ಮೊನ್ನೆ ದಿಲ್ಲಿಯಿಂದ ಬಂದ ವರ್ತಮಾನದ ಪ್ರಕಾರ ಕಾಂಗ್ರೆಸ್ ವರಿಷ್ಟರು ಚಿಂತೆಗೆ ಬಿದ್ದಿದ್ದಾರೆ.ಈ ಮುಂಚೆ ರಾಹುಲ್ ಗಾಂಧಿ ಅವರಿಗಷ್ಟೇ ಸೀಮಿತವಾಗಿದ್ದ ಈ ಚಿಂತೆ ಈಗ ಎಐಸಿಸಿ ಅಧ್ಯಕ್ಷರಾದ ಮಲ್ಲಿ ಕಾರ್ಜುನ ಖರ್ಗೆ ಅವರನ್ನೂ ಸುತ್ತಿಕೊಂಡಿದೆ.
ಅಂದ ಹಾಗೆ ಒಪ್ಪಂದದ ಪ್ರಕಾರ, ಎರಡೂವರೆ ವರ್ಷಗಳ ನಂತರ ನನಗೆ ಸಿಎಂ ಹುದ್ದೆ ಕೊಡಿಸಬೇಕು ಅಂತ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಕಿದ ಪಟ್ಟು ರಾಹುಲ್ ಗಾಂಧಿಯವರ ಚಿಂತೆಗೆ ಕಾರಣವಾಗಿತ್ತು.
ಯಾಕೆಂದರೆ ಸಿಎಂ ಸಿದ್ಧರಾಮಯ್ಯ ಅವರು ಅಹಿಂದ ವರ್ಗಗಳ ಸಾಲಿಡ್ಡು ನಾಯಕ.ಅಂತವರನ್ನು ಕೆಳಗಿಳಿಸಿದರೆ ಪಕ್ಷದ ಮತ ಬ್ಯಾಂಕ್ ದುರ್ಬಲವಾಗುತ್ತದೆ ಎಂಬುದು ಅವರ ಆತಂಕ.
ಈ ಆತಂಕ ರಾಹುಲ್ ಗಾಂಧಿ ಅವರಲ್ಲಿದ್ದುದನ್ನು ಪಕ್ಕಾ ಮಾಡಿಕೊಂಡ ಸೋನಿಯಾಗಾಂಧಿ ಅವರು:’ಅಧಿಕಾರ ಹಂಚಿಕೆ ವಿಷಯದಲ್ಲಿ ಸ್ಪಷ್ಟತೆ ಇಲ್ಲದಿದ್ದರೆ ಈ ಕುರಿತು ಎಐಸಿಸಿ ಅಧ್ಯಕ್ಷರಿಗೆ ಜವಾಬ್ದಾರಿ ವಹಿಸಬೇಕು. ಅವರು ಸಿಎಂ ಮತ್ತು ಡಿಸಿಎಂ ಜತೆ ಮಾತನಾಡಿ ಒಂದು ತೀರ್ಮಾನಕ್ಕೆ ಬರಲಿ.ಆನಂತರ ಅಂತಿಮ ನಿರ್ಧಾರಕ್ಕೆ ಬಂದರಾಯಿತು’ಅಂತ ಸೂಚಿಸಿದ್ದರಂತೆ.
ತಾಯಿಯ ಈ ಮಾತಿನ ಪ್ರಕಾರ ರಾಹುಲ್ ಗಾಂಧಿಯವರು ನೇರವಾಗಿಯೇ ಖರ್ಗೆಯವರ ಜತೆ ಮಾತನಾಡಿದ್ದಾರೆ.ಅಧಿಕಾರ ಹಂಚಿಕೆ ಒಪ್ಪಂದ ಎಂಬುದು ನನ್ನ ಸಮ್ಮುಖದಲ್ಲಿ ನಡೆದ ಬೆಳವಣಿಗೆಯಲ್ಲ.
ಆದರೆ ಈ ಬೆಳವಣಿಗೆ ನಡೆದಿದ್ದೇ ಆಗಿದ್ದರೆ ನೀವು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರನ್ನೂ ಒಟ್ಟಿಗೆ ಕೂರಿಸಿ ಮಾತನಾಡಿ.ಅದರ ಅಧಾರದ ಮೇಲೆ ತೀರ್ಮಾನ ತೆಗೆದು ಕೊಂಡರಾಯಿತು’ ಎಂದಿದ್ದರು.
ಆದರೆ ರಾಹುಲ್ ಗಾಂಧಿಯವರು ಈ ಸೂಚನೆ ನೀಡಿದ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಚಿಂತೆ ಶುರುವಾಗಿದೆ.ಮೂಲಗಳ ಪ್ರಕಾರ,ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ವಹಿಸಿಕೊಡುವ ವಿಷಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸಹಮತವಿದೆ.ಆದರೆ ಈ ವಿಷಯವನ್ನು ಖಡಕ್ಕಾಗಿ ಹೇಳಿದರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂಬ ಅತಂಕವೂ ಇದೆ.
ಯಾಕೆಂದರೆ ಎಷ್ಟೇ ಆದರೂ ಸಿದ್ಧರಾಮಯ್ಯ ಡೀಪ್ ರೂಟೆಡ್ ಲೀಡರು.ನೀವು ಸಿಎಂ ಹುದ್ದೆ ಬಿಟ್ಟು ಕೊಡಿ ಅಂತ ಟಫ್ ಆಗಿ ಹೇಳಿದರೆ ‘ಯಸ್,ಸಿಎಂ ಹುದ್ದೆ ಬಿಟ್ಟು ಕೊಡಲು ನಾನು ರೆಡಿ.
ಆದರೆ, ನಾನು ತೆರವು ಮಾಡುವ ಜಾಗಕ್ಕೆ ದಲಿತ ನಾಯಕರು ಬರಬೇಕು’ಅಂತ ಅವರು ಪಟ್ಟು ಹಿಡಿದರೆ? ಆಗ ಇಡೀ ಎಪಿಸೋಡು ಉಲ್ಟಾ ಆಗುತ್ತದೆ.ಅರ್ಥಾತ್,ಡಿಸಿಎಂ ಡಿ.ಕೆ. ಶಿವಕುಮಾರ್ ಕೆರಳುತ್ತಾರೆ.ಒಂದು ವೇಳೆ ಸಿದ್ಧರಾಮಯ್ಯ ಅವರ ಮಾತನ್ನು ಒಪ್ಪಿದರೂ,ಒಪ್ಪದೆ ಹೋದರೂ ಕಾಂಗ್ರೆಸ್ ಪಕ್ಷದ ಮತ ಬ್ಯಾಂಕ್ ಛಿದ್ರವಾಗುತ್ತದೆ.ಹಾಗಾಗಬಾರದು ಎಂಬುದು ಖರ್ಗೆಯವರ ಚಿಂತೆ.
ಹೀಗಾಗಿ ಅವರು ಅಧಿಕಾರ ಹಂಚಿಕೆ ಎಪಿಸೋಡು ಕೂಲ್ ಆಗಿ ನಡೆಯಬೇಕು ಎಂದರೆ ಮೊದಲು ಸಿದ್ಧರಾಮಯ್ಯ ಅವರ ಮನ ಒಲಿಸಲೇಬೇಕು ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆ. ಈ ಮನವೊಲಿಕೆಯ ಕಾರ್ಯ ಬಜೆಟ್ ಮಂಡನೆಯ ನಂತರವೂ ಆಗಬಹುದು.
ಇಲ್ಲವೇ ಕೇರಳ, ಪಶ್ಚಿಮ ಬಂಗಾಳ,ತಮಿಳುನಾಡು ಸೇರಿದಂತೆ ಹಲ ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರವಾದರೂ ಆಗಬಹುದು ಎಂಬುದು ಅವರ ಲೆಕ್ಕಾಚಾರ. ಅರ್ಥಾತ್,ಮೇ ತಿಂಗಳು ಕಳೆಯು ವವರೆಗೆ ಸಿದ್ಧರಾಮಯ್ಯ ಅವರನ್ನು ಅಲುಗಾಡಿಸುವುದು ಕಷ್ಟ ಎಂಬುದು ಸಧ್ಯದ ಮಾಹಿತಿ.
ಕುತೂಹಲದ ಸಂಗತಿ ಎಂದರೆ ದಿಲ್ಲಿಯ ಈ ಬೆಳವಣಿಗೆಗಳು ಏನೇ ಇರಲಿ.ಆದರೆ 2025-26 ನೇ ಸಾಲಿನ ರಾಜ್ಯ ಬಜೆಟ್ ನ್ನು ನಾನು ಮಂಡಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಇದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ವೈಬ್ರೆಂಟ್ ಕರ್ನಾಟಕದ ಕನಸು (Political analysis)
ಅಂದ ಹಾಗೆ ಮಲ್ಲಿಕಾರ್ಜುನ ಖರ್ಗೆ ಅವರ ಮನಸ್ಸಿನಲ್ಲಿರುವ ಈ ಯೋಚನೆ ಡಿ.ಕೆ. ಶಿವಕುಮಾರ್ ಅವರಿಗೆ ಗೊತ್ತಿಲ್ಲ ಅಂತೇನಲ್ಲ.ಆದರೆ ಬಜೆಟ್ ಮಂಡನೆಯ ಅವಕಾಶವನ್ನು ಕಳೆದುಕೊಳ್ಳಲು ಅವರು ಸಿದ್ದರಿಲ್ಲ.
ಕಾರಣ? ಒಂದು ಸರ್ಕಾರದ ನಾಲ್ಕು ಮತ್ತು ಐದನೇ ಬಜೆಟ್ ಗಳಿಗೆ ಅಂತಹ ಮಹತ್ವವಿಲ್ಲ.ಕನಿಷ್ಟ ಪಕ್ಷ ಮೂರನೇ ಬಜೆಟ್ ಮಂಡಿಸಲು ಅವಕಾಶ ಸಿಕ್ಕರೆ ಇಡೀ ದೇಶವೇ ಕರ್ನಾಟಕ ದತ್ತ ತಿರುಗಿ ನೋಡುವಂತೆ ಮಾಡಬಹುದು. ಈ ಹಿಂದೆ ನರೇಂದ್ರ ಮೋದಿ ಅವರು ವೈಬ್ರೆಂಟ್ ಗುಜರಾತ್ ಎಂಬ ಹವಾ ಎಬ್ಬಿಸಿ ರಾಷ್ಟ್ರ ರಾಜಕಾರಣಕ್ಕೆ ನುಗ್ಗಿದರಲ್ಲ? ಅದೇ ರೀತಿ ವೈಬ್ರೆಂಟ್ ಕರ್ನಾಟಕದ ಹವಾ ಎಬ್ಬಿಸಿ ಮುಂದೆ ದಿಲ್ಲಿಗೆ ನುಗ್ಗಬಹುದು ಎಂಬುದು ಅವರ ಯೋಚನೆ.
ಇಂತಹ ಯೋಚನೆ ಇರುವ ಕಾರಣಕ್ಕಾಗಿಯೇ ಅವರು ದುಬೈ, ಕೇರಳ,ಆಂಧ್ರ ಸೇರಿದಂತೆ ದೇಶ-ವಿದೇಶಗಳ ಉದ್ಯಮಿಗಳ ಜತೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದಾರೆ.ತಮ್ಮ ವೈಬ್ರೆಂಟ್ ಕರ್ನಾಟಕದ ಕನಸನ್ನು ನನಸು ಮಾಡಲು ಏನೇನು ಮಾಡಬಹುದು? ಅಂತ ಸಲಹೆ ಪಡೆಯುತ್ತಿದ್ದಾರೆ.
ಅವರ ಆಪ್ತರ ಪ್ರಕಾರ, ಮುಖ್ಯಮಂತ್ರಿಯಾದರೆ ಕರ್ನಾಟಕವನ್ನು ದೇಶದ ಆರ್ಥಿಕ ಕೇಂದ್ರವನ್ನಾಗಿ ಮಾಡುವುದು ಡಿಕೆಶಿ ಲೆಕ್ಕಾಚಾರ.ರಾಜ್ಯಾದ್ಯಂತ ಕೈಗಾರಿಕಾ ಕಾರಿಡಾರುಗಳು, ಹೊಸ ಏರ್ ಪೋರ್ಟುಗಳು, ಈಗ ಜಾರಿ ಮಾಡಲು ಬಯಸಿರುವ ಟನೆಲ್ ರೋಡುಗಳಿಗಿಂತ ಅದ್ದೂರಿಯಾದ ಯೋಜನೆಗಳನ್ನು ಜಾರಿಗೊಳಿಸುವುದು ಡಿಕೆಶಿ ಯೋಚನೆ. ಆದರೆ ಇಂತಹ ಯೋಚನೆ ಕಾರ್ಯಗತವಾಗಬೇಕು ಎಂದರೆ ಈ ಸಲದ ಬಜೆಟ್ ಮಂಡನೆ ನನಗೆ ಸಾಧ್ಯವಾಗಲೇಬೇಕು ಎಂಬುದು ಅವರ ಯೋಚನೆ.
ಅಂದ ಹಾಗೆ ಇಷ್ಟೆಲ್ಲ ಕನಸಿಟ್ಟುಕೊಂಡಿರುವ ಡಿ.ಕೆ.ಶಿವಕುಮಾರ್ ಅವರಿಗೆ ತಾವು ಇಡೀ ದೇಶದ ಗಮನ ಸೆಳೆಯುವ ನಾಯಕರಾಗಿ ಬೆಳೆಯಬೇಕು ಎಂಬ ಹಠವಿದೆ.ಹೀಗಾಗಿ ದೇಶದ ಯಾವುದೇ ಭಾಗದಲ್ಲಿ ಗಮನ ಸೆಳೆಯುವ ಬೆಳವಣಿಗೆ ನಡೆದರೆ ಡಿಕೆಶಿ ಅಲ್ಲಿ ಹಾಜರಿರುತ್ತಾರೆ.
ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗರ್ಗ್ ನಿಧನರಾದ ನಂತರ ಅವರ ಅಂತಿಮ ನಮನದ ಕಾರ್ಯಕ್ರಮಕ್ಕೆ ಹೋದ ಡಿಕೆಶಿ, ಜುಬೀನ್ ಗರ್ಗ್ ಅವರ ಪತ್ನಿಗೆ ಸಾಂತ್ವನ ಹೇಳಿ ಬಂದಿದ್ದರು.
ಕಾಂಗ್ರೆಸ್ ಪಕ್ಷದ ನಿಲುವೇನೇ ಇದ್ದರೂ ಕುಂಭಮೇಳಕ್ಕೆ ಹೋಗಿದ್ದಲ್ಲದೆ ಪುಣ್ಯ ಸ್ವಾನ ಮಾಡಿ ದೇಶದ ಗಮನ ಸೆಳೆದಿದ್ದರು. ಇದೇ ರೀತಿ ಐಪಿಎಲ್ ನಲ್ಲಿ ಅರ್.ಸಿ.ಬಿ ತಂಡ ಗೆದ್ದಾಗ ಜಗತ್ತಿನ ಹಲವು ದೇಶಗಳು ಅದರತ್ತ ನೋಡುತ್ತಿವೆ ಅಂತ ಅರ್.ಸಿ.ಬಿ ತಂಡ ಬೆಂಗಳೂರಿಗೆ ಬಂದಾಗ ಅದನ್ನು ಸ್ವಾಗತಿಸಲು ಹೋಗಿದ್ದರು.
ಇನ್ನು ತೆಲಂಗಾಣದಲ್ಲಿ ಬಂಡವಾಳ ಹೂಡಿಕೆದಾರರ ಸಭೆ ನಡೆದರೆ ಅಲ್ಲಿ ಡಿಕೆಶಿಯೇ ಚೀಫ್ ಗೆಸ್ಟು.ಬಿಹಾರದ ವಿಧಾನಸಭೆಗೆ ಚುನಾವಣೆ ನಡೆದಾಗ ಅಲ್ಲಿಗೆ ಡಿಕೆಶಿ ಹೋಗಿದ್ದೇ ಹೋಗಿದ್ದು.ಅರ್ಥಾತ್,ದೇಶದ ಯಾವ ಭಾಗದಲ್ಲಿ ಗಮನ ಸೆಳೆಯುವ ಚಟುವಟಿಕೆ ಇದ್ದರೂ ಡಿಕೆಶಿ ಅಲ್ಲಿ ಉಪಸ್ಥಿತರಿದ್ದು ಎಲ್ಲರ ಗಮನ ಸೆಳೆಯುತ್ತಾರೆ.ಇದು ಕೂಡಾ ತಾವು ದೇಶವೇ ಗುರುತಿಸಬಲ್ಲ ನಾಯಕ ಅಂತ ತೋರಿಸುವ ಟೆಕ್ನಿಕ್ಕು.
ಹೀಗೆ ದೊಡ್ಡ ರೇಂಜು ತಲುಪುವ ಕನಸಿಟ್ಟುಕೊಂಡ ಡಿ.ಕೆ.ಶಿವಕುಮಾರ್ 2025-26 ನೇ ಸಾಲಿನ ರಾಜ್ಯ ಬಜೆಟ್ ನ್ನು ತಾವೇ ಮಂಡಿಸಬೇಕು ಅಂತ ಪಟ್ಟು ಹಿಡಿದಿದ್ದಾರೆ.ಹಾಗೆಯೇ ತಮ್ಮ ವೈಬ್ರೆಂಟ್ ಕರ್ನಾಟಕದ ಕನಸು ಈಡೇರಿದರೆ ಮಾತ್ರ 2028 ರ ವಿಧಾನಸಭಾ ಚುನಾವಣೆಯಲ್ಲೂ ಪಕ್ಷ ಗೆಲ್ಲಲಿದೆ ಅಂತ ದಿಲ್ಲಿಗೆ ಮೆಸೇಜು ತಲುಪಿಸುತ್ತಿದ್ದಾರೆ.ಆದರೆ ಇದು ಸಾಧ್ಯವಾಗುತ್ತದಾ ಗೊತ್ತಿಲ್ಲ.ಕಾಲವೇ ಉತ್ತರ ಹೇಳಬೇಕು.
ಯುದ್ಧಕ್ಕೆ ಸಜ್ಜಾದ ಮಿತ್ರರು (Political analysis)
ಇನ್ನು ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳ ನಡುವೆ ಸಾಮರಸ್ಯ ಸಾಧಿಸಲು ಸಮನ್ವಯ ಸಮಿತಿ ರಚನೆಯಾಗಲಿದೆ.ಇಂತಹ ಸಮನ್ವಯ ಸಮಿತಿ ರಚಿಸುವ ಬಗ್ಗೆ ಸ್ವತ: ಅಮಿತ್ ಶಾ ಹೆಚ್ಚಿನ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಹೀಗೆ ಸಮನ್ವಯ ಸಮಿತಿ ರಚನೆಯ ಕಾಲ ಹತ್ತಿರವಾಗುತ್ತಿದ್ದಂತೆಯೇ ಕುಮಾರಸ್ವಾಮಿ-ವಿಜಯೇಂದ್ರ ಉತ್ಸುಕರಾಗಿದ್ದರೆ, ರಾಜ್ಯ ಬಿಜೆಪಿಯ ಕೆಲ ನಾಯಕರಿಗೆ ಆತಂಕ ಕಾಡುತ್ತಿದೆ. ಕಾರಣ? ಸಮನ್ವಯ ಸಮಿತಿ ರಚನೆಯಾಗಿ ಕುಮಾರಸ್ವಾಮಿ ಅವರಿಗೆ ಪ್ರಾಮಿನೆನ್ಸು ಹೆಚ್ಚಾದರೆ ತಮ್ಮ ಶಕ್ತಿ ಕುಸಿಯುತ್ತದೆ ಎಂಬುದು ಇವರ ಆತಂಕ.
ಸಮನ್ವಯ ಸಮಿತಿ ರಚನೆಯ ಬಗ್ಗೆ ಬಿಜೆಪಿ ಪಾಳಯದಲ್ಲಿ ಇಂತಹ ಮಿಶ್ರ ಭಾವನೆ ಇದ್ದರೂ ಜೆಡಿಎಸ್ ಪಾಳಯದಲ್ಲಿ ಹರ್ಷದ ವಾತಾವರಣ ಕಾಣಿಸಿಕೊಂಡಿದೆ. ಕಾರಣ? ಚುನಾವಣೆ ಯಲ್ಲಿ ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋಗುವುದರಿಂದ ಲಾಭ ಜಾಸ್ತಿ ಎಂಬುದು.ಹಾಗಂತ ಜೆಡಿಎಸ್ ನಾಯಕರು ಮಿತಿ ಮೀರಿದ ಆಸೆ ಇರಿಸಿಕೊಂಡಿಲ್ಲ.
ಬದಲಿಗೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಬಿಜೆಪಿ ಬಲ ಹೆಚ್ಚಿರುವುದರಿಂದ ಈಗ ಬರುವ 369 ವಾರ್ಡುಗಳ ಪೈಕಿ 70 ವಾರ್ಡುಗಳನ್ನು ತಮಗೆ ಬಿಟ್ಟು ಕೊಡುವಂತೆ ಕೇಳಬೇಕು. ಕನಿಷ್ಟ 50 ಸೀಟುಗಳು ಸಿಕ್ಕರೆ ಗರಿಷ್ಟ ವಾರ್ಡುಗಳಲ್ಲಿ ಗೆಲುವು ಸಾಧಿಸಬೇಕು ಎಂಬುದು ಜೆಡಿಎಸ್ ನಾಯಕರ ಲೆಕ್ಕಾಚಾರ.
ಎಲ್ಲಕ್ಕಿಂತ ಮುಖ್ಯವಾಗಿ ಮೈತ್ರಿಧರ್ಮ ಪಾಲನೆಯಾದರೆ ಇನ್ನೂರಕ್ಕೂ ಹೆಚ್ಚು ವಾರ್ಡುಗಳಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಬಹುದು ಎಂಬುದು ಅವರ ಯೋಚನೆ.
ಯಡಿಯೂರಪ್ಪ ಇಲ್ಲಿ ಸೆಟ್ಲಾಗಲಿದ್ದಾರೆ (Political analysis)
ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಹೆಚ್ಚು ಸಮಯ ಕಳೆಯಲು ನಿರ್ಧರಿಸಿದ್ದಾರೆ.ಇತ್ತೀಚೆಗೆ ಶಿಕಾರಿಪುರದಿಂದ ಬಂದಿದ್ದ ಪಕ್ಷದ ನಿಯೋಗ ವೇ ಇದಕ್ಕೆ ಮುಖ್ಯ ಕಾರಣ.
ಹೀಗೆ ಬಂದ ನಿಯೋಗದಲ್ಲಿದ್ದವರು ಯಡಿಯೂರಪ್ಪ ಅವರ ಬಳಿ ತಮ್ಮ ದುಗುಡವನ್ನು ತೋಡಿಕೊಂಡರಂತೆ.ಇವತ್ತು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನಿಮ್ಮ ಪುತ್ರ ವಿಜಯೇಂದ್ರ ಅವರಿಗೆ ಕ್ಷೇತ್ರದ ಕಡೆ ಬರಲು ಹೆಚ್ಚು ಸಮಯ ಸಿಗುತ್ತಿಲ್ಲ.ಬಿಜೆಪಿ ರಾಜ್ಯಾಧ್ಯಕ್ಷ ರಾಗಿರುವುದರಿಂದ ಅವರ ಕಷ್ಟ ನಮಗೂ ಅರ್ಥವಾಗುತ್ತದೆ.ಅದರೆ ಕ್ಷೇತ್ರದ ಜನರಿಗೆ ತಮ್ಮ ಅಹವಾಲು ಹೇಳಿಕೊಳ್ಳಲು ಎಮ್ಮೆಲ್ಲೆಇರಲೇಬೇಕು.
ಅಭಿವೃದ್ಧಿ ಕೆಲಸಗಳೇನೋ ಅದರ ಪಾಡಿಗೆ ಆಗುತ್ತಿವೆ. ಆದರೆ ಕ್ಷೇತ್ರದಲ್ಲಿ ನಡೆಯುವ ಸಭೆ,ಸಮಾರಂಭಗಳಿಗೆ,ಮದುವೆಯಂತಹ ಕಾರ್ಯಗಳಿಗೆ ಶಾಸಕರು ಬರಬೇಕು ಅನ್ನುವ ಒತ್ತಾಯ ಇರುತ್ತದೆ ಅಂತ ನಿಯೋಗದ ಪ್ರಮುಖರು ಹೇಳಿದಾಗ ಅರೆಕ್ಷಣ ಸುಮ್ಮನಿದ್ದ ಯಡಿಯೂರಪ್ಪನವರು:’ಯೋಚಿಸಬೇಡಿ ಸುಮ್ಮನಿರಿ.ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಅವರು ರಾಜ್ಯ ಪ್ರವಾಸ ಮಾಡುವುದು,ಪಕ್ಷ ಸಂಘಟನೆ ಮಾಡುವುದು ಅನಿವಾರ್ಯ.
ಮತ್ತು ಅದಕ್ಕಾಗಿ ಹೆಚ್ಚು ಸಮಯ ಕೊಡುವುದೂ ಅನಿವಾರ್ಯ.ಹೀಗಾಗಿ ಇನ್ನು ಮುಂದೆ ಕ್ಷೇತ್ರದಲ್ಲಿ ನಾನೇ ಬೀಡು ಬಿಡುತ್ತೇನೆ.ತಿಂಗಳಲ್ಲಿ ಕನಿಷ್ಟ ಪಕ್ಷ ಹದಿನೈದು ದಿನ ಇರುತ್ತೇನೆ. ತೀರಾ ಅನಿವಾರ್ಯ ಅಂದಾಗ ವಿಜಯೇಂದ್ರ ಬರಲಿ ಎಂದಿದ್ದಾರೆ.ಅಷ್ಟೇ ಅಲ್ಲ ಹೆಚ್ವು ಕಡಿಮೆ ಹದಿನೈದು ದಿನಗಳಿಂದ ಶಿಕಾರಿಪುರದಲ್ಲೇ ಸೆಟ್ಲ್ ಆಗಿದ್ದಾರೆ.
ಆರ್.ಟಿ.ವಿಠ್ಠಲಮೂರ್ತಿ
