ಸಾಹಿತ್ಯ, ದೃಶ್ಯ ಕಲೆ,ಸ್ಥಿರ ಛಾಯಾಗ್ರಹಣ,ವರ್ಣಚಿತ್ರ, ಶಿಲ್ಪ ಕಲೆ,ಡಿಜಿಟಲ್ ಮೀಡಿಯಾಗಳೊಂದಿಗೆ ಸಾಂಗತ್ಯ , ಹೀಗೆ ವಿಭಿನ್ನ ಕ್ಷೇತ್ರಗಳ ಬಹು ಆಸಕ್ತಿಯ ಲೇಖಕ, ಕಲಾವಿದ ಗಿರಿಧರ್ ಖಾಸನೀಸರ ‘ಕಾಣುತ್ತ ಕಾಣುತ್ತ ಕೇಳುತ್ತ ಕೇಳುತ್ತ ಆರು ತೆರೆಯ ನೋಡಂಬಿಗ ‘ಐವತ್ತು ಅತಿ ಸಣ್ಣ ನಾಟಕಗಳ ಕೃತಿಯಲ್ಲಿನ ನಾಟಕಗಳು ಕೆಲವು ಸೆಕೆಂಡುಗಳ ಕಾಲದ ಅವಧಿಗೆ ಮುಗಿದರೂ ಪಾತ್ರಧಾರಿಗಳ ಚಿತ್ರಗಳು,ಮುಖಭಾವ ಮತ್ತು ಭಾವನೆಗಳ ಹ್ಯಾಂಗೋವರಗಳಿಂದ ಓದುಗ/ಪ್ರೇಕ್ಷಕ ಹೊರಬರಲು ಸಾಕಷ್ಟು ಸಮಯವೇ ತೆಗೆದುಕೊಳ್ಳುತ್ತವೆ.
ಭಾರತ ವಿಭಜನೆಯ ಕರಾಳ ನೆನಪಿನ ಸುರುಳಿ ಬಿಚ್ಚಿದ ವಯೋವೃದ್ಧನ ‘ಲಾಹೋರಿನವ’ ನಾಟಕ ವಂತೂ ಮಾಂಟೋನನ್ನು ನೆನಪಿಸುತ್ತದೆ.
ಯುವಕನಿಗೆ ಪ್ರೇಮಪತ್ರ ಬರೆಯುವುದರ ಕುರಿತು ಗುಬ್ಬಿಯೊಂದು ಹೇಳುವ “ಪ್ರೇಮವಿದ್ದರೆ ಪತ್ರ ಬೇಕಿಲ್ಲ.ನಾನಿನ್ನು ಬರ್ತೀನಿ,ಪಾರ್ಕಿನಲ್ಲಿ ನನ್ನವನು ಕಾಯ್ತಿರ್ತಾನೆ.ಸದ್ಯ, ಅವನಿಗೆ ಓದೋದು ಬರೆಯೋದು ಏನೂ ಬರಲ್ಲ.ಐ ಆಮ್ ಸೋ ಲಕ್ಕಿ”ಹೀಗೆ
ಕೆಲವೇ ಸಾಲುಗಳಲ್ಲಿ ಬದುಕಿನ ನಿರರ್ಥಕತೆಯನ್ನು ಮಂತ್ರಮುಗ್ಧಗೊಳಿಸುವಂತೆ ಅನಾವರಣ ಗೊಳಿಸುತ್ತಾರೆ.
ಇಂಥದ್ದೇ ‘ಚಪ್ಪಲಿಗಳು’ಎಂಬ ಅತಿ ಸಣ್ಣ ನಾಟಕದಲ್ಲಿ,ಎರಡು ಚಪ್ಪಲಿಗಳೇ ಪಾತ್ರಧಾರಿ ಗಳಾಗಿ, ಇವುಗಳ ನಡುವಿನ ಸಂಭಾಷಣೆಯಿಂದಲೇ ಬದುಕಿನ ಪರಿತಾಪ,ಮನುಷ್ಯನ ಸ್ಥಿತಿಗತಿಗಳನ್ನು ಮನಮುಟ್ಟುವಂತೆ ದರ್ಶಿಸುತ್ತಾರೆ.
Read also : ದಿನಮಾನ-ಪುಸ್ತಕ ವಿಮರ್ಶೆ|ಮನುಷ್ಯನ ಮಹಾಯಾನ:ಬಿ.ಶ್ರೀನಿವಾಸ
ಎಡಗಾಲಿನ ಚಪ್ಪಲಿಯು, “ಯಾಕೋ ತನ್ನ ಮಾಸ್ಟರ್ ಕಾಣ್ತಾ ಇಲ್ಲ.ಏನಾಯ್ತೋ ಏನೋ?” ಎಂದು ಪರಿತಪಿಸಿದರೆ,ಬಲಗಾಲಿನ ಚಪ್ಪಲಿ, ”ಅಯ್ಮೋ,ನಿನಗೆ ವಿಷಯ ಗೊತ್ತಿಲ್ಲವೆ?ಮಾಸ್ತರರಿಗೆ ಅಪಘಾತವಾಗಿ,ಒಂದು ಕಾಲನ್ನು ಕತ್ತರಿಸಲಾಗಿದೆಯಂತೆ.
ಎಡಗಾಲೋ…ಬಲಗಾಲೋ..ಗೊತ್ತಾಗಲಿಲ್ಲ”ಎಂದು ನಿಟ್ಟುಸಿರು ಬಿಡುತ್ತದೆ. ಇಂತಹ ಒಟ್ಟು ಐವತ್ತು ಪುಟ್ಟ ಪುಟ್ಟ ಚಿತ್ರಿಕೆಗಳಿರುವ ಈ ಪುಸ್ತಕ,ಓದುಗನ ಗಮನಸೆಳೆಯುತ್ತದೆ.
ಪುಸ್ತಕ ವಿಮರ್ಶೆ : ಬಿ.ಶ್ರೀನಿವಾಸ
ಕಾಣುತ್ತ ಕಾಣುತ್ತ ಕೇಳುತ್ತ ಕೇಳುತ್ತ
ಆರು ತೆರೆಯ ನೋಡಂಬಿಗ
ಐವತ್ತು ಅತಿ ಸಣ್ಣ ನಾಟಕಗಳು
ಲೇಖಕ:ಗಿರಿಧರ್ ಖಾಸನೀಸ್
ನವಕರ್ನಾಟಕ ಪ್ರಕಾಶನ
