ಬೆಂಗಳೂರು : ಸಾಮಾಜಿಕವಾಗಿ ಜಾಗೃತರಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಪಾಸ್ ವಿಥೌಟ್ ಹಿಂದಿ ಕಾನೂನು ಜಾರಿ ಮಾಡಿಸಬೇಕು, ರಾಜ್ಯ ಮಕ್ಕಳಿಗೆ ಹಿಂದಿ ಹೇರಿಕೆಯಿಂದ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕಿದೆ ಎಂದು ಪತ್ರಕರ್ತ ಪಾರ್ವತೀಶ್ ಹೇಳಿದರು.
ಕರ್ನಾಟಕ ಶಾಲಾ ಶಿಕ್ಷಣದಲ್ಲಿ ಪಾಸ್ ವಿಥೌಟ್ ಹಿಂದಿ ಕಾನೂನು ಜಾರಿಗೆ ಕನ್ನಡ ಪರ ಸಂಘಟನೆಗಳು ಸಭೆಯಲ್ಲಿ ಮಾತನಾಡಿದರು.
ಹಿಂದಿ ವಿಷಯವನ್ನು ಶಾಲಾ ಶಿಕ್ಷಣದಲ್ಲಿ ಅನವಶ್ಯಕವಾಗಿ ಹೇರಿಕೆ ಮಾಡಿ, ಕಡ್ಡಾಯವಾಗಿ ಪಾಸು ಮಾಡಬೇಕೆಂಬ ಕಾನೂನು ಮಾಡಿದ ಪರಿಣಾಮ ಕರ್ನಾಟಕದಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಅವರಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವ್ಯಾಸಂಗದಿಂದ ವಂಚಿತರಾಗುತ್ತಿದ್ದಾರೆ. ಈ ಕಾಲಮಾನದಲ್ಲಿ ಎಜುಕೇಶನ್ ಡ್ರಾಪೌಟ್ ಆಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವುದು ದುರದೃಷ್ಟಕರ, ಅವರ ಜೀವನ ಸುಸ್ಥಿತಿಗೆ ಬರಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇಂತಹ ವಿದ್ಯಾರ್ಥಿಗಳು ಜಾತಿ ಮತದ ರಾಜಕೀಯಕ್ಕೆ ಬಲಿಯಾಗುತ್ತಾರೆ. ನೆಲದ ನುಡಿಯಾಗಿ ಕನ್ನಡ ಮತ್ತು ಸಂಪರ್ಕ ನುಡಿಯಾಗಿ ಇಂಗ್ಲೀಷನ್ನು ಕಲಿಸುವ ಎರಡು ನುಡಿ ಶಿಕ್ಷಣ ಪದ್ಧತಿ ಜಾರಿಯಾಗಬೇಕು ಎಂದರು.
ನಾವು ದ್ರಾವಿಡ ಕನ್ನಡಿಗರು ಚಳುವಳಿಯ ಮುಖಂಡ ಅಭಿ ಒಕ್ಕಲಿಗ ಮಾತನಾಡಿ, ಪ್ರಸ್ತುತದಲ್ಲಿ ಹಿಂದಿ ಹೇರಿಕೆ ತಡೆಯುವುದು ಮತ್ತು ಶಾಲಾ ಪಠ್ಯಕ್ರಮದಲ್ಲಿ ಹಿಂದಿ ತೆಗೆಸುವುದು ಮುಖ್ಯ ಆದ್ಯತೆ ಆಗಬೇಕು. ಹಿಂದಿ ಹೇರಿಕೆ ಎಲ್ಲ ಮಟ್ಟದಲ್ಲಿಯೂ ಆಗುತ್ತಿದೆ, ಹಿಂದಿ ಅನಾವಶ್ಯಕವಾಗಿ ಹೇರಿಕೆ ಮಾಡಿ ಕನ್ನಡ ಮಕ್ಕಳಿಗೆ ಶಿಕ್ಷಣವನ್ನು ಭಾರಗೊಳಿಸುವ ಕೆಲಸ ರಾಜ್ಯ ಸರ್ಕಾರದಿಂದ ಮತ್ತು ಒಕ್ಕೂಟ ಸರ್ಕಾರದಿಂದ ನಡೆಯುತ್ತಿದೆ. ನಮ್ಮ ಮಕ್ಕಳು ಹಿಂದಿ ಕಲಿತು ನಾರ್ತ್ ಇಂಡಿಯಾಗೆ ಹೋಗುತ್ತಿಲ್ಲ, ನಾರ್ತ್ ಇಂಡಿಯಾದವರೇ ಕರ್ನಾಟಕಕ್ಕೆ ಅತಿಯಾಗಿ ವಲಸೆ ಬರುತ್ತಿದ್ದಾರೆ.
Read also : ದೆಹಲಿಯಲ್ಲಿ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ಮಂಜುನಾಥ್ ಗೌಡ ನೇತೃತ್ವದಲ್ಲಿ ರಾಜ್ಯದ ಕಾರ್ಯಕರ್ತರ ಭಾಗಿ
ವಲಸಿಗರು ಕನ್ನಡ ಕಲಿಯದೇ ಹಿಂದಿ ಹೇರಿಕೆಯ ಜೊತೆ ದಬ್ಬಾಳಿಕೆಯನ್ನು ಸಹ ಮಾಡುತ್ತಿದ್ದಾರೆ. ಇವುಗಳನ್ನು ತಡೆಯಲು ಮೊದಲ ಹಂತವಾಗಿ ಕರ್ನಾಟಕ ಶಾಲಾ ಶಿಕ್ಷಣದಲ್ಲಿ ಹಿಂದಿ ವಿಷಯವನ್ನು ತೆಗೆಸಬೇಕು ಅದಕ್ಕೆ ಸಂಬಂಧಪಟ್ಟಂತೆ ಈ ವರ್ಷ ಹಿಂದಿ ವಿಥೌಟ್ ಪಾಸ್ ಕಾನೂನು ಜಾರಿ ಮಾಡಿಸುವುದು ಅತ್ಯವಶ್ಯಕ ಎಂದರು.
ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್, ಜೈಶಂಕರ್, ರಾಧಾಕೃಷ್ಣ, ಮಂಜು ಗಣಪತಿಪುರ ,ಚೇತನ್ ಕರಪ, ಮಂಜು ಬುದ್ಧಿಸ್ಟ್, ಬಸವರಾಜ್ ನಾಯಕ್, ಸಚಿನ್ ಒಕ್ಕಲಿಗ ಮುಂತಾದ ಕನ್ನಡಪರ ಸಂಘಟನೆಗಳ ಮುಖಂಡರು ಮತ್ತು ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತಿಯಲ್ಲಿದ್ದರು.
ವರದಿಗಾರಿಕೆ
ದರ್ಶನ್ ಕುರುಬಾಸ್
ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ
ಕೇರಳ ವಿಶ್ವವಿದ್ಯಾಲಯ, ತಿರುವನಂತಪುರಂ.
