ದಾವಣಗೆರೆ : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2025 ನೇ ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದ್ದ ಅಂದಾಜು ಸುಮಾರು 20.38 ಕೋಟಿ ರೂ ಮೌಲ್ಯದ ಮಾಲುಗಳನ್ನು ಶುಕ್ರವಾರ ಪೂರ್ವ ವಲಯ ಐಜಿಪಿ ಡಾ ಬಿ ಆರ್ ರವಿಕಾಂತೇಗೌಡ ನೇತೃತ್ವದಲ್ಲಿ ವಾರಸುದಾರರಿಗೆ ನೀಡಲಾಯಿತು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದ ಆವರಣದಲ್ಲಿ ಏರ್ಪಡಿಸಿದ್ದ ಪ್ರಾಪರ್ಟಿ ರಿಟರ್ನ್ ಪೆರೇಡ್‌ನಲ್ಲಿ ವಾರಸುದಾರರಿಗೆ ವಿತರಿಸಲಾಯಿತು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 30-11-2025 ರವರೆಗೆ ವರದಿಯಾಗಿದ್ದ ಸ್ವತ್ತು ಕಳವು ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಕಾರ್ಯಚರಣೆ ನಡೆಸಿ ಪ್ರಕರಣಗಳನ್ನು ಬೇಧಿಸಿ ಆರೋಪಿತರಿಂದ ಪತ್ತೆ ಮಾಡಿ ವಶಪಡಿಸಿಕೊಂಡಿದ್ದ ಸ್ವತ್ತನ್ನು ನ್ಯಾಯಾಲಯದ ಅನುಮತಿ ಮೇರೆಗೆ ಸ್ವತ್ತನ್ನು ಮಾಲಿಕರಿಗೆ ನೀಡಲಾಗಿದೆ ಎಂದು ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದರು.
ಈ ಪ್ರಾಪರ್ಟಿ ಪರೇಡ್‌ನಲ್ಲಿ 2025 ಸಾಲಿನಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಕಾರ್ಯಚರಣೆ ನಡೆಸಿ ಒಟ್ಟು 173 ಪ್ರಕರಣಗಳನ್ನು ಪತ್ತೆ ಮಾಡಿದೆ.
ಸದರಿ ಪ್ರಕರಣಗಳಲ್ಲಿನ ಅಂದಾಜು 19,64,52,459/- ರೂ ಮೌಲ್ಯದ ಸುಮಾರು 24 ಕೆಜಿ 726 ಗ್ರಾಂ ತೂಕದ ಬಂಗಾರ ಆಭರಣ ಮತ್ತು 24,35,362/- ರೂ ಮೌಲ್ಯದ 26 ಕೆಜಿ 672 ಗ್ರಾಂ ತೂಕದ ಬೆಳ್ಳಿಯ ಆಭರಣಗಳು, ಒಟ್ಟು 85,68,938/- ರೂ ನಗದು ಹಣ, 46,28,517 ರೂ ಮೌಲ್ಯದ 90 ವಿವಿಧ ಮಾದರಿ ವಾಹನಗಳು, 73,80,000 ರೂ ಮೌಲ್ಯದ 492 ವಿವಿಧ ಮಾದರಿಯ ಮೊಬೈಲ್ ಗಳು(2025 ಸಾಲಿನಲ್ಲಿ) ಹಾಗೂ 16,81,000/- ರೂ ಮೌಲ್ಯದ ಕೃಷಿ ಉಪಕರಣಗಳು ಮತ್ತು ಇತರೆ ವಸ್ತುಗಳು ಒಟ್ಟು 20,38,32,459/-ರೂ ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಹೇಳಿದರು.
Read also : ಮೈಕೊರೆಯುವ ಚಳಿ|ಆರೋಗ್ಯದ ಸಮಸ್ಯೆಗೆ ಒಳಗಾಗದೇ ಇರಲು ಮುಂಜಾಗ್ರತೆ ವಹಿಸಿ :ಡಾ.ಜಿ.ಡಿ.ರಾಘವನ್
ಬಹುತೇಕವಾಗಿ ಸ್ವತ್ತು ಕಳೆದುಕೊಂಡವರಿಗೆ ಹಿಂದಿರುಗಿಸುವ ಕೆಲಸವನ್ನು ಪೊಲೀಸ ಇಲಾಖೆ ಮಾಡಿದೆ. ಕಳೆದ ವರ್ಷ ಕಳುವಾದ ಒಟ್ಟು ಮೌಲ್ಯದ ಶೇ 90 ರಷ್ಟು ವಸ್ತುಗಳನ್ನು ವಶಪಡಿಸಿಕೊಂಡು ಅಷ್ಟು ಮೌಲ್ಯದ ವಸ್ತುಗಳನ್ನು ಸಂಬಂಧಪಟ್ಟವರಿಗೆ ನೀಡಲಾಗಿದೆ. ಇದು ಪ್ರಶಂಸೆನೀಯವಾದ ಕೆಲಸ. ನಿಜವಾದ ವಾರಸುದಾರರಿಗೆ ನೀಡಿದ್ದಾರೆ. ಹೆಣ್ಣು ಮಕ್ಕಳು ಮಾಂಗಲ್ಯದ ಬಗ್ಗೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದಾರೆ. ಅಂತಹ ಅನೇಕ ಸರಗಳ್ಳತನ ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದರು.
ಎಸ್ಪಿ ಉಮಾಪ್ರಶಾಂತ ಮಾತನಾಡಿ, ಮಹತ್ವದ ಪ್ರಕರಣಗಳನ್ನು ದಾವಣಗೆರೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ತಮ್ಮ ಸ್ವತ್ತುಗಳನ್ನು ಕಳೆದುಕೊಂಡ ನೋವಿನಲ್ಲಿದ್ದ ಮಹಿಳೆಯರು ಇಂದು ಮತ್ತೆ ಸ್ವತ್ತುಗಳನ್ನು ವಾಪಾಸ್ಸು ಪಡೆಯುವ ವೇಳೆ ಕಣ್ಣೀರಿಟ್ಟಿದ್ದಾರೆ. ನಮ್ಮ ಪೊಲೀಸರು ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಅವರಿಗೆ ಶೀಘ್ರವೇ ಪ್ರಶಂಸನೀಯ ಪತ್ರ ನೀಡಲಾಗುವುದು ಎಂದು ಹೇಳಿದರು.
ಈ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ರವರು, ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗಿಸ್, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ಬಿ.ಎಸ್, ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಶರಣಬಸವೇಶ್ವರ ಬಿ ರವರು, ಡಿಎಆರ್ ಡಿವೈಎಸ್ಪಿ ಪ್ರಕಾಶ್ ಪಿ.ಬಿ ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಅಪರಾಧ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
