ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಕುಮಾರಸ್ವಾಮಿ ಬೆಟ್ಟ,ರಾಮನಮಲೈ ಮತ್ತು ಜಂಬುನಾಥ ಶಿಖರಗಳಂತಹ ಅನೇಕ ಬೆಟ್ಟಗಳ ಸಾಲುಗಳಲ್ಲಿ ಪಾಪಪ್ರಜ್ಞೆ ಮೈವೆತ್ತಂತೆ ಮೌನಕ್ಕೆ ಶರಣಾಗಿವೆ. ಇಂತಹ ಬೆಟ್ಟ -ಗುಡ್ಡಗಳು, ಕಾಡು ಮರಗಳು, ಸಣ್ಣಪುಟ್ಟ ಪ್ರಾಣಿ,ಪಕ್ಷಿಗಳು,ಜನರದ್ದೂ ಸಹ ಅದೇ ದೈನೇಸಿ ನೋಟ!
ಆ ನೋಟದಲ್ಲಿ ಮನುಷ್ಯನ ಗಣಿಗಾರಿಕೆಯೆಂಬ ದುರಾಶೆಗೆ ಅಂತಃಕರಣೆ ಎಂಬುದು ಇರಬಾರದಿತ್ತೆ ಎಂಬ ಭಾವ. ಪ್ರೀತಿ ಮತ್ತು ಸಹಾನುಭೂತಿಯನ್ನು ಕಳೆದುಕೊಂಡವರು ಮಾತ್ರ ನಮ್ಮ ಸುತ್ತಲಿನ ಬದುಕು ನರಕ ವಾಗಿದ್ದರೂ ನೆಮ್ಮದಿಯಾಗಿ ಉಣ್ಣಬಲ್ಲರು. ಕಲ್ಲಳ್ಳಿ,ಹೊಸಳ್ಳಿ,ಕಣಿವೆಳ್ಳಿಗಳಂತಹ ಊರುಗಳ ಮುದುಕರು ದಿನವೊಂದರಲ್ಲಿ ಒಪ್ಪತ್ತು ಕೂಡ ಉಣ್ಣದವರ ಹಾಗೆ ಯಾಕೆ ಕಾಣುತ್ತಾರೆ ಎಂಬುದು ಅರ್ಥವಾಗುತ್ತಿದೆ.
ಸೊಂಡೂರು ಸುತ್ತಮುತ್ತಲಿನ ಹಳ್ಳಿಗಳ ಜನರನ್ನು ಶತಮಾನಗಳ ಕಾಲ ಪೊರೆದ ಬೆಟ್ಟಗಳು,ಕಾಡು, ಕರಗಿ ಹೋದಂತೆಲ್ಲ ಮನುಷ್ಯರ ಜೀವಗಳೂ ಕರಗಿ ಹೋದವು. ನಿನ್ನೆ ಮೊನ್ನೆಯವರೆಗೂ ಕೆಂಪು ಸೈನಿಕರ ಹಾಗೆ, ಯುದ್ಧಕ್ಕೆ ಹೊರಟವರಂತೆ ಕಾಣಿಸುತ್ತಿದ್ದ ಗಣಿ ಕೂಲಿ ಕಾರ್ಮಿಕರು ಈಗ ಯಾವ ಬೀದಿ ಸುತ್ತುತ್ತಿದ್ದಾರೋ….?
ಅಮ್ಮಾ…. ತಾಯೇ…ಎಂದು
ಖಾಲಿ ಬೋಗುಣಿ ಹಿಡಿದು
ಕೂಗುತ್ತಾ
ಕಟ್ಟಿಕೊಂಡ ಸೆರಗಿನಲ್ಲಿ
ಅನ್ನವಿತ್ತೋ ಇಲ್ಲವೋ…
ಕೂಸೊಂದು ಮಾತ್ರ ಇತ್ತು.
ಪಾಪ … ಅವರು ಹಸಿದಿದ್ದರು.
ಎಲ್ಲಿ ಹೋದರೋ….
ಅತ್ಯಾಚಾರಕ್ಕೊಳಗಾದವರ ಅನುಭವ ತುಂಬಾ ಸಂಕೀರ್ಣವಾದುದು. ತೀವ್ರವಾದ ನಷ್ಟದ ಭಾವ, ಜೊತೆಗೆ ಹತಾಶೆ ಮತ್ತು ಅವಮಾನವೂ ಸೇರಿಬಿಡುವಂತೆ, ಇಡೀ ಊರಿಗೆ ಊರೇ ಕೇಡಿಗೆ ಒಳಗಾದ ಸಂತ್ರಸ್ತೆಯಂತೆ ತೋರುತ್ತಿದೆ. ನೀವು ಯಾರನ್ನೆ ಮಾತಾಡಿಸಿದರೂ… ಪಾಪಪ್ರಜ್ಞೆಯ ಭಾರ ಹೊತ್ತವರೆ ಆಗಿರುತ್ತಾರೆ. ಸದ್ಯದ ಗಣಿಗಾರಿಕೆಯಿಂದ ತನ್ನದೆಲ್ಲವನ್ನೂ ಕಳೆದುಕೊಂಡು ಮೌನಿಯಾದವರಂತೆ..!
ಬಿ.ಶ್ರೀನಿವಾಸ