ಶಾಮನೂರು ಎಂಬುದು ದಾವಣಗೆರೆ ನಗರಕ್ಕೆ ಲಗತ್ತಾಗಿರುವ ದಾವಣಗೆರೆ ಪರಿಸರದ ಒಂದು ಚಿರಪರಿಚಿತ ಊರಿನ ಹೆಸರು. ಶಾಮನೂರು ಶಿವಶಂಕರಪ್ಪ ಈ ಊರಿನವರಲ್ಲ. ಪರಂತು ಈ ಊರಿನ ದೇವರು ಆಂಜನೇಯ ಸ್ವಾಮಿಯ ದೈವಾರಾಧಕರು.
ಹಾಗೆಯೇ ಅವರು ದಾವಣಗೆರೆ ಅಧಿದೇವತೆ ದುಗ್ಗಮ್ಮನ ಪರಮಭಕ್ತರು ಹೌದು. ಆದರೆ ಶಾಮನೂರು ಶಿವಶಂಕರಪ್ಪ ಎಂಬುದು ಕರ್ನಾಟಕದ ಸೀಮೆಯ ತುಂಬೆಲ್ಲಾ ಪ್ರಸಿದ್ಧಿ ಪಡೆದಿರುವ ಜನಜನಿತ ಹೆಸರು.
ಅವರ ಬಾಳಿನುದ್ದಕ್ಕೂ ಹಾಸುಹೊಕ್ಕಾದ ಉದ್ಯಮಶೀಲತೆ, ಸಾಹುಕಾರಿಕೆಯ ಸಿರಿಸಂಪನ್ನತೆ ಮತ್ತು ಮೆರುಗಿಟ್ಟಂತೆ ಕ್ರಿಯಾಶೀಲ ರಾಜಕಾರಣ. ಅವಕ್ಕೆಲ್ಲ ಶೃಂಗಪ್ರಾಯದಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷಗಿರಿಯ ಪಾರಮ್ಯ. ಇಂತಿಪ್ಪ ನಮ್ಮ ಶಾಮನೂರು ಶಿವಶಂಕರಪ್ಪ ತೊಂಬತ್ತೈದರ ಪ್ರಾಯದಲ್ಲಿ ಇಂದು ಶಿವಸಾಯುಜ್ಯ ಸೇರಿದ್ದಾರೆ..
ಇನ್ನೇನು ಐದು ವರುಷ ಕಳೆದರೆ ಅವರಿಗೆ ನೂರು ತುಂಬುತ್ತಿದ್ದವು. ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಅವರಿಗೆ ಅಜಮಾಸು ತೊಂಬತ್ತೇಳು ತುಂಬುವಾಗ ಶಾಸಕಗಿರಿಯ ಅವಧಿಯು ತುಂಬುತ್ತಿದ್ದವು.
ಪ್ರಾಯಶಃ ಅದು ವಿಧಾನಸಭೆ ಸದಸ್ಯತ್ವ ಮತ್ತು ಕರ್ನಾಟಕದ ಕ್ರಿಯಾಶೀಲ ರಾಜಕಾರಣದ ಮಹತ್ತರ ದಾಖಲೆಯೂ ಆಗುತ್ತಿತ್ತು. ಅಂತೆಯೇ ವರ್ತಮಾನದ ರಾಜಕಾರಣದಲ್ಲಿ ಸಹಜವಾಗಿ ಅವರಿಗೆ ಹಿರಿತನದ ಸ್ಥಾನಮಾನ.
ಅದು ಕೇವಲ ವಯಸ್ಸಿನ ಕಾರಣಕ್ಕಾಗಿ ಖಂಡಿತಾ ಅಲ್ಲ. ಶಾಮನೂರು ಶಿವಶಂಕರಪ್ಪನವರ ಸಮಾಜೋ ಧಾರ್ಮಿಕ ಬದುಕಿನ ಪ್ರೀತಿ, ಕಳಕಳಿಯೇ ಅಮೋಘ. ಅಷ್ಟಕ್ಕೂ ಅವರ ಮೊದಲ ಆದ್ಯತೆಯ ಕ್ಷೇತ್ರವದು.
ಶಾಮನೂರು ಜನಾನುರಾಗಿ ರಾಜಕಾರಣಿಯಾಗಿ, ಸಾಮಾಜಿಕ ಬದುಕಿನ ಮಹತ್ತರ ವ್ಯಕ್ತಿಯಾಗಿ, ಸಂಘ ಸಂಸ್ಥೆಗಳು ಮತ್ತು ನಿರ್ಗತಿಕರ ಬದುಕಿಗೆ ನೆರವಾದ ಕೊಡುಗೈ ದಾನಿಯಾಗಿ, ನೂರಾರು ಕುಟುಂಬಗಳ ಬದುಕಿಗೆ ಆಪತ್ ಬಂಧುವಾಗಿ, ಇವೆಲ್ಲಕ್ಕೂ ಮಿಗಿಲಾಗಿ ದಾವಣಗೆರೆಯ ಶೈಕ್ಷಣಿಕ ಬದುಕಿನ ವಿದ್ಯಾಕಾಶಿಯನ್ನು ಸಮೃದ್ಧಗೊಳಿಸಿದವರು ಶೃಂಗಶಿಲ್ಪಿ ಶಾಮನೂರು ಶಿವಶಂಕರಪ್ಪ.
ನೆನಪಿರಲಿ ಅವರ ಸಾರಥ್ಯದ ಬಾಪೂಜಿ ವಿದ್ಯಾಸಂಸ್ಥೆಯಿಂದ ಪ್ರತಿವರುಷವೂ ಇಪ್ಪತ್ತು ಸಾವಿರಕ್ಕು ಮಿಕ್ಕ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಭಾಜನರು. ಅದರಲ್ಲಿ ವೈದ್ಯರು, ಎಂಜಿನಿಯರು, ಇತರೆ ಎಲ್ಲ ಕ್ಷೇತ್ರದ ಪದವಿ, ಸ್ನಾತಕೋತ್ತರ ಪದವಿಧರರು ಸೇರಿದ್ದಾರೆ.
ಬಾಪೂಜಿ ವಿದ್ಯಾಸಂಸ್ಥೆಯೇ ಒಂದು ಸ್ವತಂತ್ರ ವಿಶ್ವವಿದ್ಯಾಲಯ ಆಗಿರುವ ಎಲ್ಲಾ ಅರ್ಹತೆಗಳಿವೆ. ಆದರೆ ಅದನ್ನು ಡೀಮ್ಡ್ ಯುನಿವರ್ಸಿಟಿ ಎಂದು ಪರಿವರ್ತಿಸುವಲ್ಲಿ ಪ್ರಾಯಶಃ ಅವರು ಮನಸು ಮಾಡಲಿಲ್ಲ. ಅದಕ್ಕೆ ಅವರದೇ ಕಾರಣಗಳಿದ್ದವು.
ಇದಿಷ್ಟು ಶಾಮನೂರು ಶಿವಶಂಕರಪ್ಪ ಕುರಿತು ಅವರ ಬಹುಮುಖಿ ವ್ಯಕ್ತಿತ್ವ ದರ್ಶನದ ಪುಟ್ಟ ಪರಿಚಯ. ಆದರೆ ಅವರು ನಡೆದುಬಂದ ಆರೇಳು ದಶಕಗಳ ಪಯಣದ ಸುದೀರ್ಘ ದಾರಿ ಅಷ್ಟೇನು ಸರಳ ಸುಬಗವೇನಲ್ಲ. ಅದು ಕಲ್ಲು, ಮುಳ್ಳು, ಮಣ್ಣು ತುಂಬಿದ ಕಾಠಿಣ್ಯದ ಹಾದಿಯೂ ಆಗಿತ್ತು. ಅಂತಹ ಹಾದಿಯನ್ನು ಖುದ್ದು ತಾವೇ ಹಸನು ಮಾಡಿಕೊಂಡು ನಡೆದು ಬಂದವರು.
Read also : ಕಾಂಗ್ರೆಸ್ ನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಸ್ತಂಗತ
ಅದು ಕೇವಲ ವಯಕ್ತಿಕ ಬದುಕಿನ ಹಾದಿಯಾಗಿರದೇ ಸಂಘ ಸಂಸ್ಥೆಗಳು ಮತ್ತು ಸಾಮಾಜಿಕ ಬದುಕಿನ ಸಾರ್ವಜನಿಕ ಜೀವನದ ಹಾದಿಯೇ ಆಗಿತ್ತು. ಅದಕ್ಕೆಂದೇ ಸಾಮಾಜಿಕ ಬದುಕಿನಲ್ಲಿ ಅವರಿಗೊಂದು ವಿಶಿ ಷ್ಟವಾದ ಸ್ಥಾನಮಾನ. ಶಾಮನೂರು ಎಂಬುದು ಜಾತಿ ನಿರಸನದ “ಮೋಷ್ಟ್ ಸೆಕ್ಯುಲರ್” ಬ್ರಾಂಡ್ ನೇಮ್. ಅದರಲ್ಲೂ ಅವರು ಜನಮುಖಿಯಾದ ಸೆಕ್ಯುಲರ್. ಅದು ಶಾಮನೂರು ಬದುಕಿನ ಅಸೀಮ ಲಾಲಿತ್ಯವೇ ಆಗಿದೆ.
ಹಾಗೆ ನೋಡಿದರೆ ರಾಜಕಾರಣವೇ ಅವರ ಗಮ್ಯ ಗಂತವ್ಯವೇನಲ್ಲ. ಅದಕೆ ಬದಲು ರಾಜಕಾರಣವೇ ಅವರನ್ನು ಹುಡುಕಿಕೊಂಡು ಬಂದುದು. ತಾನಿರುವ ಕಾಂಗ್ರೆಸ್ ಹೊರತು ಪಡಿಸಿ ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಅವುಗಳದು ಶಾಮನೂರು ಜತೆಗೆ ಸದಾ ಸಹೃದಯತೆಯ ಸಖ್ಯ. ಅಷ್ಟರಮಟ್ಟಿಗೆ ಅವರು ಅಜಾತ ಶತ್ರು ರಾಜಕಾರಣಿ. ಆರಂಭಕ್ಕೆ ಮಾತ್ರವಲ್ಲ ಈಗಲೂ ವ್ಯಾಪಾರೋದ್ಯಮ, ಸಾಮಾಜಿಕ ಮತ್ತು ಧಾರ್ಮಿಕ ಸೇವಾ ಸಂದೋಹವೇ ಅವರ ಆದ್ಯತೆಯ ಕ್ಷೇತ್ರ.
1995 ರಲ್ಲಿ ಮೊದಲ ಬಾರಿಗೆ ಅವರು ಶಾಸಕರಾದರು. ಅದಾದ ನಂತರ ಅವರ ಪಾಲಿಗೆ ವಿಧಾನಸಭೆ ಮತ್ತು ಲೋಕಸಭೆ ಪ್ರವೇಶ ದ್ವಾರಗಳು ಖುಲ್ಲಾ ಆದಂತೆ ಕಂಡವು. ನಾನು ಆಗ ಅವರನ್ನು ಪತ್ರಿಕೆಯೊಂದಕ್ಕೆ ನಲವತ್ತು ನಿಮಿಷಗಳ ಕಾಲ ಮುಖಾಮುಖಿ ಮಾತಾಡಿದ್ದೆ. ಅವರು ಅಲ್ಲೀಮಟ ಕೆ.ಪಿ.ಸಿ.ಸಿ. ಖಜಾಂಚಿ ಹುದ್ದೆಯಲ್ಲೇ ಮನೋಜ್ಞರು.
ಅಷ್ಟೇ ಯಾಕೆ ಅವರ ಆ ಹುದ್ದೆಯನ್ನು ಇದುವರೆಗೂ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಾಗಿರಲಿಲ್ಲ. ಅವರು ಬದುಕಿರುವವರೆಗೂ ಅವರೇ ಅದರ ಖಾಯಂ ಖಜಾಂಚಿ. ಹಾಗೆಂದು ಹಣದಿಂದಲೇ ಅವರು ಯಾವತ್ತೂ ರಾಜಕೀಯ ಅಧಿಕಾರ ಖರೀದಿಸಿದವರಲ್ಲ. ದೇವರಾಜ ಅರಸು ಕಾಲದಲ್ಲೇ ಶಾಮನೂರು ಪ್ರಮುಖ ರಾಜಕಾರಣಿ ಎಂಬ ರಾಜ್ಯಮಟ್ಟದ ಹೆಸರು.
ಆದರೆ ಅದಕ್ಕೆ ಮೊದಲೇ ಅವರು ದಾವಣಗೆರೆ ನಗರಸಭೆ ಅಧ್ಯಕ್ಷಪಟ್ಟ ಏರಿ ಬಂದವರು. ಅವರಿಗೆ ಅಧಿಕಾರ ಇರಲಿ, ಇಲ್ಲದಿರಲಿ ಅಪ್ಪಟ ಕಾಂಗ್ರೆಸ್ಸಿಗ ಮತ್ತು ಖಜಾಂಚಿ ಎಂಬುದು ಮಾತ್ರ ಯಾವತ್ತೂ ಖಾಯಂ. ಆದರೆ ಮುಖ್ಯಮಂತ್ರಿ ಆಗುವ ಕನಸು ಮಾತ್ರ ಸಾಕಾರಗೊಳ್ಳಲಿಲ್ಲ. ಆದರಿದು ಹಂಚಿಕೊಳ್ಳ ಬೇಕಾದ ಪ್ರೀತಿಯ ಸಂಗತಿ ಮಾತ್ರ. ಅವರ ಮಗ ಎಸ್. ಎಸ್. ಮಲ್ಲಿಕಾರ್ಜುನ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು. ಹೀಗೆ ಅಪ್ಪ ಮಗ ಇಬ್ಬರೂ ವಿಧಾನ ಸಭೆಯಲ್ಲಿ ದಾವಣಗೆರೆಯ ದಕ್ಷಿಣ ಉತ್ತರಗಳು ಸಂಗಮಿಸುವ ಸಂಭ್ರಮವೇ ಚೆಂದವಿತ್ತು.
ಅದು ಹಣ್ಣೆಲೆ ಚಿಗುರೆಲೆಗಳ ಹಸಿರಿನ ಸೊಗಸು. ಹೊಸ ಚಿಗುರು ಹಳೆಬೇರು ಕೂಡಿರಲು ಮರ ಸೊಬಗು ಎಂಬಂತೆ. ಶಾಮನೂರು ಮಲ್ಲಿಕಾರ್ಜುನ ಅವರು ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಇಲಾಖೆ ಸಚಿವರು. ಮಲ್ಲಣ್ಣ ಅಭಿವೃದ್ಧಿಯ ಕನಸುಗಾರ. ಎಸ್. ಎಸ್. ಅವರ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಲೋಕಸಭಾ ಸದಸ್ಯೆಯಾಗಿ ಅಪಾರ ಲೋಕಪ್ರೀತಿಗೆ ಭಾಜನರು. ಇದೆಲ್ಲವನ್ನು ಎಸೆಸ್ ಅತ್ಯಂತ ಸೂಕ್ಷ್ಮ ಸಂವೇದನೆಗಳಿಂದಲೇ ಸ್ವೀಕರಿಸಿದವರು.
ನನಗೆ ಪವಾಡಗಳಲ್ಲಿ ನಂಬಿಕೆ ಇಲ್ಲ. ಆದರೆ ಶಾಮನೂರು ಶಿವಶಂಕರಪ್ಪ ಅವರ ವಿಷಯದಲ್ಲಿ ಘಟಿಸುವ ಕೆಲವು ಪವಾಡ ಸದೃಶ ಸಂಗತಿಗಳನ್ನು ನಂಬಲೇ ಬೇಕಿದೆ. ಶಿವಶಂಕರಪ್ಪ ಅವರು ಇಂತಹ ವಯಸ್ಸಿನಲ್ಲಿ ಕಳೆದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ತರವಲ್ಲ ಎಂಬ ಅಭಿಪ್ರಾಯ. ಅದು ಅನೇಕರಿಗೆ ಸಹಜವೂ ಅನಿಸಿತ್ತು.
ಹಾಗೊಂದು ವೇಳೆ ಸ್ಪರ್ಧಿಸಿ ಪರಾಜಿತರಾದರೆ ವೃದ್ಧಾಪ್ಯದ ಸಂಧ್ಯಾಕಾಲದಲ್ಲಿ ಸೋಲಿನ ನೋವು ನಿರಂತರ. ಅದು ಬದುಕಿನ ಕಡೇ ಗಳಿಗೆವರೆಗೂ ಬಾಧಿಸದೇ ಬಿಡುವುದಿಲ್ಲ. ಇಂತಹದ್ದೊಂದು ಗುರುತರ ಆತಂಕ ಅವರ ಹಿತೈಷಿಗಳದಾಗಿತ್ತು. ಗೆದ್ದರೂ ಅವಧಿ ಪೂರೈಸುವ ಆರೋಗ್ಯ ಅವರಿಗಿಲ್ಲವೆಂದು ಕೆಲವು ವಿರೋಧಿ ಕುಹಕಿಗಳ ಕುಹಕ ನುಡಿ. ಇದ್ಯಾವುದನ್ನು ಕೇರ್ ಮಾಡದೇ ಅವರು ಕಳೆದ ವಿಧಾನಸಭಾ ಚುನಾವಣಾ ಕಣಕ್ಕಿಳಿದೇ ಬಿಟ್ಟರು ಮತ್ತು ಗೆದ್ದೇ ಬಿಟ್ಟರು. ಆದರಿಂದು ಅದು ಸಾಬೀತಾಯಿತು.
ಚುನಾವಣೆ ಆಖಾಡ ಮತ್ತು ಅವರಿಗೆ ದಾವಣಗೆರೆ ಶಹರ ಜೀವನದ ನರನಾಡಿಗಳ ವಾಸ್ತವದ ದಟ್ಟ ಅರಿವಿತ್ತು. ದಾವಣಗೆರೆ ಜನರು ತನ್ನನ್ನು ಯಾವತ್ತೂ ‘ಕೈ’ ಬಿಡುವುದಿಲ್ಲ ಎಂಬ ಅಪಾರ ನಂಬುಗೆಯಿತ್ತು. ರಿಯಾಲಿಟಿ ಚೆಕ್ ಮಾಡಲು ಬಂದ ಮಾಧ್ಯಮದ ಕಣ್ಣುಗಳು ಕೂಡಾ ಚಕಿತಗೊಂಡವು. ಚುನಾವಣಾ ಪ್ರಚಾರಕ್ಕೆಂದು ಶಾಮನೂರು ಸಾಹುಕಾರರು ವಿದ್ಯುತ್ ಚಾಲಿತ ತೆರೆದ ಗಾಡಿ ಮೂಲಕ ಆಗ ನಗರದಲ್ಲಿ ಓಡಾಡುವಾಗ ಸಾಮಾನ್ಯ ಜನರು ತೋರಿದ ಹರಿಗಡಿಯದ ಪ್ರೀತಿ ಕಂಡು ನಾನಂತೂ ಬೆಕ್ಕಸ ಬೆರಗಾಗಿದ್ದುಂಟು.
ಕೆಲವರಂತೂ ಅವರ ಪಾದಮುಟ್ಟಿಯೇ ನಮಸ್ಕರಿಸುತ್ತಿದ್ದರು. ಹೇಳ ಬೇಕೆಂದರೆ ಹಿರಿಯಜೀವ ಎಸ್ಸೆಸ್ ಅವರೇನು ಅದನ್ನು ಬಯಸಿದವರಲ್ಲ. ಮುಕ್ಕಾಗದ ಮತ್ತು ಮುಪ್ಪಾಗದ ಜೀವನೋಲ್ಲಾಸ ತುಂಬಿ ತುಳುಕುವ ತಮ್ಮಕಾಲದ ಹಿರಿಯ ಚೇತನಕ್ಕೆ ಸಾಮಾನ್ಯರು ಸಲ್ಲಿಸುವ ಪ್ರೀತಿ, ಗೌರವ ಅದಾಗಿತ್ತು.
ಅದು ಕೆಲವರ ಪಾಲಿನ ವಾತ್ಸಲ್ಯದ ಭಕುತಿಯಂತೆ ಗೋಚರಿಸುತ್ತಿತ್ತು. ಎಸ್ಸೆಸ್ ನಂಬಿದ ಜನ, ಅವರ ‘ಕೈ’ ಬಿಡದೇ ನಿರೀಕ್ಷೆ ಮೀರಿ ಅಂದರೆ 27888 ರಷ್ಟು ಅಧಿಕ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಿದರು. ಇದರಿಂದ ಜನ ಮತ್ತು ಎಸ್ಸೆಸ್ ನಡುವಿನ ನಂಬುಗೆ ಅದೆಷ್ಟು ‘ಅದಮ್ಯ’ ಎಂಬುದು ತನ್ಮೂಲಕ ಈ ಗೆಲುವು ಗಟ್ಟಿಯಾಗಿ ಸಾಬೀತು ಗೊಳಿಸಿತು.
ಅವರ ತೊಂಬತ್ಮೂರನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನನ್ನ ಪರಿಮಳದ ಹಾದಿಯ ಪಯಣಿಗರು ಪುಸ್ತಕವನ್ನು ಸನ್ಮಿತ್ರ ಕಾಂ. ಮೋಹನ ಕೊಂಡಜ್ಜಿ ಜತೆಯಲಿ ಅವರಿಗೆ ತಲುಪಿಸುತ್ತಿದ್ದಂತೆ ನಮ್ಮಿಬ್ಬರೆದುರು ಅವರ ಕುರಿತು ಬರೆದ ತೊಂಬತ್ಮೂರರ ಮುಪ್ಪಾಗದ ಮತ್ತು ಮುಕ್ಕಾಗದ ಚೇತನ ಎಂಬ ಲೇಖನ ಓದಿ ತಮ್ಮ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಆದರೆ ಅವರ ಜನುಮ ದಿನದಂದು ದೃಶ್ಯಮಾಧ್ಯಮದ ಪತ್ರಕರ್ತರು ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಪ್ರಮುಖವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎದುರಾಳಿ ಬಿ.ಜೆ.ಪಿ. ಯನ್ನು ಕರ್ನಾಟಕದಲ್ಲಿ ಎದುರಿಸುವ ಕುರಿತಾದ ಪ್ರಶ್ನೆ. ಅದಕ್ಕೇನಂತೆ ನಮ್ಮ ಕಾಂಗ್ರೆಸ್ಸಿನಲ್ಲಿ ಬೇಕಾದಷ್ಟು ಮಂದಿ ಹುರಿಯಾಳುಗಳಿದ್ದಾರೆ. ಅಗತ್ಯವೆನಿಸಿದರೆ ದಾವಣಗೆರೆಯ ಎಂ. ಪಿ. ಎಲೆಕ್ಷನ್ನಿಗೆ ನಾನೇ ಸೆಡ್ಡು ಹೊಡೆಯುತ್ತೇನೆ ಎಂದು ಬಿಟ್ಟರು.
ಹಾಗೆ ಸೆಡ್ಡು ಹೊಡೆದು ಅಳಿಯ ಜಿ. ಎಂ. ಸಿದ್ದೇಶನೆದುರು ಗೆದ್ದು ಬರುವೆ. ಹೀಗೆ ಅಗ್ದೀ ಸೋಜಾಗಿ, ಅಷ್ಟೇ ಚುರುಕಾಗಿ ತಮ್ಮದೇ ಆದ ದಾವಣಗೇರಿ ಜವಾರಿತನದ ಮಾತುಗಳಾಡಿದರು. ನಂತರದಲ್ಲಿ ಅವರು ಸೊಸೆಯ ಗೆಲುವು ಕಂಡು ಸಂಭ್ರಮಿಸಿದರು.
ತುಟಿಯಂಚಲೇ ನಕ್ಕು ಉತ್ತರಿಸುವ ರಾಜಕೀಯ ವೈಖರಿ, ಅದರ ಸೊಬಗು ಮತ್ತು ಸೊಗಸಿನ ಸಿರಿ ಅನನ್ಯ. ಅದು ದಾವಣಗೆರೆಯ ಮಂಡಕ್ಕಿ ಮೆಣಸಿನ್ಕಾಯಿಯ ಖಾರ, ಬೆಣ್ಣೆದೋಸೆಯ ಕಮ್ಮನೆಯ ಪರಿಮಳ ದಂತೆ ಘಮ ಘಮಿಸುತ್ತದೆ. ತೊಂಬತ್ತೈದರ ಹಣ್ಣೆಲೆಯ ಈ ಜೀವನೋತ್ಸಾಹ ಎಂಥವರಿಗೂ ಅದು ಪವಾಡ ಸದೃಶ ಅಲ್ಲದೇ ಇನ್ನೇನು.? ವರ್ತಮಾನದ ನವ ರಾಜಕೀಯ ಸಾಕ್ಷರತೆ ನಡುವೆ ಪರಂಪರಾ ರಾಜಕಾರಣದ ಮಹತ್ವದ ಕೊಂಡಿಯಂತಿದ್ದ ಅವರಿಗೆ ನೂರು ತುಂಬಲಿಲ್ಲ. ಅದನು ಕಾಣುವ ಭಾಗ್ಯ ಕಾಂಗ್ರೆಸ್ಸಿಗರಿಗೆ ಇರಲಿಲ್ಲ.
ಮಲ್ಲಿಕಾರ್ಜುನ ಕಡಕೋಳ
9341010712
