ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಉತ್ಕೃಷ್ಟ ಮಟ್ಟದ ತರಬೇತಿ ಕೇಂದ್ರ ಇಲ್ಲದಿರುವ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಶಾಮನೂರು ಶಿವಶಂಕರಪ್ಪ ಕೇರ್ ಟ್ರಸ್ಟ್ (ಎಸ್.ಎಸ್.ಕೇರ್ ಟ್ರಸ್ಟ್) ವತಿಯಿಂದ ಬೆಂಗಳೂರಿನ ಐ.ಎ.ಎಸ್. ಬಾಬಾ ಸಂಸ್ಥೆಯೊಂದಿಗೆ ಒಡಂಬಡಿ ಮಾಡಿಕೊಂಡು ದಾವಣಗೆರೆ ವಿಶ್ವವಿದ್ಯಾನಿಲಯ ಸಹಭಾಗಿತ್ವದಲ್ಲಿ ಸಂಕಲ್ಪ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಆರ್ಟ್ ಗ್ಯಾಲರಿ ಕಟ್ಟಡದಲ್ಲಿ ವಿದ್ಯಾರ್ಥಿಗಳು ಬೇಕಾಗಿರುವ ತರಬೇತಿ ಕೇಂದ್ರ ಹಾಗೂ ಸುಸರ್ಜಿತ ಗ್ರಂಥಾಲಯ ಮತ್ತು ಅಗತ್ಯ ಮೂಲಭೂತ ಸೌಕರ್ಯವನು ಒದಗಿಸಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಐ.ಎ.ಎಸ್ ಬಾಬಾ ತರಬೇತಿ ಸಂಸ್ಥೆಯ ಮುಖ್ಯಸ್ಥ ಮೋಹನ್ ಅವರು ದಾವಣಗೆರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತರಬೇತಿಯನ್ನು ನೀಡಲು ಮುಂದಾಗಿದ್ದಾರೆ.ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸ್ಕಾಲರ್ಶಿಪ್ ಟೆಸ್ಟ್ ನಡೆಸುವುದರ ಮೂಲಕ ಆಯ್ಕೆಯಾದ 300 ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು.
ನೊಂದಣಿ ಪ್ರಕ್ರಿಯೆಯು ಜುಲೈ 18ರಿಂದ ಪ್ರಾರಂಭವಾಗಿ 24ರವರೆಗೆ ಗೂಗಲ್ ಫಾರ್ಮ ಮೂಲಕ ಆಸಕ್ತ ವಿದ್ಯಾರ್ಥಿಗಳು ನೊಂದಣಿ ಮಾಡಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜುಲೈ 27ರಂದು ಲಿಖಿತ ಪರೀಕ್ಷೆಯನ್ನು ಏರ್ಪಡಿಸಲಾಗುವುದು. ಜುಲೈ 29ರಂದು ಫಲಿತಾಂಶ ಪ್ರಕಟಿಸಲಾಗುವುದು. ಈ ತರಬೇತಿ ಶಿಬಿರದ ಉದ್ಘಾಟನೆಯನ್ನು ಆಗಸ್ಟ್ 3ರ ಭಾನುವಾರ ಬೆಳಿಗ್ಗೆ 11ಘಂಟೆಗೆ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರ, ಬಿ.ಐ.ಇ.ಟಿ ಕಾಲೇಜು ಆವರಣ ದಾವಣಗೆರೆಯಲ್ಲಿ ನಡೆಸಲಾಗುವುದು. 4ರ ಸೋಮವಾರ ಬೆಳಿಗ್ಗೆ 10:30ಕ್ಕೆ ಸಂಕಲ್ಪ ತರಬೇತಿ ಕೇಂದ್ರ, ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯ ಆವರಣದಲ್ಲಿ ನಡೆಸಲಾಗುವುದು. ಈ ತರಬೇತಿಯ ಅವಧಿ ಎಂಟರಿಂದ ಒಂಬತ್ತು ತಿಂಗಳು ಇರುತ್ತದೆ ಎಂದು ಮಾಹಿತಿ ನೀಡಿದರು.
ದಾವಣಗೆರೆ ಜಿಲ್ಲೆಯಿಂದ ಪ್ರತಿ ವರ್ಷ ಹತ್ತರಿಂದ ಹದಿನೈದು ಸಾವಿರ ವಿದ್ಯಾರ್ಥಿಗಳು ವಿವಿಧ ಪದವಿ ಹಾಗು ಸ್ನಾತಕೋತ್ತರ ಪದವಿ ಮುಗಿದ ನಂತರ ಉದ್ಯೋಗ ಬಯಸಿ ಬೆಂಗಳೂರಿಗೆ ತೆರಳುತ್ತಿದ್ದಾರೆ. ಸದರಿ ವಿಧ್ಯಾರ್ಥಿಗಳಲ್ಲಿ ಸರ್ಕಾರಿ ಕೆಲಸ ಆಶಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ದೆಹಲಿ, ಬೆಂಗಳೂರು ಮತ್ತು ಧಾರವಾಡ ನಗರಗಳಲ್ಲಿ ಪ್ರತಿಷ್ಠಿನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಗಳಿಗೆ ಹೆಚ್ಚು ಶುಲ್ಕ ಪಾವತಿ ಮಾಡಿ ವರ್ಷಗಟ್ಟಲೆ ತಯಾರಿ ನಡೆಸುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.
Read also : ಒಂದೇ ವರ್ಷದಲ್ಲಿ ಚಿನ್ನದ ಬೆಲೆ 25 ಸಾವಿರ ಹೆಚ್ಚಳ!
ಸುದ್ದಿಗೋಷ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಮಾನ್ಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ. ಐ.ಎ.ಎಸ್ ಬಾಬಾ ಸಂಸ್ಥಾಪಕ ಮೋಹನ್, ಸಂಕಲ್ಪ ಕೇಂದ್ರದ ಸಂಯೋಜಕ ಡಾ.ಪ್ರಶಾಂತ್.ಎನ್.ಸಿ, ವೀರೇಶ್ ಪಟೇಲ್, ದೃಶ್ಯಕಲಾ ಮಹಾವಿದ್ಯಾಲಯದ ಪ್ರಭಾರ ಪ್ರಾಚಾರ್ಯ ಡಾ.ಸತೀಶಕುಮಾರ್ ಪಿ ವಲ್ಲೇಪುರೆ ಇದ್ದರು.