ದಾವಣಗೆರೆ : ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗಿ ಬಲವಂತವಾಗಿ ಅತ್ಯಾಚಾರ ಮಾಡಿದ ಪ್ರಕರಣದ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 40 ಸಾವಿರ ರೂ ದಂಡ ಹಾಗೂ ಆರೋಪಿಯ ಕೃತ್ಯಕ್ಕೆ ಸಹಕರಿಸಿದ ಮತ್ತೊಬ್ಬ ಆರೋಪಿಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಕಾರು ಚಾಲಕ ಮನೋಹರ ಸಿ.ಹೆಚ್ ಮತ್ತು ಈತನ ಸ್ನೇಹಿತ ಹನುಮಂತಪ್ಪ ಶಿಕ್ಷೆಗೆ ಗುರಿಯಾದವರು. ದಿನಾಂಕ:13/01/2022 ರಂದು ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ದೂರು ದಾಖಲಿಸಿಕೊಂಡಿದ್ದ ಚನ್ನಗಿರಿ ಪೊಲೀಸರು ಬಾಲಕಿಯನ್ನು ಪುಸಲಾಯಿಸಿಕೊಂಡು ಕರೆದುಕೊಂಡು ಹೋಗಿದ್ದ ಮನೋಹರ ಮತ್ತು ಆತನ ಸ್ನೇಹಿತನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
7 ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಆಕೆಯ ಮನೆಯಲ್ಲಿದ್ದ ಬಂಗಾರ ಮತ್ತು ಹಣವನ್ನು ತರುವಂತೆ ಪ್ರೇರೇಪಿಸಿ ಆಕೆ ತಂದ ಹಣ ಮತ್ತು ಬಂಗಾರದ ಸಹಾಯದಿಂದ ಬೆಂಗಳೂರಿಗೆ ಆಕೆಯ ಸಮೇತ ಹೋಗಿದ್ದ ಆರೋಪಿ ಮನೋಹರ್ ಇದಕ್ಕೂ ಮುನ್ನ ಶಿರಾ ಬಳಿಯ ದೇವಸ್ಥಾನವೊಂದರಲ್ಲಿ ಮದುವೆಯಾಗಿ ತನ್ನ ಸ್ನೇಹಿತನ ಮನೆಯಲ್ಲಿ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಇದಕ್ಕೆ ಹನುಮಂತ ಸಹಾಯ ಮಾಡಿದ್ದ.
Read also : ದಾವಣಗೆರೆ|ಪ.ಜಾತಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ
ಆರೋಪಿಗಳ ವಿರುದ್ಧದ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ಮನೋಹರನಿಗೆ 20 ವರ್ಷ ಕಾರಾಗೃಹ ಶಿಕ್ಷೆ ಮತ್ತು ಆತನ ಸ್ನೇಹಿತನಿಗೆ 3 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ತ ಎಫ್ಟಿಎಸ್ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಆದೇಶಿಸಿದ್ದಾರೆ.
ಆರೋಪಿತರಿಂದ ವಸೂಲು ಮಾಡಿದ ದಂಡದ ಒಟ್ಟು ಮೊತ್ತ 45,000/-ರೂಗಳನ್ನು ಪ್ರಕರಣದ ಸಂತ್ರಸ್ಥೆಗೆ ನೀಡುವಂತೆ ಹಾಗೂ ಸಂತ್ರಸ್ಥೆಗೆ ಸರ್ಕಾರದಿಂದ 5 ಲಕ್ಷ ರೂ ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ.