ಯಾವಾಗ ಗಣಿಗಾರಿಕೆಯು ಎಗ್ಗಿಲ್ಲದೆ ಸಾಗಿತೋ ಅಲ್ಲಲ್ಲಿ ಕೆಲ ಪ್ರಜ್ಞಾವಂತ ಹುಡುಗರೂ ಎಚ್ಚತ್ತುಕೊಂಡರು. ಆದರೆ, ಈ ಪ್ರಜ್ಞೆಗೆ ಸಾಕಷ್ಟು ಬಲ ಇರಲಿಲ್ಲ. ಹಳ್ಳಿಯೊಂದರಲ್ಲಿ ಹುಡುಗರು ಸಭೆಯೊಂದರಲ್ಲಿ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠರನ್ನು ಭೇಟಿಯಾಗಲು ನಿರ್ಧರಿಸುತ್ತಾರೆ. ಅಲ್ಲಿಂದ ಶುರುವಾದ ಸಣ್ಣಕಿಡಿಯೊಂದು ಆಗಬಹುದಾದ ಬಹುದೊಡ್ಡ ಅನಾಹುತಗಳನ್ನು ತಪ್ಪಿಸಿದ್ದಲ್ಲದೆ, ದೇಶದ ಅತ್ಯುನ್ನತ ನ್ಯಾಯಾಲಯದವರೆಗೂ ಸಮಸ್ಯೆಯನ್ನು ಹೊತ್ತೊಯ್ಯಲು ಸಾಧ್ಯವಾಯಿತು.
ಕಣ್ಣಮುಂದೆ ಹಸಿವಿತ್ತು
ಜನರಿಗೆ ಈ ಯಾವ ಪ್ರಕ್ರಿಯೆಗಳ ಬಗ್ಗೆಯೂ ಆಸಕ್ತಿಯಿರಲಿಲ್ಲ.ಕಣ್ಣಮುಂದೆ ಹಸಿವಿತ್ತು, ಮಕ್ಕಳಿದ್ದರು ಅವರಿಗಾಗಿ ಅವರು ಗಣಿಗಳಲ್ಲಿ ದುಡಿಯುವುದು ಅನಿವಾರ್ಯವಾಗಿತ್ತು. ಯಾವಾಗ ಕೆಲ ಗಣಿಧಣಿಗಳ ಹಫ್ತಾ ವಸೂಲಿಗಳಿಂದ ಅವರಲ್ಲಿಯೇ ಕ್ಷೋಭೆ ಆರಂಭವಾಯಿತೋ ಒಂದೊಂದಾಗಿ ವಿಷಯಗಳು ಹೊರ ಬರತೊಡಗಿದವು.
ಗಣಿ ಕಂಪೆನಿಗಳಿಗೆ ಕಿರಿಕಿರಿ
ರಾಜಕಾರಣಿಯೂ ಆಗಿ, ಇನ್ನೇನು ಮುಖ್ಯಮಂತ್ರಿ ಕೂಡ ಆಗಿಬಿಡಬಹುದಾದ ಲೆವೆಲ್ಲಿಗೆ ಹೋಗಿದ್ದ ಗಣಿಧಣಿಯೊಬ್ಬನ ಅತಿಯಾದ ವೈಭವ, ಆಧುನಿಕ ಶ್ರೀಕೃಷ್ಣದೇವರಾಯನೇ ಆಗುವ ಹಂಬಲವು, ತಲೆಮಾರುಗಳಿಂದ ಗಣಿಗಾರಿಕೆಯನ್ನು ನಡೆಸುತ್ತಲೇ ಬಂದ ದಾಲ್ಮಿಯಾ, ಬಲ್ಡೋಟ ಮತ್ತು ಎಮ್.ಎಸ್.ಪಿ.ಎಲ್ ಗಳಂತಹ ಗಣಿ ಕಂಪೆನಿಗಳಿಗೆ ಇದರಿಂದ ಕಿರಿಕಿರಿಯಾಗಿರಬೇಕು. ಇದು ನಂತರದ ದಿನಗಳಲ್ಲಿ ರಾಜಕೀಯ ತಿರುವು ಪಡೆದುಕೊಂಡಿದ್ದೂ ಅಲ್ಲದೆ, ಕರ್ನಾಟಕ ರಾಜ್ಯದ ಅಂದಿನ ಆಡಳಿತ ವಿರೋಧಿ ಅಲೆಯಾಗಿ ಮಾರ್ಪಟ್ಟು ಒಂದಿಡೀ ವ್ಯವಸ್ಥೆಯನ್ನೇ ಬದಲಿಸಿಬಿಟ್ಟಿತು. ಅಷ್ಟೇ ಅಲ್ಲದೆ ಹಿರೇಮಠರು ಮತ್ತವರ ಸಹ ಹೋರಾಟಗಾರರಿಂದಾಗಿ ಸುಪ್ರೀಮ್ ಕೋರ್ಟಿನಲ್ಲಿನ ಹಸಿರು ಪೀಠಕ್ಕೊಂದು ಖದರ್ ಕೂಡ ಬಂದಿತು. ಅದರ ಅಧ್ಯಯನಗಳ ಫಲಶ್ರುತಿಯಿಂದಾಗಿ ಸ್ವಲ್ಪಮಟ್ಟಿಗಾದರೂ ಜನ ಉಸಿರಾಡುವಂತಾದರು.
ವರ್ಷಕ್ಕೆ ಕನಿಷ್ಠ ನಾಲ್ಕು ಸಾವಿರ ಕೋಟಿ ರೂಪಾಯಿಗಳಷ್ಟು ಲಾಭ ಮಾಡಿಕೊಳ್ಳುವ ಸಂಡೂರಿನ ಖಾಸಗಿ ಗಣಿ ಕಂಪೆನಿಗಳು ತಮ್ಮ ಚಟುವಟಿಕೆಗಳಿಂದ ಉಂಟಾದ ಪರಿಸರ,ಕೃಷಿ,ಆರೋಗ್ಯ ಸಮಸ್ಯೆಗಳಿಂದಾಗಿ ಬಡಜನರ ಬದುಕನ್ನೆ ಆಹುತಿ ತೆಗೆದುಕೊಂಡಿವೇ ಎಂದು ಹೈದರಾಬಾದಿನ ಸಾಗರಧಾರಾ ತಜ್ಞರು ಸಮಿತಿ ವರದಿ ನೀಡಿದೆ.
ಸಮಿತಿಯ ವರದಿ ಪ್ರಕಾರ
ಸೊಂಡೂರು ತಾಲ್ಲೂಕಿನ ವಾಯುಮಾಲಿನ್ಯ , ಸ್ಥಳೀಯ ಕೃಷಿ ಉತ್ಪಾದನೆ ಮತ್ತು ಹೈನುಗಾರಿಕೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಮಾವಿನ ಮರದ ಫಲ ಧಾರಣೆ 500 ಹಣ್ಣುಗಳಿಂದ 150ಕ್ಕೆ ಇಳಿದಿದೆ. ಧೂಳು ಮೆತ್ತಿದ ಹುಲ್ಲು ಮೇಯ್ದು ಜಾನುವಾರುಗಳಿಂದ ಹಾಲಿನ ಉತ್ಪಾದನೆಯೂ ಸಹ ಶೇ.25ರಷ್ಟು ಕುಸಿತವಾಗಿದೆ. ಶೇ.20 ರಷ್ಟು ಮಕ್ಕಳಲ್ಲಿ ಉಬ್ಬಸ ವ್ಯಾಧಿ ಕಂಡು ಬಂದಿದೆ. ಕಬ್ಬಿಣದ ಅದಿರಿನ ಧೂಳು ಕ್ಯಾನ್ಸರ್ ಕಾಯಿಲೆ ಸಂಭವವನ್ನು ಹೆಚ್ಚಿಸುತ್ತದೆ. ಗಣಿಗಾರಿಕೆಯಿಂದ ಬಿಡುಗಡೆಯಾದ ಇಂಗಾಲದ ಆಕ್ಸೈಡ್ ಮತ್ತು ಇಂಗಾಲ ಆಮ್ಲವನ್ನು ಹೀರಿಕೊಳ್ಳುವ ಹಸಿರು ಬೆಳಸಬೇಕಿತ್ತು.ಇದಕ್ಕಾಗಿ ಆಯಾ ವರ್ಷದಲ್ಲಿ ಕಂಪೆನಿಗಳು 120 ಕೋಟಿ ರೂ.ಖರ್ಚು ಮಾಡಬೇಕಿತ್ತು.ಆದರೆ ಯಾವ ಕಂಪೆನಿಗಳು ತಲೆ ಕೆಡಿಸಿಕೊಂಡಿಲ್ಲ ಎಂದು ಸಹ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಿ.ಶ್ರೀನಿವಾಸ