ದಾವಣಗೆರೆ ಜು.13 : ಲೋಕ ಅದಾಲತ್ ಪ್ರಕ್ರಿಯೆ ಅತಿ ಸರಳ, ಇಲ್ಲಿ ಏನೆ ವ್ಯಾಜ್ಯ ಇದ್ದರೂ ರಾಜಿಗೆ ಮೊದಲ ಆದ್ಯತೆ. ನ್ಯಾಯಾಧೀಶರು ಮತ್ತು ನುರಿತ ವಕೀಲರು ಲೋಕ ಅದಾಲತ್ ಪೀಠದಲ್ಲಿ ಕುಳಿತು ವಾದಿ-ಪ್ರತಿವಾದಿಗಳನ್ನು ಕೂರಿಸಿಕೊಂಡು ಅವರ ಮನವೊಲಿಸಿ ವ್ಯಾಜ್ಯಕ್ಕೆ ಅವರ ಸಮಕ್ಷಮದಲ್ಲೇ ಪರಿಹಾರ ಕಂಡುಕೊಳ್ಳುತ್ತಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ.ಎನ್ ಹೆಗಡೆ ತಿಳಿಸಿದರು.
ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಮಾಹಿತಿ ನೀಡಿದರು.
ಕೌಟುಂಬಿಕ ನ್ಯಾಯಾಲಯದಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳ ಇತ್ಯಾರ್ಥದಿಂದ ಸಮಯ ಉಳಿತಾಯವಾಗಿ ಶೀಘ್ರ ನ್ಯಾಯದಾನ ಸಿಗಲಿದೆ. ಕೌಟುಂಬಿಕ ನ್ಯಾಯಾಲಯದಲ್ಲಿ ಕಕ್ಷಿದಾರರ ಪರವಾಗಿ ಪ್ರತಿನಿಧಿಸುವ ವಕೀಲರು ಮತ್ತು ಸಂಧಾನಗಾರರು ಹಾಗೂ ಎಲ್ಲರ ಶ್ರಮದಿಂದ ಇಲ್ಲಿಯವರೆಗೆ ಸುಮಾರು 15 ಜೋಡಿ ಗಂಡ, ಹೆಂಡತಿಯರು ಮರು ಹೊಂದಾಣಿಕೆ ಮಾಡಿಕೊಂಡು ಸಹಜೀವನ ನಡೆಸಲು ಸಿದ್ದರಾಗಿದ್ದಾರೆ, ಈ ಸಂಖ್ಯೆ ಇನ್ನೂ ಕೂಡ ಹೆಚ್ಚುವ ಸಂಭವ ಇದೆ. ಇದರಿಂದ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಬಹುದಾಗಿದೆ ಎಂದರು.
ಕೆಲವು ಪಕ್ಷಗಾರರಿಗೆ ನಾವು ಏಕೆ ಪ್ರಕರಣ ಬಗೆಹರಿಸಬೇಕು ಎಂಬ ಜಿದ್ದಿರುತ್ತದೆ. ಆ ಜಿದ್ದಾಜಿದ್ದಿಯನ್ನು ಮರೆತು ಇಲ್ಲಿಗೆ ಬಂದು ತಮ್ಮ ಪ್ರಕರಣಗಳನ್ನು ಬಗೆಹರಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಮನುಷ್ಯನ ಬದುಕಿನಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿಂದ ವ್ಯಾಜ್ಯಗಳು ಸಂಭವಿಸುವುದು ಸಹಜ. ಸಣ್ಣ ಅವಘಡಗಳನ್ನು ದೊಡ್ಡದು ಮಾಡದೆ, ಸುಖ ಜೀವನ ನಡೆಸುವುದೇ ಜೀವನ ಎಂದು ತಿಳಿಸಿದರು.
5 ರಿಂದ 6 ಸಾವಿರದಷ್ಟು ಪ್ರಕರಣಗಳನ್ನು ಇತ್ಯರ್ಥ ಮಾಡುವ ಗುರಿ ಹೊಂದಿದ್ದು ಈಗಾಗಲೇ 4800 ಪ್ರಕರಣಗಳನ್ನು ಇಲ್ಲಿಯವರೆಗೆ ಬಗೆಹರಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣವರ್ ಮಾತನಾಡಿ, ವಿವಾಹ ಅಂದರೆ ನಮ್ಮ ಸಂಬಂಧಿಕರು, ಗೆಳೆಯರು ,ಆತ್ಮೀಯರು ಹಾಗೂ ನೂರಾರು ಜನರು ಬಂದು ಗಂಡ ಹೆಂಡತಿ ಚೆನ್ನಾಗಿರಿ, ನಿಮ್ಮ ಬಾಳು ಸಂತೋಷದಿಂದಿರಲಿ, ನಾಳೆ ನಿಮ್ಮ ಮಧ್ಯೆ ಏನಾದರೂ ಸಮಸ್ಯೆ ಬಂದಲ್ಲಿ ನಮ್ಮನ್ನು ಭೇಟಿಯಾಗಿ ನಮ್ಮ ಅನುಭವಗಳನ್ನು ಕೇಳಿ ತಿಳಿದುಕೊಳ್ಳಿ ಎಂದು ಅರಸಿ, ಹಾರೈಸಿ ಅವರನ್ನು ಕಳಿಸುವುದೇ ವಿವಾಹ ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ್.ಎಲ್.ಹೆಚ್ ಮಾತನಾಡಿ, ನಮ್ಮಲ್ಲಿ ಬರುವಂತಹ ಪ್ರಕರಣಗಳ ಪಕ್ಷಗಾರರ ಮನವೊಲಿಸಿ ಸಂಧಾನಕ್ಕೆ ವಕೀಲರೆ ಸಜ್ಜುಗೊಳಿಸುವರು. ಈ ಲೋಕ ಆದಾಲತ್ ನಲ್ಲಿ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳಲ್ಲಿ ಅವರ ಪಾತ್ರವೂ ಮುಖ್ಯವಾಗಿದೆ ಎಂದರು.
ಪ್ರಕರಣಗಳು ಮುಗಿದರೂ ಸಾಮಾಜಿಕ ಜವಾಬ್ದಾರಿಯಿಂದ ಮತ್ತು ಸಮಾಜದಲ್ಲಿ ಶಾಂತಿ, ಸೌಹಾರ್ಧತೆ ಕಾಪಾಡುವ ನಿಟ್ಟಿನಲ್ಲಿ ವಕೀಲರು ತಮ್ಮ ಪ್ರಕರಣಗಳನ್ನು ತ್ಯಾಗ ಮಾಡಿ ಜೋಡಿಗಳನ್ನು ಒಂದು ಮಾಡಿಸುವಂತಹ ಗುರುತರ ಜವಾಬ್ದಾರಿ ವಕೀಲರ ಮೇಲಿರುತ್ತದೆ ಎಂದು ತಿಳಿಸಿದರು.
ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಣ್ಣಯ್ಯನವರ್ ಎಂ.ಹೆಚ್, ಕೌಟುಂಬಿಕ ನ್ಯಾಯಾಧೀಶರಾದ ಶಿವಪ್ಪ ಗಂಗಪ್ಪ ಸಲಗೇರಿ, ಎರಡನೇ ಸತ್ರ ಜಿಲ್ಲಾ ನ್ಯಾಯಾಧೀಶರಾದ ಪ್ರವೀಣ್ ಕುಮಾರ್ ಎನ್, ಮಕ್ಕಳ ಶಾಲೆಯ ನ್ಯಾಯಾಧೀಶರಾದ ಶ್ರೀರಾಮ್ ಹೆಗಡೆ, ವಕೀಲ ಸಂಧಾನಕಾರರಾದ ಭಾಗ್ಯಲಕ್ಷ್ಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.