ಕಳೆದ ವಾರ ದಿಲ್ಲಿಯಿಂದ ಬಂದ ವರ್ತಮಾನ ಯಡಿಯೂರಪ್ಪ ಅವರಿಗೆ ಕಸಿವಿಸಿ ಉಂಟು ಮಾಡಿದೆಯಂತೆ. ಅದರ ಪ್ರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಂದು ಪ್ರಪೋಸಲ್ಲನ್ನು ಯಡಿಯೂರಪ್ಪ ಮುಂದಿಡಲಿದ್ದಾರೆ. ಕರ್ನಾಟಕದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿರುವುದನ್ನು ಬಹುತೇಕ ಹಿರಿಯ ನಾಯಕರು ಇಷ್ಟಪಡುತ್ತಿಲ್ಲ.
ಹೀಗಾಗಿ ವಿಜಯೇಂದ್ರ ಅವರನ್ನು ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೆ ನಿಯೋಜನೆ ಮಾಡಿ, ನಿಮ್ಮ ಹಿರಿಯ ಮಗ ರಾಘವೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದರೆ ಹೇಗೆ? ಎಂಬುದು ಅಮಿತ್ ಶಾ ಮುಂದಿಡಲಿರುವ ಪ್ರಪೋಸಲ್ಲು. ಹೀಗೆ ಅಮಿತ್ ಶಾ ಅವರು ಹೊಸ ಪ್ರಪೋಸಲ್ಲಿನೊಂದಿಗೆ ಎಂಟ್ರಿ ಆಗಲಿದ್ದಾರೆ ಎಂಬ ವರ್ತಮಾನ ಕೇಳಿದ ನಂತರ ಯಡಿಯೂರಪ್ಪ ಅವರಿಗೆ ಕಸಿವಿಸಿ ಶುರುವಾಗಿದೆ.
ಇವತ್ತು ವಿಜಯೇಂದ್ರ ಅವರ ಜಾಗಕ್ಕೆ ರಾಘವೇಂದ್ರ ಬಂದು ಕುಳಿತರೆ ಯಡಿಯೂರಪ್ಪ ಇಷ್ಟಪಡುವುದಿಲ್ಲ ಅಂತೇನಲ್ಲ. ಆದರೆ ಇಂತಹ ಪ್ರಪೋಸಲ್ಲು ಪಕ್ಷದ ಮೇಲೆ ತಮಗಿರುವ ಹಿಡಿತವನ್ನು ಕಡಿಮೆ ಮಾಡುವ ತಂತ್ರ ಎಂಬುದು ಅವರ ಯೋಚನೆ. ಅಂದ ಹಾಗೆ ಕಳೆದ ತಿಂಗಳು ಕರ್ನಾಟಕಕ್ಕೆ ಬಂದ ಅಮಿತ್ ಶಾ ಅವರು ವಿಜಯೇಂದ್ರ ಅವರ ವಿಷಯದಲ್ಲಿ ಒಂದಷ್ಟು ಪಾಸಿಟಿವ್ ಆಗಿಯೇ ಇದ್ದರು.ಅಷ್ಟೇ ಅಲ್ಲ, ಪಕ್ಷದ ನಾಯಕರನ್ನು ನೀವು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ.ಮೊದಲು ಅದನ್ನು ಸರಿಪಡಿಸಿಕೊಳ್ಳಿ ಅಂತ ಹೇಳಿ ಹೋಗಿದ್ದರು.
ಇದಾದ ನಂತರ ವಿಜಯೇಂದ್ರ ಅವರು ಪಕ್ಷದಲ್ಲಿರುವ ಅಸಮಾಧಾನಿತರ ಜತೆ ಸಂಧಾನದ ಪ್ರಯತ್ನ ನಡೆಸಿದ್ದು ನಿಜವಾದರೂ ಅದು ಹೇಳಿಕೊಳ್ಳುವಂತಹ ಫಲ ನೀಡಿಲ್ಲ. ಹೀಗಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಮತ್ತು ಮಾಜಿ ಸಿಎಂ ಡಿ.ವಿ.ಸದಾನಂದಗೌಡರ ಪ್ಯಾಚಪ್ ಪ್ರಯತ್ನಗಳೂ ವರ್ಕ್ ಔಟ್ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಪರಿಣಾಮ? ವಿಜಯೇಂದ್ತ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಲೇಬೇಕು ಎಂಬ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಒಂದು ಅಯೋಮಯ ವಾತಾವರಣ ಸೃಷ್ಟಿಯಾಗಿದೆ. ಪರಿಣಾಮ? ಕರ್ನಾಟಕದಲ್ಲಿ ವಿಜಯೇಂದ್ರ ಅವರನ್ನು ಪಕ್ಷಾಧ್ಯಕ್ಷ ಸ್ಥಾನದಿಂದ ಇಳಿಸದೆ ದಾರಿಯಿಲ್ಲ ಅಂತ ಯೋಚಿಸುತ್ತಿರುವ ಮೋದಿ-ಅಮಿತ್ ಶಾ ಜೋಡಿ,ಅದೇ ಕಾಲಕ್ಕೆ ಮತ್ತೊಂದು ಚಿಂತೆಗೂ ಬಿದ್ದಿದೆ.
ಅದೆಂದರೆ ವಿಜಯೇಂದ್ರ ಅವರನ್ನು ಕೆಳಗಿಳಿಸಿದರೆ ಯಡಿಯೂರಪ್ಪ ತಿರುಗಿ ಬೀಳುತ್ತಾರೆ. ಹಾಗಾದಾಗ ಕರ್ನಾಟಕದಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂಬುದು. ಹೀಗಾಗಿ ಪಕ್ಷದ ಕೆಲ ನಾಯಕರ ಸಲಹೆ ಪಡೆದ ಈ ಜೋಡಿ ಯಡಿಯೂರಪ್ಪ ಅವರ ಮುಂದೆ ಹೊಸ ಪ್ರಪೋಸಲ್ಲು ಇಡಲು ನಿರ್ಧರಿಸಿದೆ.ಅರ್ಥಾತ್, ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ತಾನದಿಂದ ಇಳಿಸಿ,ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಈ ಜಾಗಕ್ಕೆ ತಂದರೆ ಹೇಗೆ?ಎಂಬುದು ಅದರ ಪ್ರಪೋಸಲ್ಲು. ಹೀಗೆ ಅದು ರೆಡಿ ಮಾಡಿದ ಪ್ರಪೋಸಲ್ಲು ಅಮಿತ್ ಶಾ ಅವರ ಮೂಲಕ ತಮಗೆ ತಲುಪಲಿದೆ ಎಂಬ ವರ್ತಮಾನ ಯಾವಾಗ ತಮ್ಮ ಕಿವಿಗೆ ಬಿತ್ತೋ?ಇದಾದ ನಂತರ ಯಡಿಯೂರಪ್ಪ ವಿಚಲಿತರಾಗಿದ್ದಾರೆ.
ಕಾರಣ? ವಿಜಯೇಂದ್ರ ಅವರನ್ನು ಇಳಿಸಿ ರಾಘವೇಂದ್ರ ಅವರನ್ನು ತರುತ್ತೇವೆ ಎಂಬುದೇ ತಮ್ಮ ಸುತ್ತ ಹೆಣೆಯುವ ಜಾಲ. ಮೊದಲನೆಯದಾಗಿ ವಿಜಯೇಂದ್ರ ಅವರ ಜಾಗಕ್ಕೆ ರಾಘವೇಂದ್ರ ಅವರು ಬಂದರೆ ಪಕ್ಷದ ಮೇಲಿನ ಹಿಡಿತ ಕೈ ತಪ್ಪುತ್ತದೆ. ಯಾಕೆಂದರೆ ರಾಘವೇಂದ್ರ ಅವರು ವಿಜಯೇಂದ್ರ ಅವರಂತೆ ಅಗ್ರೆಸಿವ್ ಅಲ್ಲ.ಇವತ್ತು ಅಗ್ರೆಸಿವ್ ಆಗಿರದಿದ್ದರೆ ಪಕ್ಷದ ಮೇಲೆ ಹಿಡಿತ ಹೊಂದಲು ಸಾಧ್ಯವಿಲ್ಲ. ಒಂದು ಸಲ ಹೀಗೆ ಹಿಡಿತ ಕಳೆದುಕೊಂಡರೆ ರಾಘವೇಂದ್ರ ಕೂಡಾ ತುಂಬ ಕಾಲ ಅಧ್ಯಕ್ಷರಾಗಿ ಮುಂದುವರಿಯಲು ಸಾಧ್ಯವಿಲ್ಲ.
ಅರ್ಥಾತ್,ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ತಮ್ಮ ವಿರೋಧಿ ಬಣದ ನಾಯಕರೊಬ್ಬರು ಸೆಟ್ಲಾಗಿರುತ್ತಾರೆ ಎಂಬುದು ಯಡಿಯೂರಪ್ಪ ಅವರ ಅನುಮಾನ.
ಸಂಸದರ ಪಡೆ ಎದ್ದು ನಿಂತಿದೆ (Political analysis)
ಅಂದ ಹಾಗೆ ಅಮಿತ್ ಶಾ ಕರ್ನಾಟಕಕ್ಕೆ ಬಂದು ಹೋದ ನಂತರ ವಿಜಯೇಂದ್ರ ಸೇಫ್ ಎಂಬ ಭಾವನೆ ಇತ್ತಲ್ಲ? ಈ ಭಾವನೆ ದಿನ ಕಳೆದಂತೆ ಕಡಿಮೆಯಾಗಲು ಏನು ಕಾರಣ? ಹಾಗಂತ ಹುಡುಕುತ್ತಾ ಹೋದರೆ ಕಣ್ಣಿಗೆ ಕಾಣುವುದು ಸಂಸದರ ಪಡೆ.ಇವತ್ತು ಕರ್ನಾಟಕದಿಂದ ಸಂಸತ್ತಿಗೆ ಆಯ್ಕೆಯಾದ ಬಿಜೆಪಿಯ ಹದಿನೇಳು) @ ಸಂಸದರ ಪೈಕಿ ಬಹುತೇಕ ಮಂದಿ ವಿಜಯೇಂದ್ರ ಅವರನ್ನು ಇಷ್ಟ ಪಡುತ್ತಿಲ್ಲ.
ಒಂದು ಕಾಲದಲ್ಲಿ ಯಡಿಯೂರಪ್ಪ ಅವರಿಗೆ ಅಂಟಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಂದರ ರಾಜ ಧನಾನಂದನ ಮೇಲೆ ಚಾಣಕ್ಯ ಮುನಿಸಿಕೊಂಡಂತೆ ಯಡಿಯೂರಪ್ಪ ಅವರ ವಿರುದ್ಧ ಮುನಿಸಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಯಡಿಯೂರಪ್ಪ-ವಿಜಯೇಂದ್ರ ಏನೇನು ಪ್ರಯತ್ನ ಮಾಡಿದ್ದರು?ಇತ್ತೀಚಿನ ಉಪಚುನಾವಣೆಯಲ್ಲಿ ತಮ್ಮ ಮಗ ಭರತ್ ಸೋಲಲು ಹೇಗೆ ಕಾರಣರಾದರು? ಎಂಬುದನ್ನು ನೆನೆಸಿಕೊಂಡಾಗಲೆಲ್ಲ ಬೊಮ್ಮಾಯಿ ಕ್ರುದ್ದರಾಗುತ್ತಾರೆ. ಅಷ್ಟೇ ಅಲ್ಲ,ಇವತ್ತು ವಿಜಯೇಂದ್ರ ಅವರನ್ನು ಪಟ್ಟದಿಂದ ಕೆಳಗಿಳಿಸಲು ಸಜ್ಜಾಗಿರುವ ಸಂಸದರ ಪಡೆಯ ಮುಂಚೂಣಿಯಲ್ಲಿ ಬಂದು ನಿಂತಿದ್ದಾರೆ.
ಇದೇ ರೀತಿ ಚಿಕ್ಕಬಳ್ಳಾಪುರದ ಸಂಸದ ಡಾ.ಕೆ.ಸುಧಾಕರ್ ಅವರಿಗೆ ವಿಜಯೇಂದ್ರ ಅವರ ಮೇಲೆ ಮಿತಿಮೀರಿದ ಸಿಟ್ಟಿದೆ.ತಮ್ಮ ಜಿಲ್ಲೆಗೆ ನುಗ್ಗಿ ತಮ್ಮನ್ನು ಡೆಮ್ಮಿ ಮಾಡಲು ವಿಜಯೇಂದ್ರ ನಡೆಸಿದ ಪ್ರಯತ್ನ ಕನಲಿ ಹೋಗುವಂತೆ ಮಾಡಿದೆ. ಇನ್ನು ತುಮಕೂರಿನಲ್ಲಿ ಗೆದ್ದು ಕೇಂದ್ರ ಸಚಿವರಾಗಿರುವ ವಿ.ಸೋಮಣ್ಣ ಅವರನ್ನಂತೂ ಕೇಳುವುದೇ ಬೇಡ.ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಯಡಿಯೂರಪ್ಪ-ವಿಜಯೇಂದ್ರ ಏನೇನು ಮಾಡಿದರು? ಲಿಂಗಾಯತ ನಾಯಕತ್ವಕ್ಕೆ ತಾವು ಅಡ್ಡಿಯಾಗಬಾರದು ಅಂತ ಹೇಗೆಲ್ಲಾ ಹಣಿಯಲು ಯತ್ನಿಸಿದರು?ಎಂಬುದು ಸೋಮಣ್ಣ ಆಕ್ರೋಶದ ಮೂಲ.
ಇನ್ನು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರಿಗೂ ಯಡಿಯೂರಪ್ಪ-ವಿಜಯೇಂದ್ರ ಬಗ್ಗೆ ಸಿಟ್ಟು ಬಂದಿದೆ. ದಲಿತರ ಕೋಟಾದಲ್ಲಿ ತಾವು ಕೇಂದ್ರ ಸಚಿವರಾಗುವ ಅವಕಾಶಕ್ಕೆ ಯಡಿಯೂರಪ್ಪ ಇಂಬು ನೀಡಲಿಲ್ಲ ಎಂಬುದು ಅವರ ಅಸಮಾಧಾನದ ಮೂಲ. ಬಾಗಲಕೋಡೆಯ ಪಿ.ಸಿ.ಸಿದ್ಧನಗೌಡರ್ ಅವರ ಸಿಟ್ಟಿಗೂ ಇಂತಹದೇ ಸಿಟ್ಟು ಕಾರಣ. ಸತತ ಮೂರು ಬಾರಿ ಸಂಸದರಾದ ತಮಗೆ ಕೇಂದ್ರ ಸಂಪುಟದಲ್ಲಿ ಜಾಗ ಕೊಡಿಸಲು ಶಿಫಾರಸು ಮಾಡಿ ಅಂತ ಗದ್ದಿಗೌಡರ್ ಅವರು ಯಡಿಯೂರಪ್ಪ ಅವರನ್ನು ಕೋರಿದ್ದರಂತೆ. ಆದರೆ ಅವರ ಕೋರಿಕೆಯನ್ನು ತಿರಸ್ಕರಿಸಿದ ಯಡಿಯೂರಪ್ಪ ಅವರು:ಈ ಸಲ ನಮ್ಮ ರಾಘವೇಂದ್ರ ಮಂತ್ರಿ ಆಗಿಬಿಡಲಿ.ನೀವು ಸ್ವಲ್ಪ ದಿನ ಕಾಯಿರಿ ಎಂದಿದ್ದರಂತೆ.
ಅಂದ ಹಾಗೆ ಯಡಿಯೂರಪ್ಪ ಅವರ ಬಯಕೆಯಂತೆ ರಾಘವೇಂದ್ರ ಕೇಂದ್ರ ಮಂತ್ರಿ ಮಂಡಲಕ್ಕೆ ಸೇರಲಿಲ್ಲ ಎಂಬುದು ಬೇರೆ ಮಾತು.ಆದರೆ ಸಮಯ ಬಂದರೆ ಯಡಿಯೂರಪ್ಪ ತಮ್ಮ ಮಕ್ಕಳ ಪರ ನಿಲ್ಲುತ್ತಾರೆಯೇ ಹೊರತು ನಮ್ಮ ಜತೆಗಲ್ಲ ಎಂಬುದು ಗದ್ದಿಗೌಡರ್ ಅವರಿಗೆ ಕನ್ ಫರ್ಮ್ ಆಗಿದೆ. ಹೀಗಾಗಿ ಅವರಿಗೆ ವಿರೋಧಿ ಗ್ಯಾಂಗಿನಲ್ಲಿ ನೆಲೆಯಾಗಿದ್ದಾರೆ ಎಂಬುದು ಮೂಲಗಳ ಮಾತು. ಇದೇ ರೀತಿ ಬಿಜಾಪುರದ ಸಂಸದ ರಮೇಶ್ ಜಿಗಜಿಣಗಿ ಅವರು ಯಡಿಯೂರಪ್ಪ-ವಿಜಯೇಂದ್ರ ಕ್ಯಾಂಪಿನಿಂದ ದೂರವಾಗಿ ಬಹುಕಾಲವೇ ಆಗಿಹೋಗಿದೆ.ಲೋಕಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ತಪ್ಪಿಸಲು ಯತ್ನಿಸಿದ್ದರಿಂದ ಹಿಡಿದು,ದಿಲ್ಲಿ ರಾಜಕಾರಣದಲ್ಲಿ ತಾವು ನೆಲೆ ಆಗದಿರಲು ಇವರು ಏನೇನು ಮಾಡಿದರು? ಎಂಬುದು ಜಿಗಜಿಣಗಿ ಕೋಪ.
ಉಳಿದಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ದೇವೇಗೌಡರ ಅಳಿಯ ಡಾ.ಮಂಜುನಾಥ್ ಅವರು ಬಣ ರಾಜಕೀಯದಲ್ಲಿ ಗುರುತಿಸಿಕೊಂಡಿಲ್ಲವಾದರೂ ರಾಜಕಾರಣದ ಅನಿವಾರ್ಯತೆಗಳು ತಮ್ಮನ್ನು ಯಡಿಯೂರಪ್ಪ-ವಿಜಯೇಂದ್ರ ಕ್ಯಾಂಪಿನಿಂದ ದೂರ ನಿಲ್ಲುವಂತೆ ಮಾಡುತ್ತವೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಇದೇ ರೀತಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ ಅವರು ಭವಿಷ್ಯದ ಸಿಎಂ ಕ್ಯಾಂಡಿಡೇಟು. ಇವತ್ತು ರಾಜ್ಯ ಬಿಜೆಪಿಯ ಗೊಂದಲವನ್ನು ಶಮನಗೊಳಿಸಲು ವರಿಷ್ಟರು ಅವರಿಗೆ ಟಾಸ್ಕ್ ನೀಡಿದ್ದಾರಾದರೂ,ಅವರು ವಿಜಯೇಂದ್ರ ಜತೆ ನಿಲ್ಲುತ್ತಾರೆ ಎಂಬುದು ಸುಳ್ಳು.
ಇನ್ನು ಬೆಳಗಾಂನಿಂದ ಗೆದ್ದ ಜಗದೀಶ್ ಶೆಟ್ಟರ್,ಬೆಂಗಳೂರು ಉತ್ತರ ಕ್ಷೇತ್ರದಿಂದ ಗೆದ್ದ ಶೋಬಾ ಕರಂದ್ಲಾಜೆ, ಉತ್ತರ ಕನ್ನಡದಿಂದ ಗೆದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಚಿಕ್ಕಮಗಳೂರಿನಿಂದ ಗೆದ್ದ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಮೈಸೂರಿನಿಂದ ಗೆದ್ದ ಯದುವೀರ್ ಒಡೆಯರ್ ಅವರು ವಿಜಯೇಂದ್ರ ನಾಯಕತ್ವದ ವಿರೋಧಿಗಳಲ್ಲವಾದರೂ ತಟಸ್ಥ ಬಣದಲ್ಲಿರುವುದರಿಂದ ವಿಜಯೇಂದ್ರ ಬೇಕ್ಕೇ ಬೇಕ್ ಎನ್ನುವವರಲ್ಲ.
ಹಾಗೆ ನೋಡಿದರೆ ಇವತ್ತು ನೇರವಾಗಿ ವಿಜಯೇಂದ್ರ ಜತೆಗಿರುವವರು ಮಂಗಳೂರಿನ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಿವಮೊಗ್ಗದ ಬಿ.ವೈ.ರಾಘವೇಂದ್ರ, ಬೆಂಗಳೂರು ಸೆಂಟ್ರಲ್ಲಿನ ಪಿ.ಸಿ.ಮೋಹನ್, ಬೆಂಗಳೂರು ದಕ್ಷಿಣದ ತೇಜಸ್ವಿ ಸೂರ್ಯ ಅವರಂತವರು ಮಾತ್ರ. ಹೀಗಾಗಿ ಮೋದಿ-ಅಮಿತ್ ಶಾ ಜೋಡಿ ಕೂಡಾ ಒಂದು ಮಟ್ಟದಲ್ಲಿ ವಿವಶವಾಗಿದೆ. ಒಂದೇ ವ್ಯತ್ಯಾಸವೆಂದರೆ,ವಿಜಯೇಂದ್ರ ಅವರನ್ನು ಕೆಳಗಿಳಿಸಿ ಸೋಮಣ್ಣ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತರಬೇಕು ಎಂದು ಬಹುತೇಕ ಸಂಸದರು ಹೇಳುತ್ತಿದ್ದರೆ, ವಿಜಯೇಂದ್ರ ಅವರನ್ನು ಬದಲಿಸಿದರೆ, ಅವರ ಜಾಗಕ್ಕೆ ರಾಘವೇಂದ್ರ ಅವರನ್ನು ತರೋಣ. ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ಕನ್ ಫರ್ಮ್ ಆದಾಗ ಸೋಮಣ್ಣ ಅವರನ್ನು ತಂದು ಕೂರಿಸೋಣ ಅಂತ ಮೋದಿ-ಅಮಿತ್ ಶಾ ಅವರು ಯೋಚಿಸುತ್ತಿದ್ದಾರೆ.
ಕುಮಾರಣ್ಣಂಗೂ ವಿಜಯೇಂದ್ರ ಬೇಕಾಗಿಲ್ಲ (Political analysis)
ಈ ಮಧ್ಯೆ ಜೆಡಿಎಸ್ ನಾಯಕ,ಕೇಂದ್ರದ ಉಕ್ಕು ಮತ್ತು ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ಈಗ ವಿಜಯೇಂದ್ರ ಬೇಕಾಗಿಲ್ಲ.ಕಾರಣ?ವಿಜಯೇಂದ್ರ ಅವರಿಗೆ ಜೆಡಿಎಸ್ ಬಗ್ಗೆ ಇರುವ ನಿರಾಸಕ್ತಿ. ಅಂದ ಹಾಗೆ ಕಳೆದ ಲೋಕಸಭಾ ಚುನಾವಣೆಯ ಹೊತ್ತಿಗೆ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಅಮಿತ್ ಶಾ ಅವರ ಲೆಕ್ಕಾಚಾರದ ಫಲವಾಗಿ ಬಿಜೆಪಿ-ಜೆಡಿಎಸ್ ಮಧ್ಯೆ ಹೊಂದಾಣಿಕೆ ಸಾಧಿತವಾಗಿತ್ತು.
2023 ರಲ್ಲಿ ಕರ್ನಾಟಕದ ಅಧಿಕಾರ ಸೂತ್ರ ಹಿಡಿದಿದ್ದ ಕಾಂಗ್ರೆಸ್ ಪಕ್ಷ ಬಲಿಷ್ಟವಾಗಿ ನೆಲೆ ನಿಂತಿದೆ.ಅದನ್ನು ವೈಯಕ್ತಿಕ ನೆಲೆಯಲ್ಲಿ ಎದುರಿಸಿದರೆ ಲೋಕಸಭಾ ಚುನಾವಣೆಯಲ್ಲಿ ನಾವು ಹತ್ತು ಸೀಟು ಗೆಲ್ಲುವುದೂ ಕಷ್ಟ.ಆದರೆ ಬಿಜೆಪಿ-ಜೆಡಿಎಸ್ ಮತಗಳು ಕನ್ ಸಾಲಿಡೇಟ್ ಆದರೆ ಇಪ್ಪತ್ತರಿಂದ ಇಪ್ಪತ್ತೆರಡು ಸೀಟುಗಳನ್ನು ಗೆಲ್ಕಬಹುದು ಅಂತ ಪ್ರಮೋದ್ ಸಾವಂತ್ ವರದಿ ಕೊಟ್ಟಾಗ ಮೋದಿ-ಅಮಿತ್ ಶಾ ಯಸ್ ಎಂದಿದ್ದರು.
ಅವತ್ತು ಚುನಾವಣೆಯಲ್ಲಿ ಪ್ರಮೋದ್ ಸಾವಂತ್ ಹೇಳಿದ್ದು ಬಹುತೇಕ ನಿಜವಾಯಿತು.ಆದರೂ ಸ್ವಪಕ್ಷೀಯರು ಒಳಗುನ್ನ ಹಾಕದೆ ಇದ್ದಿದ್ದರೆ ರಾಯಚೂರು,ದಾವಣಗೆರೆ,ಚಿಕ್ಕೋಡಿ ಸೇರಿದಂತೆ ಇನ್ನೂ ನಾಲ್ಕೈದು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಗಳಿಸಬಹುದಿತ್ತು ಎಂಬ ನಸನಸೆ ಬಿಜೆಪಿ ಪಾಳಯದಲ್ಲಿ ಉಳಿದೇ ಹೋಯಿತು. ಅದೇನೇ ಇದ್ದರೂ ಮಿತ್ರಕೂಟ ಹತ್ತೊಂಬತ್ತು ಸೀಟುಗಳನ್ನು ಗಳಿಸಿದ್ದರಿಂದ ಮೋದಿ-ಅಮಿತ್ ಶಾ ಜೋಡಿ ಖುಷಿಯಾಗಿದ್ದಷ್ಟೇ ಅಲ್ಲ,ಈ ಯಶಸ್ಸಿಗೆ ಕಾಣಿಕೆ ನೀಡಿದ ಕುಮಾರಸ್ವಾಮಿ ಅವರನ್ನು ಕೇಂದ್ರ ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡು ಒಳ್ಳೆ ಖಾತೆಯ ಗಿಫ್ಟು ನೀಡಿತು.
ಅದರೆ ಇಷ್ಟೆಲ್ಲ ಆದರೂ ವಿಜಯೇಂದ್ರ ಮಾತ್ರ ಜೆಡಿಎಸ್ ಅನ್ನು ದೂರವಿಡುತ್ತಾ ಬಂದಿದ್ದಷ್ಟೇ ಅಲ್ಲ, ಇವತ್ತು ಅಸೆಂಬ್ಲಿ ಚುನಾವಣೆ ನಡೆದರೂ ಬಿಜೆಪಿ ಸ್ವಯಂ ಬಲದ ಮೇಲೆ ನೂರಾ ನಲವತ್ತು ಸೀಟು ಗೆಲ್ಲುತ್ತದೆ ಎಂಬ ಮೆಸೇಜು ರವಾನಿಸತೊಡಗಿದರು. ಹೀಗೆ ನಮ್ಮ ಶಕ್ತಿಯಿಂದಲೇ ನೂರಾ ನಲವತ್ತು ಸೀಟು ಗೆಲ್ಲುತ್ತೇವೆ ಎಂದ ಮೇಲೆ ನಮಗೆ ಜೆಡಿಎಸ್ಸಿನ ಅಗತ್ಯ ಏನಿದೆ?ಅಂತ ಅವರು ರವಾನಿಸತೊಡಗಿದ ಸಿಗ್ನಲ್ಲು , ಪಕ್ಷದೊಳಗಿರುವ ಅವರ ವಿರೋಧಿಗಳಿಗೆ ಮಾತ್ರವಲ್ಲ,ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೂ ಕಿರಿಕಿರಿಯಾಗುವಂತೆ ಮಾಡಿತು.
ಅವರ ಈ ಕಿರಿಕಿರಿಯನ್ನು ಅರ್ಥ ಮಾಡಿಕೊಂಡ ಅಮಿತ್ ಶಾ ಅವರು ಕೆಲ ದಿನಗಳ ಹಿಂದೆ ಕರ್ನಾಟಕಕ್ಕೆ ಬಂದಾಗ ವಿಜಯೇಂದ್ರ ಅವರಿಗೆ : ಜೆಡಿಎಸ್ ಜತೆ ಸೇರಿ ನಾವು ಅಸೆಂಬ್ಲಿ ಎಲೆಕ್ಷನ್ನಿಗೆ ಹೋಗಬೇಕು. ಹೀಗಾಗಿ ಅವರೊಂದಿಗೆ ಸಂಬಂಧ ಚೆನ್ನಾಗಿರಲಿ ಅಂತ ಹೇಳಿ ಹೋಗಿದ್ದರು.
ಆದರೆ ಯಾರೇನೇ ಹೇಳಿದರೂ ವಿಜಯೇಂದ್ರ ಮನ:ಪೂರ್ವಕವಾಗಿ ಜೆಡಿಎಸ್ ಜತೆ ಹೊಂದಿಕೊಂಡು ಹೋಗಲಾರರು ಎಂಬುದು ಕುಮಾರಸ್ವಾಮಿ ಅವರಿಗೆ ಕನ್ ಫರ್ಮ್ ಆಗಿದೆ. ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದರೆ ತಾವು ಸಿಎಂ ಆಗಲೇಬೇಕು ಎಂಬ ಲೆಕ್ಕಾಚಾರದಲ್ಲಿರುವವರು ಬೇರೆಯವರನ್ನು ಒಪ್ಪುವುದು ಹೇಗೆ?ಎಂಬುದು ಕುಮಾರಸ್ವಾಮಿ ಯೋಚನೆ.
ಹೀಗಾಗಿ ಬಹಿರಂಗವಾಗಿ ಮಾತನಾಡದಿದ್ದರೂ ಮಿತ್ರಕೂಟ ಸುಗಮವಾಗಿ ಮುನ್ನಡೆಯಲು ಸೋಮಣ್ಣ ಅವರಂತಹ ನಾಯಕ ಬಿಜೆಪಿ ಮುಂಚೂಣಿಯಲ್ಲಿರಬೇಕು ಅಂತ ಅವರು ಬಯಸಿದ್ದಾರೆ. ಪರಿಣಾಮ? ವಿಜಯೇಂದ್ರ ಪದಚ್ಯುತಿಗೆ ಹವಣಿಸುತ್ತಿರುವವರಿಗೆ ಕುಮಾರಸ್ವಾಮಿ ಅವರ ಮಾರಲ್ ಸಪೋರ್ಟು ಸಿಗುವುದು ನಿಕ್ಕಿಯಾಗಿದೆ.
ಆರ್.ಟಿ.ವಿಠ್ಠಲಮೂರ್ತಿ