ದಾವಣಗೆರೆ : ಇಂಡಿಯಾ ಒಕ್ಕೂಟದಲ್ಲಿ ನಾಯಕ ಯಾರೆಂಬ ಸ್ಪಷ್ಟತೆಯೇ ಇಲ್ಲ. ಎಲ್ಲರನ್ನೂ ಸಂತೋಷದಲ್ಲಿ ಇಡಲು ವರ್ಷಕ್ಕೊಬ್ಬರನ್ನು ಪ್ರಧಾನಿ ಮಾಡುವ ಚಿಂತನೆ ಇಂಡಿಯಾ ಒಕ್ಕೂಟದ್ದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿದರು.
ದಾವಣಗೆರೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂಥವರಿಗಾಗಿ ಮತವನ್ನು ಹಾಳು ಮಾಡಬೇಕೇ ಎಂದು ಪ್ರಶ್ನಿಸಿದರು. ಮೌಲ್ಯಯುತ ಮತವನ್ನು ಹಾಳು ಮಾಡದಿರಿ ಎಂದು ವಿನಂತಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಎಸ್‍ಸಿ, ಎಸ್‍ಟಿಗಳಿಗಾಗಿ ಮೀಸಲಿಟ್ಟ 11 ಸಾವಿರ ಕೋಟಿ ಹಣವನ್ನು ಬೇರೆಡೆ ವರ್ಗಾಯಿಸಿದೆ. ಕಿಸಾನ್ ಸಮ್ಮಾನ್ ನಿಧಿಯಡಿ ಬಿಜೆಪಿ ಸರಕಾರ 4 ಸಾವಿರ ಕೊಡುತ್ತಿತ್ತು. ಆ 4 ಸಾವಿರ ಕೊಡುವುದನ್ನು ಕಾಂಗ್ರೆಸ್ ಸರಕಾರ ರದ್ದು ಮಾಡಿತು. ಈಗ ಕೇವಲ 6 ಸಾವಿರ ಮಾತ್ರ ಸಿಗುತ್ತಿದೆ. ಕಾಂಗ್ರೆಸ್ಸಿನವರಿಗೆ ರೈತರ ಮೇಲೆ ದ್ವೇಷ ಇದೆಯೇ? ಎಂದು ಕೇಳಿದರು. ಒಬಿಸಿ ಮೀಸಲಾತಿಯಡಿ ಅಲ್ಪಸಂಖ್ಯಾತರನ್ನು ತಂದಿದೆ ಎಂದು ಆಕ್ಷೇಪಿಸಿದರು.
ನೂತನ ಶಿಕ್ಷಣ ನೀತಿಗೆ (ಎನ್‍ಇಪಿ) ಬ್ರೇಕ್ ಹಾಕಲಾಗಿದೆ. ಇದರಿಂದ ಯುವಜನರಿಗೆ ದೊಡ್ಡ ನಷ್ಟ ಉಂಟಾಗಿದೆ. ರಾಜಕೀಯ ಮತಭೇದ ಇರಲಿ; ಆದರೆ ಯುವಜನರ ಭವಿಷ್ಯದ ಮೇಲೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಲ್ಲವೇ ಎಂದು ಕೇಳಿದರು.
ಕಾಂಗ್ರೆಸ್ ಪಕ್ಷವು ಪಾಪ- ತಪ್ಪು ಮಾಡುತ್ತಿದೆ. ಗರಿಷ್ಠ ಭ್ರಷ್ಟಾಚಾರ, ಲಕ್ಷಗಟ್ಟಲೆ ಮೊತ್ತದ ಹಗರಣಗಳನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು. ಇವರ ಮೇಲೆ ಭರವಸೆ ಇಡಲು ಸಾಧ್ಯವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ನನ್ನನ್ನು 10 ವರ್ಷಗಳಿಂದ ನೋಡಿದ್ದೀರಿ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ಕೇವಲ 25 ಇದ್ದುದು 47ಕ್ಕೆ ಏರಿದೆ. ರೈಲ್ವೆ ಲೈನ್‍ಗಳ ಅಭಿವೃದ್ಧಿ, ದಾವಣಗೆರೆಯಲ್ಲಿ ಯುವಜನರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಮೇ 7ರಂದು ದೇಶ ವಿಕಾಸಕ್ಕಾಗಿ ಮತ ಕೊಡಿ ಎಂದು ಮನವಿ ಮಾಡಿದರು.
ಗಾಯತ್ರಿ ಸಿದ್ದೇಶ್ವರ, ಬಸವರಾಜ ಬೊಮ್ಮಾಯಿ ಅವರಿಗೆ ಮತ ಕೊಟ್ಟು ಗೆಲ್ಲಿಸಿ ಎಂದು ವಿನಂತಿಸಿದರು.
ಕರ್ನಾಟಕವು ಏ.26ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಿದೆ. ಇಲ್ಲಿನ ಮಾತೆಯರು, ಸೋದರಿಯರು, ಮೊದಲ ಬಾರಿ ಮತದಾನ ಮಾಡಿದವರಿಂದ ಕಾಂಗ್ರೆಸ್ ಪಕ್ಷ ಆತಂಕಗೊಂಡಿದೆ. ಮೇ 7ರಂದು ಏನಾದರೂ ಮಾಡಿ ಖಾತೆ ತೆರೆಯಬೇಕೆಂದು ಕಾಂಗ್ರೆಸ್ ಪ್ರಯತ್ನದಲ್ಲಿದೆ. ದೆಹಲಿಯಲ್ಲಿ ಖಾತೆ ತೆರೆಯುವುದೇ ಅವರಿಗೆ ಕಷ್ಟವಾಗಿದೆ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಮಿತ್ರ ಪಕ್ಷಗಳ ನಡುವೆ ಬೀದಿಕಾಳಗ ನಡೆಯಲಿದೆ. ಹಿಂದೆ ಇವಿಎಂ ಮೇಲೆ ಆರೋಪ ಹೊರಿಸುತ್ತಿದ್ದರು. ಸುಪ್ರೀಂ ಕೋರ್ಟ್ ಇವರಿಗೆ ತಕ್ಕ ಏಟು ನೀಡಿದೆ. ಈಗ ಸೋಲಿಗೆ ಯಾರನ್ನು ಹೊಣೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಪ್ರೀತಿ, ಆಶೀರ್ವಾದ ಅನೇಕ ಜನ್ಮಗಳ ಪುಣ್ಯದಂತೆ ಲಭಿಸುತ್ತಿದೆ. ಪರಮಾತ್ಮನಿಗೆ ಅಭಾರಿ ಎನ್ನಲೇ? ಜನರು, ಯುವಜನರಿಗೆ ಧನ್ಯವಾದ ಹೇಳಲೇ? ಕೃತಜ್ಞ ಎನ್ನಲು ಶಬ್ದಗಳ ಕೊರತೆ ನನ್ನನ್ನು ಕಾಡುತ್ತಿದೆ ಎಂದು ತಿಳಿಸಿದರು. ದೇಶವಾಸಿಗಳಿಗೆ ಸದಾ ಸರ್ವದಾ ತಲೆ ಬಗ್ಗಿಸಿ ಪ್ರಣಾಮ ಸಲ್ಲಿಸುತ್ತೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಜಿ.ಎಂ.ಸಿದ್ದೇಶ್ವರ್, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಸಂಸದರು, ಮಾಜಿ ಸಚಿವರು, ಶಾಸಕರು, ಜಿಲ್ಲಾಧ್ಯಕ್ಷರು, ರಾಜ್ಯ- ಜಿಲ್ಲಾ ಪದಾಧಿಕಾರಿಗಳು, ಪಕ್ಷದ ಪ್ರಮುಖರು ವೇದಿಕೆಯಲ್ಲಿದ್ದರು.