಲಿ ಬರೆದ ಅಕ್ಷರಗಳು ರಾರಾಜಿಸತೊಡಗಿದವು.
ದಿನವೂ ಮಧ್ಯಾಹ್ನವಷ್ಟೇ ನಡೆಯುತ್ತಿದ್ದ ಹೋಟೆಲಿನಲ್ಲಿ, ಎರಡು ರೊಟ್ಟಿ,ಒಂದು ಕಪ್ ಗಟ್ಟಿ ಮೊಸರು,ಒಂದು ಕಾಳುಪಲ್ಯ ಇಷ್ಟೆಲ್ಲದಕೂ ಕೇವಲ ಒಂದು ರೂಪಾಯಿ ನಾಣ್ಯ ಪಡೆಯುತ್ತಿದ್ದ ಗೂಡುಸಾಬರಿಗೆ ಆ ಹೋಟೆಲನ್ನು ಬಹುದಿನಗಳ ಕಾಲ ನಡೆಸಲಾಗಲಿಲ್ಲ.ಸುತ್ತ ಮುತ್ತ ಊರುಗಳ ಸಣ್ಣ ಪತ್ರಿಕೆಗಳಂತೆಯೇ ದಿನ ಬಿಟ್ಟು ದಿನ,ವಾರ ಬಿಟ್ಟು ವಾರ,
ಕೊನೆಗೊಂದು ದಿನ ಗೂಡೂಸಾಬರು ಏದುಸಿರು ಬಿಡುವಂತಾಗಿ ಒಂದು ದಿನ ಮುಚ್ಚಿಹೋಯಿತು.ಹಾಗೆ ಮುಚ್ಚಿದ ಒಂದೆರೆಡು ದಿನಕ್ಕೆ ಯಾರೊ ತಟ್ಟಿ ಹೋಟೆಲಿನ ಗಳ ಕೂಡ ಬಿಡದಂತೆ ಎತ್ತಿಕೊಂಡು ಹೋಗಿದ್ದರು.
ಅದೇ ರೋಡಿನಿಂದ ಕಾಲೇಜಿಗೆ ಹೋಗುತ್ತಿದ್ದ ನಾನು,ಆ ಜಾಗದ ಕಡೆ ಒಮ್ಮೆಯಾದರೂ ಕಣ್ಣು ಹಾಯಿಸಿ ಮುಂದೆ ಹೋಗುತ್ತಿದ್ದೆ. ಆಗ ,ರೊಟ್ಟಿ ಬಡಿಯುವ ಸದ್ದು,ಗುರೆಳ್ಳನ್ನು ಉರಿಯುವ ಘಮಘಮದ ವಾಸನೆಯ ಪರಿಮಳವೂ ಗಾಳಿಯಲ್ಲಿ ತೇಲಿ ಬರುತ್ತಿತ್ತು.
ಈ ಹೊತ್ತಿನ “ಪ್ರಸಾದ” “ಭೋಜನ” ಹಾಗೂ “ದಾಸೋಹ”ಗಳೆಂಬ ಶಬ್ದಗಳ ಮುಂದೆ ಗೂಡೂಸಾಬರ ಶೇವ್ ಮಾಡದ ಆ ಮುಖ ,ಅರ್ಧ ಸೇದಿ ಇನ್ನೂ ಹೊಗೆಯಾಡುತ್ತಿರುವ ಗಣೇಶ ಬೀಡಿಯಿಂದಲೇ ಮತ್ತೊಬ್ಬ ರೈತನು ಬೀಡಿ ಹಚ್ಚಿಕೊಳ್ಳುತ್ತಿರುವ ಚಿತ್ರ ಕಣ್ಮುಂದೆ ಬರುತ್ತಿದೆ.
ಒಮ್ಮೆಯಾದರೂ ಒಂದ್ರುಪಾಯಿ ರೊಟ್ಟಿ ಹೋಟೆಲಿಗೆ ಹೋಗಿ ಉಣ್ಣಬೇಕೆಂಬ ನನ್ನ ಆಸೆ ,ಬಡರೈತರಿಗಾಗಿಯೇ ಇರುವ ಕಾರಣಕ್ಕೋ ,ನನ್ನ ಕೀಳರಿಮೆಯ ಕಾರಣಕ್ಕೋ ಕನಸಾಗಿಯೇ ಉಳಿದು ಬಿಟ್ಟಿತು.
ಏನೋ ಮಾಡಾಕೋದೆ ಸಾ…ಕ್ಷಮ್ಸಿ ಬುಡಿ ಸಾ…ನಡಸಾಕಾಗಲಿಲ್ಲ,ಎಂದು ಅಸಹಾಯಕನಂತೆ ನಿಂತ ಗೂಡುಸಾಬರನ್ನೊಮ್ಮೆ ಗಟ್ಟಿಯಾಗಿ ತಬ್ಬಿಕಕೊಂಡು,
ನಾನೊಂದು ದಿನ ಬರುವೆ ,ನನ್ನ ದುಡಿಮೆಯ ಕಾಸಿನಲ್ಲಿ ನಿಮಗೊಂದಿಷ್ಟು ರೊಕ್ಕ ಕೊಡುವೆ…ಹೋಟೆಲು ನಡೆಸೋಣ …ಎಂದು ಈಗ ಗಟ್ಟಿಯಾಗಿ ಕೂಗಬೇಕೆನಿಸುತ್ತಿದೆ.
ಬಿ.ಶ್ರೀನಿವಾಸ