ದಾವಣಗೆರೆ: ಪ.ಜಾತಿ ಮತ್ತು ಪಂಗಡ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ವೀರ ಮದಕರಿ ಸೇನೆ ಜಿಲ್ಲಾಡಳಿತ ಮುಂಭಾಗ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಖಾಲಿಯಾಗಿರುವ ಎರಡು ಸಚಿವ ಸ್ಥಾನವನ್ನು ನಮ್ಮ ಸಮುದಾಯದ ಇಬ್ಬರು ಶಾಸಕರಿಗೆ ನೀಡಬೇಕು, ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಶ್ರೀ ರಾಜವೀರ ಮದಕರಿ ನಾಯಕರ ಬೃಹತ್ ಪ್ರತಿಮೆಯನ್ನು ಶೀಘ್ರದಲ್ಲೇ ನಿರ್ಮಿಸಬೇಕು. ಚಿತ್ರದುರ್ಗದ ಹುಲಿ ಶ್ರೀ ರಾಜವೀರ ಮದಕರಿ ನಾಯಕರ ಜಯಂತಿಯನ್ನು ಪ್ರತೀ ವರ್ಷ ಅಕ್ಟೋಬರ್ 13 ರಂದು ಸರ್ಕಾರಿ ಗೌರವಾಧಾರಗಳೊಂದಿಗೆ ಆಚರಿಸಲು ಕ್ರಮಕೈಗೊಳ್ಳಬೇಕು. ಮುಂಬರುವ ದಿನಗಳಲ್ಲಿ ವಾಲ್ಮೀಕಿ-ನಾಯಕ ಸಮುದಾಯದ ಮುಖಂಡರುಗಳನ್ನು ರಾಜ್ಯಸಭಾ ಸದಸ್ಯರಾಗಿ ಹಾಗೂ ವಿಧಾನಪರಿಷತ್ ಸದಸ್ಯರನ್ನಾಗಿ ನಾಮಕರಣ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಡೇರಿಸುವಂತೆ ಸಮುದಾಯದವರು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಅಣಜಿ ಅಂಜಿನಪ್ಪ, ಪ.ಪಂಗಡ ಪಟ್ಟಿಯಲ್ಲಿ ಈಗಾಗಲೇ ೫೨ ಜಾತಿಗಳು ಇರುವುದರಿಂದ ಪುನಃ ಕುರುಬ ಹಾಗೂ ಇತರೆ ಜಾತಿಗಳನ್ನು ಎಸ್.ಟಿ. ಪಟ್ಟಿಗೆ ಸೇರಿಸುವ ಪ್ರಯತ್ನ ಕೈಬಿಡಬೇಕು. ಎಸ್.ಸಿ./ಎಸ್.ಟಿ. ಯವರಿಗೆ ವಸೆತಿ ಯೋಜನೆಯಡಿ ಸಹಾಯ ಧನವನ್ನು ರೂ.5.೦೦ ಲಕ್ಷಕ್ಕೆ ಹೆಚ್ಚಳ ಮಾಡಬೇಕು. ಡಾ. ಬಿ. ಆರ್. ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ ಪ್ರಶಸ್ತಿಗಳನ್ನು ಜಿಲ್ಲಾ ಮಟ್ಟದಲ್ಲಿಯೂ ನೀಡಬೇಕು. ಜಾತಿನಿಂದನೆ ಮಾಡಿರುವ ರಮೇಶ್ ಕತ್ತಿಯವರಿಗೆ ಕಾನೂನಾತ್ಮಕ ಶಿಕ್ಷೆಯಾಗಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಅಣ್ಣಾಪುರ ಹೇಮಣ್ಣ, ಕರೂರು ಗಣೇಶಪ್ಪ, ಶ್ಯಾಗಲೆ ಸತೀಶ್, ಗುಮ್ಮನೂರು ಬಸವರಾಜ್, ಕುರ್ಕಿ ಹನುಮಂತಪ್ಪ, ಆಲೂರು ಪರಶುರಾಮ್, ಕರೂರು ಸಿಂಗರ್ ಹನುಮಂತಪ್ಪ, ಕೋಡಿಹಳ್ಳಿ ಗಂಗಾಧರ, ಕಿತ್ತೂರು ಪ್ರಕಾಶ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಮುದಾಯದವರು ಪಾಲ್ಗೊಂಡಿದ್ದರು.
