ದಾವಣಗೆರೆ (Davanagere) : ಪ್ರತಿಯೊಬ್ಬ ಮಕ್ಕಳಲ್ಲೂ ಒಂದೊಂದು ಬಗೆಯ ಪ್ರತಿಭೆ ಇರುತ್ತದೆ. ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಮನೆಯಲ್ಲಿ ಪೋಷಕರು, ಶಾಲೆಗಳಲ್ಲಿ ಶಿಕ್ಷಕರು ಪ್ರೋತ್ಸಾಹ ನೀಡಿದಾಗ ಅವರಿಗೆ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ಸಂತ ಪೌಲರ ಬಾಲಕಿಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಸಿಸ್ಟರ್ ವೆನಿಸಾ ಹೇಳಿದರು.
ನಗರದ ಪಿ.ಜೆ.ಬಡಾವಣೆಯ ಸಂತ ಪೌಲರ ಬಾಲಕಿಯರ ಪ್ರೌಢಶಾಲೆಯಲ್ಲಿ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಹಾಗೂ ಸಾರಿಗೆ ಇಲಾಖೆ ಸಹಯೋಗದಲ್ಲಿ ರಸ್ತೆ ಸುರಕ್ಷತೆ ಕುರಿತು ಎಲ್‍ಇಡಿ ಮೂಲಕ ಜನಜಾಗೃತಿ ಕಾರ್ಯಕ್ರಮದಲ್ಲಿ ಶಾಲೆಯ ಸ್ಯಾಕ್ಸೋಫೋನ್ ವಾದಕಿ, 5ನೇ ತರಗತಿ ವಿದ್ಯಾರ್ಥಿನಿ ಪುಣ್ಯಶ್ರೀಗೆ ಅಭಿನಂದಿಸಿ ಅವರು ಮಾತನಾಡಿದರು.
ಇಂತಹ ಕಲೆಗಳು ಮದುವೆ, ಶುಭ ಸಮಾರಂಭಗಳಿಗೆ ಮೆರುಗನ್ನು ತರುತ್ತವೆ. ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು ಸೂಕ್ತ ವೇದಿಕೆ ಅವಶ್ಯಕವಾಗಿರುತ್ತದೆ. ತಮ್ಮ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೊ ಅಂತಹ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಕಾರ್ಯವನ್ನು ಪೋಷಕರು ಮಾಡಬೇಕು. ಬೆಳೆಯುವ ಪೈರು ಮೊಳಕೆಯಲ್ಲಿಯೇ ಎಂಬಂತೆ ಈ ಪುಟ್ಟ ಬಾಲಕಿಗೆ ಸ್ಯಾಕ್ಸೋಫೋನ್ ನುಡಿಸುವಂತಹ ಕಲೆಯನ್ನು ದೇವರು ನೀಡಿದ್ದಾನೆ. ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಈ ಬಾಲಕಿ ಇಡೀ ಜಿಲ್ಲೆಯಲ್ಲದೇ ರಾಜ್ಯ, ರಾಷ್ಟ್ರಮಟ್ಟದಲ್ಲಿಯೂ ಕೀರ್ತಿ ತರುವಂತಾಗಲಿ ಎಂದು ಶುಭ ಹಾರೈಸಿದರು.
ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಬಸವರಾಜ, ವಾರ್ತಾ ಇಲಾಖೆಯ ರಮ್ಯ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ, 18 ವರ್ಷವಾಗದೇ ವಾಹನಗಳನ್ನು ಚಲಾಯಿಸಬಾರದು, ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಪರವಾನಿಗೆ ಪತ್ರ ಇಲ್ಲದೇ ವಾಹನ ಚಲಾಯಿಸಬಾರದು. ಮೂರು ಜನರು ದ್ವಿಚಕ್ರವಾಹನದಲ್ಲಿ ಹೋಗಬಾರದು, ಸೇರಿದಂತೆ ಅಪಘಾತವಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡುವುದು, ಸೈನ್ ಬೋರ್ಡ್‍ಗಳ ಬಗ್ಗೆ, ಅಪಘಾತಗಳಿಂದ ಸಾವುಗಳಾಗುವ ಬಗ್ಗೆ, ಸಂಚಾರಿ ದಟ್ಟಣೆ ತಡೆಗಟ್ಟುವ ಬಗ್ಗೆ ಮಕ್ಕಳಿಗೆ ಎಲ್‍ಇಡಿಯಲ್ಲಿ ಪರದೆಯ ಮೂಲಕ ಮಕ್ಕಳಿಗೆ ಮಾಹಿತಿ ನೀಡಿದರು. ನಂತರ ಮಕ್ಕಳಿಗೆ ಸಂಚಾರಿ ನಿಯಮಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಉತ್ತರಿಸಿದವರಿಗೆ ಪ್ರಮಾಣ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ಸಿಬಿಎಸ್‍ಇ ವಿಭಾಗದ ಸಿಸ್ಟರ್ ಮೆಟಿಲ್ಡಾ, ಕನ್ನಡ ಮಾಧ್ಯಮ ವಿಭಾಗದ ಸಿಸ್ಟರ್ ಸುಪ್ರಿಯ, ಪ್ರೈಮರಿ ವಿಭಾಗದ ಮುಖ್ಯೋಪಾಧ್ಯಾಯಿನಿ ವೈಲೆಟ್, ಕ್ಲೆಮೆನ್ಸಿಯಾ, ಅಮಲ, ಎಂ.ಕೆ.ಮಂಜುಳ, ಜಸ್ಸಿ, ರಾಗಿಣಿ, ಸುಸಿಮೆರಿ, ಎಲಿಜಾ, ಕಿರಣ್‍ಕುಮಾರ, ಟಿ.ಎಂ.ರವೀಂದ್ರಸ್ವಾಮಿ, ವಿವಿಧ ವಿಭಾಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
Read also : Davanagere | ಕನ್ನಡ ಬೆಳವಣಿಗೆ ಮನೆಯಿಂದಲೇ ಆಗಲಿ : ಶಾಸಕ ಕೆ.ಎಸ್.ಬಸವಂತಪ್ಪ