ಅತಿ ಹೆಚ್ಚು ಬ್ಯಾಂಕ್ ವ್ಯವಹಾರ ನಡೆದಿದ್ದು ಸೊಂಡೂರಿನಲ್ಲಿ
ಭಾರತದ ನಗರಗಳ ಪೈಕಿ ಕೊಲ್ಕತ್ತ ಸಿಟಿಯನ್ನು ಹೊರತುಪಡಿಸಿದರೆ ಅತಿ ಹೆಚ್ಚು ಬ್ಯಾಂಕ್ ವ್ಯವಹಾರ ನಡೆದಿದ್ದು ಕೂಡ ಇದೇ ಸೊಂಡೂರಿನಲ್ಲಿ. ಗಣಿಗಾರಿಕೆಯು ಉತ್ತುಂಗದಲ್ಲಿ ಇದ್ದಂತಹ ಸಂದರ್ಭದಲ್ಲಿ ಐನೂರು ಕೋಟಿಯಿಂದ ಸಾವಿರ ಕೋಟಿ ರೂಪಾಯಿ ಮೊತ್ತದ ಸುಮಾರು ಐದಾರು ನೂರು ಸೌಕಾರುಗಳು ಹೊಸ ಪೇಟೆಯಲ್ಲಿ ಮತ್ತು ಸೊಂಡೂರುಗಳೆಂಬ ಎರಡು ಊರುಗಳಲ್ಲಿ ಇದ್ದರು.
ಟೀಬಿ ಬಡಕಂಡ ಊರುಗಳಿಗೆ ಮಗಳ್ನ ಕೊಡಾಕ ಹೊಂಟೀಯಲ್ಲ
ಒಂದು ಕಾಲಕ್ಕೆ,ಸೊಂಡೂರು, ಸುಬ್ರಯನಹಳ್ಳಿ,ನವಲೂಟಿ, ಸುಶೀಲಾನಗರ,ತಾರಾನಗರ, ಕೃಷ್ಣಾನಗರ , ಭುಜಂಗನಗರ, ಯಶವಂತ ನಗರ,ವೆಂಕಟಗಿರಿ ನಗರ, ದೇವಗಿರಿ, ನರಸಾಪುರ (ಎನ್.ಎಮ್.ಡಿ.ಸಿ.)ಗಳಂತಹ ಊರುಗಳ ಗಂಡುಗಳಿಗೆ ಹೆಣ್ಣು ಕೊಡಲು ನಾ ಮುಂದು,ತಾ ಮುಂದು ಎನ್ನುವಂತಿತ್ತು. ಆದರೆ ಗಣಿ ಹಾವಳಿಯಿಂದಾಗಿ ಪರಿಸ್ಥಿತಿ ಹೇಗಾಗಿತ್ತೆಂದರೆ…ಅಲ್ಲಿನ ಊರುಗಳಿಗೆ ಹೆಣ್ಣು ಕೊಡಲು ಖಾಯಂ ಮಾಡಿಕೊಂಡು ಹೋದರೆ, “ಅಲ್ಲಪಾ….ನಿನಿಗೆ ಮಗಳೇನ್ ವಜಿಯಾಗಿದ್ಲೇನ್ ? ಬ್ಯಾರೆ ಊರಾಗ ಗಂಡುಗಳಿಗೇನು ಬರ ಐತಾ..? ಹೋಗಿ ,ಹೋಗಿ ,ಆ ಟೀಬಿ ಬಡಕಂಡ ಊರುಗಳಿಗೆ ಮಗಳ್ನ ಕೊಡಾಕ ಹೊಂಟೀಯಲ್ಲ, ನಿನಗೆ ಭಾರ ಆಗ್ತಾಳಂದ್ರೆ ನನಿಗಿ ಬುಡು…ನಾನ್ ಹುಡುಕ್ತೀನಿ” ಎಂದು ಗಲಾಟೆ ಮಾಡುವ ಜನರಿದ್ದರು.
ಹಳ್ಳಿಗಳ ರೋದನ ಯಾರಿಗೂ ಕೇಳಿಸುವುದಿಲ್ಲ
ಇಲ್ಲಿನ ಮಣ್ಣು ಹೊನ್ನಾಗಿಯೂ,ಮಾಯೆಯಾಗಿಯೂ ,ಮೋಹವಾಗಿಯೂ ಜನರನ್ನು ಕಾಡಿದ್ದು ಸುಳ್ಳಲ್ಲ. ಬದುಕು ‘ನಾರ್ಮಲ್’ ಎನ್ನುವ ಸ್ಥಿತಿಗೆ ಬಂದಿಲ್ಲವಾದರೂ, ಸೊಂಡೂರಿನ ಹೊರ ಮೈ, ಸುರಿದ ಹೊಸ ಮಳೆಯಿಂದಾಗಿ ಮತ್ತೆ ಮದುವಣಗಿತ್ತಿಯಂತೆ ಮೈದುಂಬಿದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತಿದೆ. ಇನ್ನೊಂದು ತಿಂಗಳು ಕಳೆದರೆ ವಿದ್ಯಾರ್ಥಿಗಳನ್ನು ಕರೆದುಕೊಂಡು ‘ಟೂರ್’ ಗೆಂದು ಬರುವ ಮೇಷ್ಟ್ರುಗಳು ಹಚ್ಚಹಸಿರಿನ ಸೊಂಡೂರು,ಕುಮಾರಸ್ವಾಮಿ ಬೆಟ್ಟಗಳನ್ನು, ನಾರಿಹಳ್ಳದ ಮೋಹಕತೆಯನ್ನು, ಘೋರ್ಪಡೆ ಯವರ ಅರಮನೆಯ ಗಾಢ ಮೌನವನ್ನು ತೋರಿಸುತ್ತಾರೆ. ಅಂಗಿಯ ಒಳಗಿನ ಬನಿಯನ್ನಿನ ತೂತುಗಳಂತಿರುವ ಉಸಿರಾಡಲೂ ಕಷ್ಟ ಪಡುವ ಹಳ್ಳಿಗಳ ರೋದನ ಯಾರಿಗೂ ಕೇಳಿಸುವುದಿಲ್ಲ ಮತ್ತು ಕಾಣಿಸುವುದೂ ಇಲ್ಲ.
ಲೇಖನಿಯೇನಾದರೂ ಸಿಕ್ಕಿದ್ದರೆ ……
ಯಾರನ್ನೋ ಹುಡುಕುತ್ತ ವಿಳಾಸವಿಲ್ಲದ ಊರುಗಳ ಸುತ್ತುವ ಆ ಹುಡುಗಿಯ ಕೈಗೆ , ಕಾಮತರ ಹೋಟೆಲಿನ ಸಾಲಿಬಿಟ್ಟ ಆ ಹುಡುಗನಿಗೆ, ಸೊಂಡೂರು ಬಸ್ ಸ್ಟ್ಯಾಂಡಿನಲ್ಲಿ ಕಕ್ಕಸು ತೊಳೆಯುವ ಆ ಹತ್ತರ ಪೋರನಿಗೆ… ಯಾರದೋ ಮನೆಯಲ್ಲಿ ಮುಸುರೆ ತಿಕ್ಕುವ ಆ ಪೋರಿಯ ಎಳೆಗೈಗಳಿಗೆ, ಸುಕ್ಕುಗಾಣದಿರಲೆಂದು ಪೌಡರ್ ಬಳಿದುಕೊಂಡು ಆ ಬೀದಿಯಲಿ ನಿಂತ ಅವಳ ಕೈಗೆ… ಲೇಖನಿಯೇನಾದರೂ ಸಿಕ್ಕು …ಅವರೆಲ್ಲರೂ ಬರೆಯತೊಡಗಿದ್ದರೆ… ಸೊಂಡೂರು ಪ್ರದೇಶಕ್ಕೆ,ಜನರಿಗೆ ಆದ ಅನ್ಯಾಯವನ್ನು ಜಗತ್ತಿಗೆ ಸಾರುತ್ತಿದ್ದವು. ಆದರೆ, ಓಡಲಾಗದೆ ಬಸವಳಿದು ಸಿಕ್ಕಿಹಾಕಿಕೊಂಡು ಕಳ್ಳನಂತೆ ಊರು ಮಾತ್ರ ಬೆತ್ತಲೆಯಾಗಿ ನಿಂತುಕೊಂಡಿದೆ!.
ಎಲ್ಲೋ ದುಡಕೊಂಡು ವಾಪಸ್ ಬರ್ತೀನಿ ಎಂದು ಹೋದ ಮಗನ ನಿರೀಕ್ಷೆಯಲ್ಲಿ ಕಾಯುತ್ತ ಕುಳಿತ ತಾಯಿ.ಗೋಡೆಯ ಮೇಲಿನ ಪಟ ಸೇರಿರುವ ತಂದೆ. ಒಂದು ಊರಿನ ಅಂತರಂಗವೆ ಸೋತುಹೋದಾಗ ಏನು ತಾನೆ ಮಾಡಲು ಸಾಧ್ಯ?
ಬಿ.ಶ್ರೀನಿವಾಸ.