ನೆಲವನ್ನೂ , ನೆಲದ ನಂಟನ್ನೂ ಜನರಿಂದ ಕಸಿದುಕೊಂಡ ಗಣಿಗಾರಿಕೆ ಇದೀಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದೆ.
ಪಟ್ಟಣಗಳ ಸ್ವಾತಂತ್ರ್ಯ ಕಸಿದ ಪ್ರಾಧಿಕಾರ
ಗಣಿಗಾರಿಕೆಯಿಂದ ಅದಿರಿಡಿದು ಹೋಗಿದ್ದ ವಡ್ಡು , ಕಮ್ಮತೂರು, ಅಂಕಮ್ಮನಾಳ್, ಕಲ್ಲಹಳ್ಳಿ, ಹೊಸಳ್ಳಿ, ರಾಮನ ಮಲೈ , ಸ್ವಾಮಿ ಮಲೈ , ಧರ್ಮಸಾಗರ ಕಾಕುಬಾಳು , ಗಾದಿಗನೂರು, ಕುಡುತಿನಿ, ತೋರಣಗಲ್ಲು ಗಳಂತಹ ಅನೇಕ ಹಳ್ಳಿ , ಪಟ್ಟಣಗಳ ಸ್ವಾತಂತ್ರ್ಯವನ್ನೂ ಕಸಿದು ಹಾಕುವಂತೆ ವಿಜಯನಗರ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ.
ಸರ್ಕಾರಿ ಅಧಿಕಾರಿಗಳು ನಿಮಿತ್ತ ಮಾತ್ರ
ಕೈಗಾರಿಕೆಗಳ ಮಹಾಸ್ಪೋಟದಿಂದಾಗಿ ಉಸಿರಾಡಲೂ ಕಷ್ಟಪಡುವಂಥ ದಿನಗಳಲ್ಲಿ ತಿಂಗಳಿಗೊಂದು ಪ್ಲಾಂಟುಗಳು ಸ್ಥಾಪನೆಯಾಗುತ್ತಲೆ ಇವೆ. ಅವರದೇ ಬೇರುಗಳ ಊರುಗಳಲ್ಲಿ ಮನೆ, ಕಟ್ಟಡಗಳನ್ನು ಕಟ್ಟಿಕೊಳ್ಳಬೇಕೆಂದರೆ ಈ ಪ್ರಾಧಿಕಾರದ ಅನುಮತಿ ಅಗತ್ಯಸಾರ್ವಜನಿಕರ ಪ್ರತಿರೋಧಗಳಿಗೆ ಕಡಿವಾಣ ಹಾಕಲೆಂದೇ ಸ್ಥಾಪಿತವಾದ ಪ್ರಾಧಿಕಾರದಲ್ಲಿ ಬಹುತೇಕ ಶ್ರೀಮಂತ ಮಾಲೀಕರುಗಳೇ ಮುಖ್ಯವಾಹಿನಿಯಲ್ಲಿರುತ್ತಾರೆ. ಸರ್ಕಾರಿ ಅಧಿಕಾರಿಗಳು ನಿಮಿತ್ತ ಮಾತ್ರ.
ಸೆಂಟ್ರಲ್ ಲೆವೆಲ್ಲಿನಲ್ಲಿಯೇ ಎಲ್ಲಾ ರೀತಿಯ ಅದೃಶ್ಯ ಕಂಟ್ರಾಕ್ಟುಗಳು ಮುಗಿದು ಹೋಗಿರುತ್ತವೆ. ಇತ್ತೀಚೆಗಂತೂ ಕೆಲ ಖಾಸಗಿ ಕಾರ್ಖಾನೆಗಳು, ಹೋರಾಟಗಾರರ ಮೇಲೆ ನಿಗಾ ಇರಿಸಲೆಂದೆ ಇಂಟೆಲಿಜೆನ್ಸ್ ವಿಂಗ್ ಗಳನ್ನು ತಮ್ಮಷ್ಟಕ್ಕೆ ತಾವೇ ರಚಿಸಿಕೊಂಡಿವೆ!. ತನ್ನ ಮೂಗಿನ ನೇರಕ್ಕೇ ಕಾನೂನುಗಳನ್ನು ಬದಲಿಸಿಕೊಳ್ಳುವ ಸಾಮರ್ಥ್ಯವಿರುವ ಮಾಲೀಕರೆದುರು ಪ್ರಜಾಪ್ರಭುತ್ವ ಮಂಡಿಯೂರುತ್ತದೆ.
ಹೊಲದೊಡೆಯರು ಈಗ “ಎಗ್ ರೈಸ್ “ಅಂಗಡಿ ಮಾಲೀಕ
ಆ ಊರಿದ ಮಂಡಿಯ ಕೆಳಗೆ ರೈತನ ಜ್ವಾಳದ ತೆನೆ, ರಾಗಿಯ ಎಸಳು, ಅವರೆ, ಅಲಸಂದೆಗಳ ನರಳುವಿಕೆಯ ಸದ್ದು ಅವರಿಗೆ ಕೇಳಿಸುವುದಿಲ್ಲ. ತನ್ನದೇ ಹೊಲದ ಮೇಲಿಂದ ಏಳುತ್ತಿರುವ ಹೊಗೆಯನ್ನು ನೋಡುತ್ತಾರೆ ಕಾಲ ಕಳೆಯುವ ಒಂದು ಕಾಲದ ಹೊಲದೊಡೆಯರು ಈಗ “ಎಗ್ ರೈಸ್ “ಅಂಗಡಿ ಇಟ್ಟುಕೊಂಡು ಹೇಗೋ ಜೀವನ ಸಾಗಿಸುತ್ತಿದ್ದಾರೆ.
ಅಸ್ಮಿತೆ ಕಳೆದುಕೊಂಡು ಮುದುಕರು
ಎಕರೆಗಿಷ್ಟು ಪರಿಹಾರದ ಮೊತ್ತ ಬಿಸಾಕಿದರೆ ಸಾಕು ಎಂಬ ಧೋರಣೆಯಲ್ಲಿ ಪರಿಹಾರದ ಚೆಕ್ ಎಂಬ ಕಾಗದದ ಚೂರೊಂದನ್ನು ರೈತನ ಕೈಗಿರಿಸಲಾಗುತ್ತದೆ. ಆ ಕಾಗದದ ಚೂರುಗಳಲ್ಲಿ ರೈತ, ರಂಟೆಯ ಗೀರುಗಳನ್ನೂ , ಬೆಳೆಗಳ , ಹೂ , ಈಚು , ಕಾಯಿ , ಹಣ್ಣುಗಳನ್ನು , ಕಾಳುಗಳನ್ನೂ ಹೇಗೆ ತಾನೆ ಕಾಣಬಲ್ಲ? ತನ್ನ ಅಸ್ಮಿತೆಯನ್ನೆ ಕಳೆದುಕೊಂಡ ಭಾವದಲ್ಲಿ ಮೌನಿಗಳಾಗಿಬಿಡುವ ಮುದುಕರ ನೋವು ಅರ್ಥವಾದೀತು ಹೇಗೆ? ಈಗಾಗಲೇ ಸಾವಿರ,ಸಾವಿರ ಹೆಕ್ಟೇರುಗಳ ಭೂಮಿಯನ್ನು ಇನ್ನೆಂದೂ ಬೆಳೆಯದಂತೆ ಕಾರ್ಖಾನೆಗಳಿಗೆ ನೀಡಲಾಗಿದೆ.
ಪುನ ಸಾವಿರ , ಸಾವಿರ ಎಕರೆಗಟ್ಟಲೆ ಭೂಮಿಯ ಡಿಮ್ಯಾಂಡಿಗೆ ,ಸರಕಾರದ ನಿರ್ಧಾರಗಳಿಗೆ ಅಲ್ಲಲ್ಲಿ ಪ್ರತಿಭಟನೆಗಳು ಜರುಗುತ್ತಿವೆ. ಪ್ರಭುತ್ವವೂ”ಎಲ್ಲಾ ತಣ್ಣಗಾಗಲಿ..ನೋಡೋಣ “ಎಂಬ ಎಂದಿನ ತಂತ್ರಗಾರಿಕೆಯನ್ನು ಅನುಸರಿಸುತ್ತಿದೆ. ದಣಿದ ಜೀವಗಳು ದಣಿವಾರಿಸಿಕೊಳ್ಳುವ ಮುನ್ನವೇ ಅನೇಕ ಮಸೂದೆಗಳು ಕಾನೂನುಗಳಾಗಿ ಬಿಡುವುದೂ ಈಗೀಗ ಬಹುಸಾಮಾನ್ಯ ಸಂಗತಿಯಾಗಿದೆ.
ನೆಲದಲಿ ಹೂತು ಮಾರಿಬಿಡು ದೊರೆಯೇ….
ಮಣ್ಣು, ಗಿಡ, ಮರಗಳೊಂದಿಗೆ ಭಾವನಾತ್ಮಕ ಸಂಬಂಧಗಳನ್ನಿಟ್ಟುಕೊಂಡ ರೈತರು, ಮಾರಾಟ ಮಾಡುವುದಾದರೆ ನೆಲದ ಜೊತೆ ನಮ್ಮನ್ನೂ ಇದೇ ನೆಲದಲಿ ಹೂತು ಮಾರಿಬಿಡು ದೊರೆಯೇ…. ಮಾರಾಟ ಮಾಡುವುದಾದರೆ ಒಮ್ಮೆಯೇ ಮಾರಿಬಿಡು ತಾಯಿಯನ್ನು… ಮತ್ತೊಮ್ಮೆ ಕಂದನನ್ನು ಬಿಡಿಬಿಡಿಯಾಗಿ ಮಾರದಿರು… ಎಂದು ಕೂಗುತ್ತಿರುವಂತೆ ಭಾಸವಾಗುತ್ತದೆ.
ಬಿ.ಶ್ರೀನಿವಾಸ