ಹರಿಹರ:
ಭಗವಾನ್ ಯೇಸು ಕ್ರಿಸ್ತನ ಸ್ಮರಣೆಯ ಶುಭ ಶುಕ್ರವಾರದ ಆಚರಣೆಯನ್ನು ನಗರದ ಆರೋಗ್ಯಮಾತೆ ಬಸಿಲಿಕ ಪುಣ್ಯಕ್ಷೇತ್ರ ಚರ್ಚ್‌ನಲ್ಲಿ ಭಕ್ತಿ ಹಾಗೂ ಶ್ರದ್ಧೆಯಿಂದ ಆಚರಿಸಲಾಯಿತು.
ಯೇಸುವಿನ ಪ್ರಾಣ ತ್ಯಾಗದ ಪವಿತ್ರ ಸ್ಮರಣೆಯ ಶಿಲುಬೆ ಹಾದಿ ಪ್ರಾರ್ಥನಾ ವಿಧಿಯನ್ನು ಭಕ್ತಾದಿಗಳು ಸುಡು ಬಿಸಿಲಿನ ಮಧ್ಯೆ ನಡೆಸುವ ಮೂಲಕ ಯೇಸುವಿನ ಸ್ಮರಣೆಯ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದ್ದರು. ಯೇಸುವಿನ ಶಿಲುಬೆಯ ಹಾದಿಯ ೧೪ ಸ್ಥಳಗಳಲ್ಲಿ ನಿಂತು ಧ್ಯಾನ ಹಾಗೂ ಪ್ರಾರ್ಥನೆಯನ್ನು ಉಪವಾಸದೊಂದಿಗೆ ಮಾಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಚರ್ಚ್‌ನ ಫಾ. ಕೆ.ಎ.ಜಾರ್ಜ್ ಇವರು ಸಂದೇಶ ನೀಡುತ್ತಾ, ಯೇಸುವಿನ ತ್ಯಾಗ, ಬಲಿದಾನಗಳು ನಮ್ಮ ಜೀವನಕ್ಕೆ ಮಾದರಿಯಾಗಬೇಕು. ಜೀವನದಲ್ಲಿ ಆತ್ಮ ಸ್ಥೈರ್ಯ ಇರಬೇಕು, ಪರಸ್ಪರ ಪ್ರೀತಿಸುವ ಹಾಗೂ ಯೇಸುವಿನ ಪ್ರೀತಿಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದೇವಾಲಯದ ಭಕ್ತಾಧಿಗಳು ತಮ್ಮ ಕೈಗಳಲ್ಲಿ ಶಿಲುಬೆಗಳನ್ನು ಹಿಡಿದು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ದೇವಾಲಯದ ಪಾಲನಾ ಪರಿಷತ್ತಿನ ಸದಸ್ಯರು, ಆರ್ಥಿಕ ಸಮಿತಿ ಸದಸ್ಯರು ಹಾಗೂ ಆಪಾರ ಭಕ್ತಾಧಿಗಳು ಭಾಗವಹಿಸಿದ್ದರು.