Kannada News | Dinamaana.com | 11-10-2024
ದೊಡ್ಡವರೆಲ್ಲ ನೆನಪಿಸಿಕೊಳ್ಳಿ , ನಾವು ಚಿಕ್ಕವರಿದ್ದಾಗ ಎಲ್ಲರ ಬಳಿ ಆಟ ಆಡಲು ಸಾಕಷ್ಟು ಗೊಂಬೆಗಳು ಇರುತ್ತಿದ್ದವು. ಒಂದೊಂದು ಗೊಂಬೆಗು ಒಂದೊಂದು ಕಥೆ ಇರುತಿತ್ತು. ಇದು ಅಪ್ಪ ನನ್ನ ಜನ್ಮದಿನಕ್ಕೆ ತಂದು ಕೊಟ್ಟಿ ಗೊಂಬೆ, ಇದು ಅಮ್ಮ ತನ್ನ ಗೆಳತಿಯ ಜೊತೆ ಸುತ್ತಾಡಲು ಹೋದಾಗ ನನ್ನ ಸಮಾಧಾನ ಪಡಿಸಲೆಂದು ಮನೆಗೆ ಬರುವಾಗ ತಂದು ಕೊಟ್ಟಿದ್ದಂತಹ ಗೊಂಬೆ.
ಮತ್ತೊಂದು ಅಜ್ಜಿ ಮನೆಯಲ್ಲಿ ಇದ್ದದ್ದನ್ನು ನಾನೇ ಇಷ್ಟಪಟ್ಟು ತೆಗೆದುಕೊಂಡು ಬಂದಂತಹ ಗೊಂಬೆ. ಕೆಲವೊಮ್ಮೆ ಸಂತೆ ಬೀದಿಯಲ್ಲಿ ಹೋಗುವಾಗ ಅಂಗಡಿಯ ಹೊರಗೆ ಇಟ್ಟಿದ್ದ ಒಂದು ಗೊಂಬೆ ನನ್ನನ್ನು ಬಾ ಎಂದು ಕರೆದಂತಾಗಿ ಅದರ ಬಳಿ ಹೋಗಿ, ಅಪ್ಪ ಅಮ್ಮ ಬೇಡವೆಂದರೂ ಹಠ ಮಾಡಿ ಕಾಡಿಬೇಡಿ ನಾನೇ ತೆಗೆಸಿಕೊಂಡ ಅಚ್ಚುಮೆಚ್ಚಿನ ಗೊಂಬೆ ಅಣ್ಣನ ಬಳಿ ಇದ್ದ ಗೊಂಬೆಯನ್ನು ಜಗಳ ಮಾಡಿ “ಈ ಗೊಂಬೆ ನನ್ನದೇ” ಎಂದು ಜಗಳದಲ್ಲಿ ಗೆದ್ದ ಗೊಂಬೆ.
ಹೀಗೆ ಹಿಂದಿನ ಕಾಲದಲ್ಲಿ ಮಕ್ಕಳಿಗೆ ಗೊಂಬೆಗಳೇ ಅವರ ಪರಿವಾರ.. ಗೊಂಬೆಗಳನ್ನು ಮುಂದೆ ಕೂರಿಸಿಕೊಂಡು, ಕೈಯಲ್ಲಿ ಬಿದುರಿನ ಬೆತ್ತ ಹಿಡಿದು, ಸ್ಕೂಲ್ ಟೀಚರ್ ಆಟ, ಅಪ್ಪನಂತೆ ಗದರಿಸುವುದು, ಅಮ್ಮನಂತೆ ಮುದ್ದಿಸುವುದು.. ಗೊಂಬೆಗಳ ಮುಂದೆ ತಟ್ಟೆ ಇಟ್ಟು ಮಾಡುತ್ತಿದ್ದ ಅಡುಗೆ ಮನೆಯ ಆಟ,ಗೊಂಬೆಗೆ ಮಕ್ಕಳೇ ಟೀಚರ್ ಆಗಿ ಹೇಳಿಕೊಡುವ ಹೋಂವರ್ಕ್ ಜೊತೆಗೆ ತಾವು ಬರೆದು ಮುಗಿಸುತ್ತಿದ್ದ ಸ್ಕೂಲ್ ಪಾಠಗಳು…ಹೀಗೆಲ್ಲಾ ಗೊಂಬೆಗಳ ಜೊತೆಗೆ ಮಧುರ ಬಾಂಧವ್ಯ .. ಈಗ ಸವಿ ನೆನಪುಗಳು ಮಾತ್ರ.
ಮನೆಯಲ್ಲಿ ಆಡುವ ಮಕ್ಕಳಿದ್ದಾರೆಂದರೆ ಮನೆಗೆ ಬಂದು ಹೋಗುವ ಆಪ್ತ ನೆಂಟರಿಷ್ಟರು, ಅಜ್ಜಿ ತಾತ, ಚಿಕ್ಕಪ್ಪ ಚಿಕ್ಕಮ್ಮ, ಅತ್ತೆ ಮಾವ..ಹೀಗೆ ಮಕ್ಕಳಿಗಾಗಿ ತಂದುಕೊಡುತ್ತಿದ್ದ ಚಿಕ್ಕಪುಟ್ಟ ಬಣ್ಣ ಬಣ್ಣದ ಮುದ್ದಾದ ಗೊಂಬೆಗಳು…ಆಹಾ! ಎಂತಹ ಸುಂದರ ಲೋಕವದು…
ನವರಾತ್ರಿ ದಸರಾ ಹಬ್ಬ ಬಂದಿತೆಂದರೆ ಮಕ್ಕಳೆಲ್ಲ ಸೇರಿ ಅವರವರ ಮನೆಯಲ್ಲಿ ತಾವು ಕಲೆ ಹಾಕಿದಂತಹ ಗೊಂಬೆಗಳನ್ನು, ಬಗೆ ಬಗೆಯಾಗಿ ಅಲಂಕೃತಗೊಂಡ ಪಟ್ಟದ ಗೊಂಬೆಯ ಜೊತೆಗೆ ಪಟ್ಟಕ್ಕೆ ಏರಿಸಿ ಕೂರಿಸಿ ಸಂಭ್ರಮಿಸುವುದು. ಪ್ರತಿಯೊಂದು ಮನೆಯಲ್ಲೂ ಒಂದೊಂದು ದಸರಾ ಕಥೆಯನ್ನು ಸಾರುವ ಅಲಂಕೃತವಾದ ಸಾಲು ಸಾಲು ಗೊಂಬೆಗಳು…ಇಂತಿಷ್ಟೇ ಗೊಂಬೆ ಕೂರಿಸಬೇಕೆಂಬ ನಿಯಮವಿಲ್ಲ. ಪಟ್ಟದ ಬೊಂಬೆ, ಚನ್ನಪಟ್ಟಣದ ಗೊಂಬೆ, ಆಟಿಕೆಯ ಗೊಂಬೆ, ಮರದ ಗೊಂಬೆ ಹಕ್ಕೀ ಪಕ್ಷಿಗಳು ಪ್ರಾಣಿಗಳು..ಹೀಗೆ ಹಲವಾರು ಬಗೆಯ ಬೊಂಬೆಗಳನ್ನು ಕೂರಿಸಿ ನವರಾತ್ರಿಯ 10 ದಿನವೂ ಸಂಜೆಯ ಹೊತ್ತು ಬೊಂಬೆಗಳಿಗೆ ಆರತಿ ಮಾಡಿ, ಮಕ್ಕಳಿಗೆ ಕೊಡಲು ಮಾಡುತ್ತಿದ್ದ ಪುಟ್ಟ ಪುಟ್ಟ ಬಾಗಿನಕ್ಕೆಂದು ಬಗೆಬಗೆಯ ತಿಂಡಿಗಳು, ಅದನ್ನು ಪಡೆಯಲೆಂದೆ ಮಕ್ಕಳು ಆಸೆಯಿಂದ ಕರೆದವರ ಮನೆಗೆ ಸಂಜೆ ಗೊಂಬೆ ಆರತಿಗೆ ಹೋಗುತ್ತಿದ್ದ ಸಂಭ್ರಮ.. ಈಗ ಎಲ್ಲವೂ ಕೆಲವರಿಗಷ್ಟೇ ಸೀಮಿತವಾಗಿ ಉಳಿದಿದೆ.
ಪ್ರತಿಯೊಂದು ಮಗುವಿನ ಕೈಗೂ ಒಂದೊಂದು ಮೊಬೈಲ್ ಬಂದು ಈ ಸಂಭ್ರಮವೆಲ್ಲ ನಶಿಸಿ ಮನೆಯಲ್ಲಿರುವ ಗೊಂಬೆಗಳು ಧೂಳು ಹಿಡಿದು ಅಳುವಂತಾಗಿದೆ.. ತಮ್ಮನ್ನು ಎತ್ತಿ ಆಡಿಸಿ ಮುದ್ದಾಡಿವ ಮಕ್ಕಳ ಕೋಮಲ ಕೈಗಳಿಲ್ಲವೆಂದು ಗೊಂಬೆಗಳು ಪರಿ ತಪ್ಪಿಸುತ್ತಿವೆ…ದೊಡ್ಡವರು ಸಹ “ಅಯ್ಯೋ ಅದೆಲ್ಲ ಜೋಡಿಸುವುದು, ತೆಗೆಯುವುದು ಕಷ್ಟದ ಕೆಲಸ, ಮಾಡಲು ಸಮಯವಿಲ್ಲ” ಎಂದು ಹೇಳಿ ಅವರ ನಿರಾಸಕ್ತಿಯನ್ನು ತೋರಿಸುತ್ತಿದ್ದಾರೆ.. ಇದರ ಜೊತೆಗೆ ನಮ್ಮ ನಾಡ ಹಬ್ಬ ದಸರಾದ ವೈಭವ ಎಲ್ಲೋ ಒಂದು ಕಡೆ ಆಧುನಿಕತೆಯ ಮೆರಗನ್ನು ಪಡೆದು ಬೇರೆಯದೇ ರೀತಿಯಲ್ಲಿ ಸಂಭ್ರಮಿಸುತ್ತಿರುವುದು ಗೋಚರಿಸುತ್ತಿದೆ.
ಮಕ್ಕಳ ದಸರಾ, ಯುವ ದಸರಾ ,ಮಹಿಳಾ ದಸರಾ, ರೈತರ ದಸರಾ ಹೀಗೆ ಹಲವಾರು ಹೆಸರುಗಳೊಂದಿಗೆ ಬೇರೆ ರೀತಿಯಲ್ಲಿ ಕಾಣುತ್ತಿದ್ದೇವೆ.. ಏನೇ ಆದರೂ ಇವುಗಳ ಜೊತೆಗೆ ಬಗೆ ಬಗೆಯ ಕಥೆಗಳನ್ನು ಸಾರುವ ಗೊಂಬೆಗಳು ನಮ್ಮ ಬದುಕಿನ ಅಂಗವಾಗಿ ಉಳಿಯಬೇಕೆಂಬುದೇ ದಸರಾ ಹಬ್ಬದ ವಿಶೇಷವಾಗಬೇಕು. ಗೊಂಬೆಗಳ ಜೊತೆ ಮಕ್ಕಳು ಆಟವಾಡಿಕೊಂಡು ಮಾತನಾಡುವುದು ಎಂದರೆ ತಮ್ಮ ಮನಸ್ಸಿನ ಭಾವನೆಗಳನ್ನು, ಉದ್ವೇಗವನ್ನು ಹೊರ ಹಾಕುವ ಒಂದು ಸಾಧನವಾಗಿರುತ್ತಿತ್ತು.. ತಮ್ಮದೇ ಗೊಂಬೆಗಳ ಲೋಕದಲ್ಲಿ ವಿಹರಿಸಿ ಮನಸ್ಸನ್ನು ಹಗುರಗೊಳಿಸಿಕೊಳ್ಳುವ ಜೀವನದ ಕಲೆಯ ಭಾಗವಾಗಿರುತ್ತಿತ್ತು.. ಆದರೆ, ಈಗ ಮೊಬೈಲ್ ಹಾವಳಿಯಿಂದಾಗಿ ಪುಟ್ಟ ಪುಟ್ಟ ಮಕ್ಕಳು ಗೊಂಬೆ ಆಟವನ್ನು ಮರೆತು, ಮೊಬೈಲ್ಗೆ ದಾಸರಾಗಿ, ಮಾನಸಿಕ ಖಿನ್ನತೆಗೆ ಒಳಗಾಗಿ ವೈದ್ಯರ ಬಳಿಗೆ ಧಾವಿಸುತ್ತಿರುವುದು ಗೋಚರವಾಗಿದೆ. ಇಂದಿನ ಮಕ್ಕಳೆಲ್ಲ ಬಾಲ್ಯದಲ್ಲೇ ಹರೆಯದವರಂತಾಗುತ್ತಿರುವುದು ಎಷ್ಟು ಸರಿ? ಯೋಚಿಸಿ ನೋಡಿ.
ಸವಿತಾ ಎಸ್ ವೆಂಕಟೇಶ್
ಸಹಪ್ರಾಧ್ಯಾಪಕರು.
ಮೈಸೂರು.