Kannada News | Dinamaana.com | 25-08-2024
ಕರ್ನಾಟಕದಲ್ಲಿ , ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲವದು. ದಾವಣಗೆರೆಯ ಸಭೆಯೊಂದರಲ್ಲಿ ಮುಖ್ಯಮಂತ್ರಿ ಅರಸು ಮಾತನಾಡಿದ್ದನ್ನು ಕೇಳಿಸಿಕೊಂಡ ಯುವಕನೊಬ್ಬ,ಅಲ್ಲೇ ಅದೇ ಸ್ಥಳದಲ್ಲಿ ಸಾರ್ವಜನಿಕವಾಗಿಯೇ ಮುಖ್ಯಮಂತ್ರಿಗಳನ್ನು ಧೈರ್ಯವಾಗಿ ಪ್ರಶ್ನಿಸಿದ.
ಆ ಯುವಕ, ಯುವ ವಕೀಲ ಲಕ್ಷ್ಮಣ ಗೂಳಪ್ಪ ಹಾವನೂರು. ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿಯೇ ಹೀಗಾದರೆ ಹೇಗೆ? ಎಂದು ಸುತ್ತಲಿದ್ದ ಪೊಲೀಸರು ಹಾವನೂರು ಎಂಬ ಯುವಕನ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದರು.
ಗಲಾಟೆಗೆ ಅವಕಾಶ ಕೊಡದೆ ಸುಮ್ಮನೆ ಕುಳಿತುಕೊಳ್ಳುವಂತೆ ತಾಕೀತು ಮಾಡಿದರು. ವೇದಿಕೆ ಮೇಲಿಂದಲೇ ಇವೆಲ್ಲವನ್ನೂ ಗಮನಿಸುತ್ತಿದ್ದ ದೇವರಾಜ ಅರಸು, ಪೊಲೀಸರನ್ನು ಗದರಿ,ಯುವಕ ಏನು ಹೇಳಬೇಕೆಂದು ಇದ್ದಾನೆ ಹೇಳಲಿ ಬಿಡಿ ಎಂದರು.
ಯುವಕ ಮಾತನಾಡಿದ. “ಹಿಂದುಳಿದ ವರ್ಗಗಳ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಿಮಗೆ ನಿಜವಾಗಲೂ ತತ್ವ ನಿಷ್ಟೆ ಇದ್ದರೆ, ಈಗ ಅಧಿಕಾರ ನಿಮ್ಮ ಕೈಯ್ಯಲ್ಲಿದೆ,ಕೃತಿಯಲ್ಲಿ ಮಾಡಿ ತೋರಿಸಿ”ಎಂದು ಯುವಕ ,ಎಲ್.ಜಿ.ಹಾವನೂರು ಸವಾಲು ಹಾಕಿದ.
ಬೆಂಗಳೂರಿಗೆ ಬಂದ ಅರಸು,ಆ ಯುವಕನನ್ನು ಕರೆಸಿಕೊಂಡು ಮಾತನಾಡಿದರು.ಸುದೀರ್ಘ ಚರ್ಚೆ ನಡೆಸಿದರು.ರಾಜ್ಯದ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರು ಅಂದಾಜು ಶೇ.20 ರಷ್ಟು ಇದ್ದರು. ಇವರಿಗೆ ಸರ್ಕಾರಿ ಹುದ್ದೆಗಳಲ್ಲಿ,ಶಿಕ್ಷಣ ಕ್ಷೇತ್ರಗಳಲ್ಲಿ ಮೀಸಲಾತಿಯು ಸಂವಿಧಾನ ಜಾರಿಗೆ ಬಂದಾಗಿನಿಂದಲೂ ಇದೆ. ಆದರೆ , ಶೇಕಡಾ 60 ಕ್ಕೂ ಹೆಚ್ಚು ಜನರು ಇರುವ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮುದಾಯಗಳಿಗೆ ಸರ್ಕಾರದ ಹುದ್ದೆಗಳಲ್ಲಿ,ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ಪ್ರಾತಿನಿಧ್ಯಕ್ಕೆ ಅವಕಾಶ ಇಲ್ಲ ಎಂಬುದನ್ನು ಗಮನಕ್ಕೆ ತಂದರು.
ಆರ್ಥಿಕವಾಗಿ , ಶೈಕ್ಷಣಿಕವಾಗಿ, ಸಾಮಾಜಿಕವಾಗಿಯೂ, ಈ ಸಮುದಾಯಗಳ ಹಿಂದುಳಿದಿರುವಿಕೆಯನ್ನು ಮುಖ್ಯಮಂತ್ರಿಗಳಾದ ದೇವರಾಜ ಅರಸು ಗಮನಕ್ಕೆ ಹಾವನೂರು ತಂದರು.ಕರ್ನಾಟಕದ ಹಿಂದುಳಿದ ವರ್ಗಗಳು ತಮ್ಮ ಬದುಕಿನಲ್ಲಿ ಭರವಸೆಯನ್ನು ಮೂಡಿಸಿಕೊಳ್ಳಲು ಕಾರಣಕರ್ತರಾದರು ದೇವರಾಜ ಅರಸು.
ರಾಜ್ಯದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿರುವ ಸಮುದಾಯಗಳ ಶೈಕ್ಷಣಿಕ,ಆರ್ಥಿಕ ಮಟ್ಟವನ್ನು ಹೆಚ್ಚಿಸಬೇಕು ಎಂಬ ಅಪಾರ ಕಾಳಜಿ,ತುಡಿತದ ಅರಸು ಅವರಿಗೆ ,ಎಲ್.ಜಿ.ಹಾವನೂರು ಎಂಬ ಯುವ ವಕೀಲ ಹಿಂದುಳಿದ ವರ್ಗಗಳ ಬೆಳಕಿನ ಕಿಂಡಿಯಾಗಿ ಆ ಕ್ಷಣ ಕಂಡು ಬಂದಿರಬೇಕು.
ಅರಸು ಸರ್ಕಾರ,”ಲಕ್ಷ್ಮಣ ಜಿ ಹಾವನೂರ ಅಧ್ಯಕ್ಷತೆಯಲ್ಲಿ “ಹಿಂದುಳಿದ ವರ್ಗಗಳ ಆಯೋಗ“ವನ್ನು ರಚಿಸಿ ಸರ್ಕಾರಿ ಆದೇಶವನ್ನು ಹೊರಡಿಸಿಬಿಟ್ಟರು.
ದೇವರಾಜ ಅರಸು-ಹಾವನೂರ ಚರಿತ್ರೆಯ ಭಾಗವಾಗಿದ್ದು ಹೀಗೆ.
Read also : LG Havanur | ಹಾವನೂರು-ಚಿಂತನಾಕ್ರಮ ಯಾಕೆ ಬೇಕು?