ದಾವಣಗೆರೆ : ಜಿಲ್ಲೆಯ ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಕರ್ನಾಟಕ ಪಬ್ಲಿಕ್ ಶಾಲೆ ಶಿಥಿಲಾವಸ್ಥೆ ತಲುಪಿದೆ. 75 ವರ್ಷ ಹಳೇಯ ಪಬ್ಲಿಕ್ ಶಾಲೆ ಇದಾಗಿದ್ದು, ಇಲ್ಲಿ 250 ಹೆಣ್ಣು ಮಕ್ಕಳಿಗೆ ಒಂದೇ ಶೌಚಾಲಯ, ಸರತಿ ಸಾಲಿನಲ್ಲಿ ನಿಂತು ಶೌಚಾಲಯವನ್ನು ಬಳಸುವ ಸ್ಥಿತಿ ಇದೆ. ಪ್ರೌಢ ಶಾಲೆಯ ಬಾಲಕಿಯರು ಮತ್ತು ಬಾಲಕರು ಬಯಲು ಶೌಚಾಲಯಕ್ಕೆ ತೆರಳುವ ಅವ್ಯವಸ್ಥೆ ಇರುವುದಕ್ಕೆ ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ಲಿಂಗರಾಜು. ಎಂ ಗಾಂಧಿನಗರ ಅವರ ತಂಡ ಶಾಲೆಗೆ ಭೇಟಿ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆಣ್ಣು ಮಕ್ಕಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಉಪಕಾರವಲ್ಲ, ಹಕ್ಕು. ಇದನ್ನು ನಿರ್ಲಕ್ಷಿಸುವ ಸರ್ಕಾರ ಮತ್ತು ಜನಪ್ರತಿನಿಧಿಗಳು ಸಂವಿಧಾನದ ಆತ್ಮವನ್ನೇ ನಿರ್ಲಕ್ಷಿ ಸುತ್ತಿದ್ದಾರೆ. ಹೆಣ್ಣು ಮಕ್ಕಳು ಸಮಾಜದಲ್ಲಿ ತಮ್ಮ ನೋವು, ಅನ್ಯಾಯ, ಆಸೆ–ಆಕಾಂಕ್ಷೆಗಳನ್ನು ನೇರವಾಗಿ ಹೇಳಿಕೊಳ್ಳಲು ಅವಕಾಶವಿಲ್ಲ. ಆದರೆ, ಶಿಕ್ಷಣ ಅವರ ಮೌನಕ್ಕೆ ಧ್ವನಿಯಾಗುತ್ತದೆ.
Read also : ಸೈಬರ್ ಅಪರಾಧ:ಸಿಐಡಿಗೆ ಹಸ್ತಾಂತರಿಸಿದ ದಾವಣಗೆರೆ ಎಸ್ಪಿ
ಶಿಕ್ಷಣ ಪಡೆದ ಮಹಿಳೆ ತನ್ನ ಹಕ್ಕುಗಳನ್ನು ಅರಿತುಕೊಳ್ಳುತ್ತಾಳೆ, ಪ್ರಶ್ನೆ ಕೇಳುತ್ತಾಳೆ, ತೀರ್ಮಾನ ಕೈಗೊಳ್ಳುತ್ತಾಳೆ. ಹೀಗಾಗಿ ಶಿಕ್ಷಣವೇ ಮಹಿಳೆಯರ ಮೌನದೊಳಗಿನ ಮಾತು. ಮೌನ ಮುರಿಯುವ ಶಕ್ತಿ ಶಿಕ್ಷಣಕ್ಕೆ ಮಾತ್ರ. ಶಿಕ್ಷಿತ ಹೆಣ್ಣು ಮಕ್ಕಳಿಂದ ಶಕ್ತಿಶಾಲಿ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಅದ್ದರಿಂದ ಬಾಲಕಿಯರಿಗೆ ಸಿಗಬೇಕಾದ ಸೌಲಭ್ಯವನ್ನು ಸರಕಾರ ತಕ್ಷಣವೇ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮಾಯಕೊಂಡ ಕರ್ನಾಟಕ ಪಬ್ಲಿಕ್ ಶಾಲೆಯ ಹೆಣ್ಣು ಮಕ್ಕಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ತುರ್ತುವಾಗಿ ಒದಗಿಸಬೇಕು. ನಿರ್ಲಕ್ಷ್ಯವಹಿಸದೇ ಜನ ಪ್ರತಿನಿಧಿಗಳು ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಜವಾಬ್ದಾರಿತನದ ಕ್ರಮ ಜರುಗಿಸಬೇಕು ಎಂದು ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ಒತ್ತಾಯಿಸಿದೆ.
