Kannada News | Sanduru Stories | Dinamaana.com | 14-06-2024
ಗುಡಿಸಲು ಹಾಕ್ಕೊಂಡು ನೆಲೆ ಕಂಡುಕೊಂಡರು (Sanduru Stories)
ಒಂದಾನೊಂದು ಕಾಲದಲ್ಲಿ ನಾರಾಯಣಪುರವೆಂಬ ಊರು ಇತ್ತಂತೆ. ನೆರೆ ಬಂದು ಹಾಳಾಗಿ ಹೋದಾಗ …ಜನರೆಲ್ಲ ಚೆಲ್ಲಾಪಿಲ್ಲಿಯಾಗಿ ಮಂಡಕ್ಕಿಯನ್ನು ತೂರಿದಂಗಾಗಿ ನೆಲೆ ಕಾಣದೆ..ಸಿಕ್ಕ ಊರುಗಳ ಹೊರಗೆ ಗುಡಿಸಲು ಹಾಕ್ಕೊಂಡು ನೆಲೆ ಕಂಡುಕೊಂಡರು.
ಸರ್ಕಾರಕ್ಕೆ ಅರ್ಜಿ …(Sanduru Stories)
ಆ ಬೋಳುಗುಡ್ಡದ ಜಾಗಕ್ಕೆ ಕೆತೆಯೂ ಇಲ್ಲ. ಹಳ್ಳಗಳ ಸುಳಿವೂ ಇಲ್ಲ. ಎಷ್ಟೊಂದು ಜಾಗವಿದ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾಗಿದೆ. ಬೀಳು ಭೂಮಿ ಕೊಟ್ಟರೆ ಉತ್ತಿಬಿತ್ತಿ ಬೆಳೆ ಬೆಳೆಯಬಹುದು. ಎಲ್ಲರಂತೆ ಬದುಕುವ ಆಶೆ.
ತಾಲ್ಲೂಕಾಫೀಸಿನ ಎಲ್ಲರಿಗೂ ನಮಸ್ಕಾರ ಹೊಡೆದಿದ್ದಾರೆ. ಸರ್ಕಾರ ಯೋಚಿಸುತ್ತಿದೆ. ಅವರೆಲ್ಲ ಹೊಲದಿಂದ ಸೀದಾ ಕಚೇರಿಗೆ ಬಂದಿದ್ದಾರೆ. ಮೈಗಂಟಿದ ಮಣ್ಣು ನೆಲದ ಮೇಲೆ ಉದುರುತ್ತಿದೆ. ಅಸಹ್ಯ ಬೆವರ ವಾಸನೆಗೆ ಯಾರೋ ಗದರಿಸುತ್ತಿದ್ದಾರೆ.
ಹಗಲೂ ರಾತ್ರಿ ದುಡಿದು ಚಿನ್ನದ ಬೆಳೆ ತೆಗಿತೀವಿ …(Sanduru Stories)
ಕನಸು ಒಂದೇ ಮುನ್ನೂರು ಎಕರೆಯ ಜಾಗ, ಒಬ್ಬೊಬ್ಬರಿಗೆ ಒಂದೊಂದು ಬ್ಯಾಡ, ಅರ್ಧರ್ಧ ಎಕರೆ ಕೊಟ್ಟರೂ …ಹಗಲೂ ರಾತ್ರಿ ದುಡಿದು ಚಿನ್ನದ ಬೆಳೆ ತೆಗಿತೀವಿ. ಎಂಬತ್ತರ ಮುದುಕ ತನ್ನ ಮಕ್ಕಳು ಮೊಮ್ಮಕ್ಕಳು ಹೊಟ್ಟೆ ತುಂಬಾ ಉಣ್ಣುವುದನ್ನು ಕಲ್ಪಿಸಿಕೊಂಡೆ ಉಗುಳು ನುಂಗುತ್ತಿದ್ದಾನೆ.
ಸರ್ಕಾರದ ತಲೆ ಅಲುಗಾಡಲಿಲ್ಲ …(Sanduru Stories)
ಎಂಬತ್ತರ ದೇಹದಲ್ಲಿ ರಕ್ತಸಂಚಾರ ಹೆಚ್ಚಿ ಇಪ್ಪತ್ತರ ಹರೆಯ ಬಂದಿದೆ. ತಲೆ ಮ್ಯಾಲಿನ ಫ್ಯಾನು ತಿರುಗಿದ್ದೆ ಬಂತು. ಸರ್ಕಾರದ ತಲೆ ಅಲುಗಾಡಲಿಲ್ಲ. ಕಾಡು ಬೆಟ್ಟ ಗುಡ್ಡ ಪರಿಸರಕ್ಕೆ ಪೂರಕವೆಂದು ಅದನ್ನು ಹಂಚಲು ಬಾರದೆಂದು ಹಸಿರು ಇಂಕಿನ ಅಕ್ಷರಗಳು ಮೂಡುತಿವೆ.
ಅಕ್ಕ ಪಕ್ಕ ಖಾಕಿ ಪಡೆ! …(Sanduru Stories)
ಗುಳೆ ಹೋಗು ಎಂದು ಸಾರುತ್ತಿವೆ. ಅವರೆದ್ದು ಹೋಗಿ ಅದೆಷ್ಟೋ ದಿನಗಳಾಗಿವೆ. ಆ ಬೋಳು ಗುಡ್ಡದ ಮೇಲೆ ಖಾವಿಗಳ ಕಣ್ಣು ಬಿದ್ದಿದೆ. ಖಾವಿಧಾರಿಗಳು ಮುಂದೆ ಮುಂದೆ.. ಖಾದಿಧಾರಿಗಳು ಅವರ ಹಿಂದ್ಹಿಂದೆ ಅಕ್ಕ ಪಕ್ಕ ಖಾಕಿ ಪಡೆ!
ಬೋಳು ಗುಡ್ಡದ ಕನಸು ಹೊತ್ತು …(Sanduru Stories)
ಕಾಡು ಮೇಡು ಗುಡ್ಡ ಬೆಟ್ಟದ ಜಾಗವನ್ನು ಮಠಕ್ಕೆ ಕೊಡಲು ಹಸಿರು ಇಂಕಿನ ಅಕ್ಷರಗಳು ಹಾಳೆಗಳ ಮೇಲೆ ಮೂಡುತಿವೆ. ಗುಳೆ ಹೋದ ಅವರು ಮತ್ತೆ ಬಂದರೂ ಬರಬಹುದು. ಬೋಳು ಗುಡ್ಡದ ಕನಸು ಹೊತ್ತು.
ಬಿ.ಶ್ರೀನಿವಾಸ