ಎಣ್ಣೆ ಕಾಳುಗಳ ಬೆಳೆಗೆ ಪ್ರಶಸ್ತವಾದ ಭೂಮಿ
ಸೊಂಡೂರಿನ ಭೂಮಿ ತುಂಬಾ ಫಲವತ್ತಾದುದು. ಕಲ್ಲುಮಿಶ್ರಿತ ಕೆಂಪು ಮಣ್ಣಿನ ಇಲ್ಲಿನ ಹೊಲಗಳಿಗೆಲ್ಲ ಒಂದು ಆಕಾರವೆಂಬುದಿಲ್ಲ. ಇಳಿಜಾರಿನಂತಹ ಹೊಲಗಳ ಈ ಪ್ರದೇಶಗಳು ಎಣ್ಣೆ ಕಾಳುಗಳ ಬೆಳೆಗೆ ಪ್ರಶಸ್ತವಾದ ಭೂಮಿಯಿದು. ಉಳಿದಂತೆ ಜೋಳ, ಸಜ್ಜೆ, ನವಣೆ, ರಾಗಿ, ಗುರೆಳ್ಳು ಅತಿ ಮುಖ್ಯ ಬೆಳೆಗಳಾಗಿದ್ದವು.
ಆಗೆಲ್ಲ ರೊಕ್ಕವೆಂಬುದು ಈಗಿನಂತೆ ಕೆಂಪಾಗಿರಲಿಲ್ಲ. ಎಷ್ಟೋ ಜನರು ನೋಟಿನಲ್ಲಿರುವ ಗಾಂಧೀತಾತನನ್ನೂ ನೋಡಿರಲಿಲ್ಲ. ಅದರ ಅವಶ್ಯಕತೆಯೂ ಅವರಿಗೆ ಇರಲಿಲ್ಲ. ಚಹಾ ಮಾಡಲು ಚಾ ಬಿಲ್ಲೆ, ಬೆಲ್ಲ, ಮುಂತಾದ ದಿನಸಿ ಬೇಕೆಂದರೆ ಮನೆಯ ರಾಗಿ, ಜ್ವಾಳಗಳನ್ನು ಶೆಟ್ಟರ ಅಂಗಡಿಗೆ ಕೊಟ್ಟು ತರಬೇಕಿತ್ತು.
ನೋಟು, ನಾಣ್ಯಗಳೆಲ್ಲ ಕೈಯಿಂದ ಕೈಗಳಿಗೆ ಓಡಾಡುತ್ತಿರಲಿಲ್ಲ. ಶತಮಾನಗಳ ಕಾಲ ಕೃಷಿಯನ್ನೆ ನಂಬಿ ಬದುಕಿದ್ದ ಸಮುದಾಯಗಳ ಸಂಖ್ಯೆ ನಿರಂತರವಾಗಿ ಏರಿಕೆಯಾದಂತೆಲ್ಲ, ಭಾರತದಂತಹ ಕೃಷಿ ಮೂಲ ಅಭಿವೃದ್ಧಿ ಶೀಲ ರಾಷ್ಟ್ರಗಳು ನಿರುದ್ಯೋಗಗಳಂತಹ ಒತ್ತಡಗಳನ್ನು ನಿವಾರಿಸಿಕೊಳ್ಳಲು ಕೈಗಾರಿಕೆಗಳನ್ನು ಸ್ಥಾಪಿಸುವುದು ಅನಿವಾರ್ಯವಾಯಿತು.
ಇಂತಹ ದೇಶದಲ್ಲಿ ಸರ್ಕಾರ ಜನಹಿತಕಾರಿಯಾದ ‘ಇಂಡಸ್ಟ್ರಿಯಲ್ ಪಾಲಿಸಿ’ಯೊಂದನ್ನು ರೂಪಿಸಿಕೊಳ್ಳುವ ಅಗತ್ಯತೆ ಇದ್ದುದರಿಂದ ಕಾನೂನುಗಳು ರಚನೆಯಾದು ವೆಂಬುದೇನೋ ನಿಜ. ಈ ಕೈಗಾರಿಕಾ ನೀತಿಗಳು ಜನಪರವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಪ್ರಭುತ್ವಗಳದಾಗಿರಬೇಕಿತ್ತು.
ಖಾಸಗಿ -ಸರಕಾರಗಳ ಘರ್ಷಣೆಗಳಿಗೆ ಬಡ ಕಾರ್ಮಿಕರು ಬಲಿ
ಆ ನೀತಿಗಳು ಬಹುತೇಕ ಆಡಳಿತಾರೂಢ ಪಕ್ಷಗಳ ತತ್ವಗಳಂತೆ ರೂಪಿತಗೊಂಡಾಗ ಆರ್ಥಿಕ ಅಸಮತೋಲನ ಉಂಟಾಯಿತು. ಬಡವ-ಶ್ರೀಮಂತರ ಅಂತರ ಹೆಚ್ಚಾಯಿತು. ಜನರ ಸರ್ಕಾರಗಳೇ ಕೈಗಾರಿಕೆಗಳನ್ನು ಸ್ಥಾಪಿಸಿದ್ದರೆ ದೇಶದ ದೃಷ್ಟಿಯಿಂದ ಉತ್ತಮವಾದ ನಡೆಯಾಗಿರುತ್ತಿತ್ತು.ಆದರೆ ಖಾಸಗಿ -ಸರಕಾರಗಳ ಘರ್ಷಣೆಗಳಿಗೆ ಬಡ ಕಾರ್ಮಿಕರು ತುತ್ತಾದರು.
ಬಳ್ಳಾರಿ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹುಸಂಖ್ಯೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿ, ಮಹಾಸ್ಫೋಟವೆ ನಡೆಯಿತೆನ್ನಬಹುದು. ಪರಿಣಾಮವಾಗಿ, ಇಡೀ ರಾಜ್ಯದಲ್ಲಿಯೆ ಅತಿ ವೇಗವಾಗಿ ಬೆಳೆಯುತ್ತಿರುವ ಎರಡನೇ ಅತಿದೊಡ್ಡ ನಗರವಾಗಿ ಬಳ್ಳಾರಿ ಗುರುತಿಸಿಕೊಂಡಿತು.
ರಾಜ್ಯದ ಜಿ.ಡಿ.ಪಿ.ಯ ಶೇ.3.4 ಕೇವಲ ಬಳ್ಳಾರಿಯೊಂದರಿಂದಲೇ ಇತ್ತು.2007 ರಿಂದ 2013 ವರೆಗೂ ಇದೇ ವೇಗದಲ್ಲಿತ್ತು. ಆಗ ಜಿಲ್ಲೆಯ ವಾರ್ಷಿಕ ತಲಾ ಆದಾಯವು ರೂ.74,554 ರೂಪಾಯಿಗಳಿತ್ತು. ಅಂದರೆ ಪ್ರತಿಯೊಬ್ಬನ ತಿಂಗಳ ಆದಾಯವೆ ರೂ 6213/ ಆಗಿ, ದಿನವೊಂದಕ್ಕೆ ಪ್ರತಿಯೊಬ್ಬನ ಆದಾಯವು ರೂ.207/ ಆಗಿತ್ತು. ಅಂದರೆ ಭಾರತದ ಬಡತನ ರೇಖೆಯ ಮಾನದಂಡವಾಗಿದ್ದ ದಿನವೊಂದಕ್ಕೆ ರೂ.27 ರ ಆದಾಯದ ಬಡವರು ಇಡೀ ಜಿಲ್ಲೆಯಲ್ಲಿಯೇ ಇರಲಿಲ್ಲ. ಇರಲೇ ಇಲ್ಲ!
ಇಡೀ ಜಿಲ್ಲೆಯಲ್ಲಿ ಬಡವರೇ ಇರಲಿಲ್ಲ!.
ಆಹಾ… ಅಭಿವೃದ್ಧಿಯ ಮಾನದಂಡವೆ!
ಇದ್ದಕ್ಕಿದ್ದಂತೆಯೆ ಸ್ತಬ್ದವಾದ ಅಕ್ರಮ ಗಣಿಗಾರಿಕೆಯಿಂದಾಗಿ ಅಸಂಖ್ಯಾತ ಕಾರ್ಮಿಕರು ಕೆಲಸವಿಲ್ಲದೆ ಬೀದಿಗೆ ಬಿದ್ದರು. ಅತ್ತ ಬ್ಯಾಸಾಯವೂ ಮಾಡದ, ಮಾಡುವ ಮನಸ್ಸಿದ್ದರೂ ಭೂ ನಿರ್ಗತಿಕರಾಗಿ ಅಕ್ಷರಶಃ ಇವರುಗಳೆಲ್ಲ ಅರೆಹುಚ್ಚರಾಗಿದ್ದುದು ಆಶ್ಚರ್ಯವೇನಿಲ್ಲ.
ಬಿತ್ತನೆ ಮಾಡುವ ಮುನ್ನ ಬೀಜಗಳನ್ನು ಭೂಗರ್ಭಕೆ ಸಲ್ಲಿಸಿ, ತಾಯಿ ಕಾಪಾಡವ್ವಾ.. ಭೂಮ್ತಾಯೀ.. ಎಂದು ಬಾಲ್ಯದಲ್ಲಿ ಪೂಜಿಸಿದ ಅದೇ ಭೂಮಿಯನ್ನು ಬಗೆದವರ ಗುಂಪಿನಲ್ಲಿ ತಾನೂ ಒಬ್ಬನಾದುದುಕೆ ದುಃಖಿಸುವ ಆತನನ್ನು ಸಂತೈಸುವವರಾದರೂ ಯಾರು?
ಬಿ.ಶ್ರೀನಿವಾಸ