ಬೆಂಗಳೂರು : ಇನ್ನೋನೆಕ್ಸ್ಟ್ ಮೈಂಡ್ ಪ್ರೈವೇಟ್ ಲಿಮಿಟೆಡ್ (ಏರಿಯನ್ ಭಾರತ್) ಆಶ್ರಯದಲ್ಲಿ ನಡೆದ ಆಸ್ಟ್ರಾನೊಮಿ ಎಕ್ಸ್‍ಪೋ 1.0 ರ ಆವೃತ್ತಿ ನಗರದ ಮಂತ್ರಿ ಮಾಲ್‍ನ ಐನಾಕ್ಸ್ ಚಿತ್ರಮಂದಿರಲ್ಲಿ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವು ವಿಜ್ಞಾನಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ಖಗೋಳಶಾಸ್ತ್ರದಲ್ಲಿನ ಬೆಳವಣಿಗೆಗಳನ್ನು ಅನ್ವೇಷಿಸಲು ಹೊಸ ಸಾಧ್ಯತೆ ಪರಿಚಯಿಸಿತು.
ಇನ್ನೋನೆಕ್ಸ್ಟ್ ಮೈಂಡ್ ಪ್ರೈವೇಟ್ ಲಿಮಿಟೆಡ್ (ಏರಿಯನ್ ಭಾರತ್) ಅಸ್ಟ್ರಾನೋಮಿ ಎಕ್ಸ್‍ಪೋ 1.0 ಪ್ರದರ್ಶನದಲ್ಲಿ ಐಎನ್-ಸ್ಪೇಸ್‍ನ ಪ್ರಚಾರ ನಿರ್ದೇಶನಾಲಯದ ನಿರ್ದೇಶಕ ಡಾ. ವಿನೋದ್ ಕುಮಾರ್, ಇಸ್ರೋದ ಮಾಜಿ ಮಿಷನ್ ನಿರ್ದೇಶಕ ಟಿ.ಕೆ. ಸುಂದರಮೂರ್ತಿ, ಯುಆರ್‍ಎಸ್‍ಸಿಯ ಮಾಜಿ ನಿರ್ದೇಶಕ ಎಂ.ಎಸ್. ಶ್ರೀನಿವಾಸನ್, ಮತ್ತು ಅಂತರರಾಷ್ಟ್ರೀಯ ಖಗೋಳ ಒಕ್ಕೂಟದ ಸದಸ್ಯೆ ಮತ್ತು ಖಗೋಳ ಭೌತಶಾಸ್ತ್ರಜ್ಞೆ ಡಾ. ಮಾರ್ಗರಿಟಾ ಸಪೋನೊವಾ ಸೇರಿದಂತೆ ಪ್ರಮುಖ ಬಾಹ್ಯಾಕಾಶ ತಜ್ಞರು ಭಾಗವಹಿಸಿದ್ದರು.
ಮಕ್ಕಳ ಹಕ್ಕುಗಳ ಕಾರ್ಯಕರ್ತ ಮತ್ತು ಡಿಒಪಿಟಿ ಸಚಿವಾಲಯದ ಹಿಂದಿ ಸಲಹಾ ಸಮಿತಿಯ ಸದಸ್ಯ ರಾಘವೇಂಧೀರಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೈಬರಹ ತಜ್ಞ ಪ್ರೋ. ಕೆ.ಸಿ. ಜನಾರ್ದನ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಅಸ್ಟ್ರಾನೋಮಿ ಎಕ್ಸ್‍ಪೋ ಲಾಂಛನ ಮತ್ತು ಅಧಿಕೃತ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಬಾಹ್ಯಾಕಾಶ ಪರಿಶೋಧನೆ ಮತ್ತು ರಾಕೆಟ್ ತಂತ್ರಜ್ಞಾನದ ಪ್ರಮುಖ ಅಂಶಗಳ ವಿಶೇಷ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಓಯಸಿಸ್ ಇಂಟರ್ ನ್ಯಾಶನಲ್ ಶಾಲೆಯ ಮಕ್ಕಳು ಭಾಗವಹಿಸಿದ್ದರು.
ಮಾತನಾಡಿದ ರಾಘವೇಂಧೀರಾ, ತಂತ್ರಜ್ಞಾನ ಮತ್ತು ಹೊಸ ಅವಿಷ್ಕಾರಗಳ ಪರಿಣಾಮ ಇಂದು ಬಾಹ್ಯಾಕಾಶ ವಿಜ್ಞಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ಅಭ್ಯಾಸ ಮಾಡಲು ಸಾಧ್ಯವಾಗಿದೆ. ಪ್ರತಿಯೊಂದು ಗ್ರಹಗಳು ಮತ್ತು ಸೌರಮಂಡಲದ ಅಧ್ಯಯನಕ್ಕೆ ಇದು ನೆರವಾಗಿದೆ ಎಂದು ಹಾರೈಸಿದರು.
ಈ ಕಾರ್ಯಕ್ರಮವು ಇಸ್ರೋ ಮಾರ್ಗದರ್ಶಕರಿಂದ ಮಾರ್ಗದರ್ಶನ ಪಡೆದ ಭಾರತದ ಮೊದಲ ಶೈಕ್ಷಣಿಕ ರಾಕೆಟ್ ತಂತ್ರಜ್ಞಾನ ಪ್ರಯೋಗಾಲಯ ಎಂದು ವಿವರಿಸಲಾದ ಆರ್ಯಭಟ ಶೈಕ್ಷಣಿಕ ರಾಕೆಟ್ ಪ್ರಯೋಗಾಲಯದ ಉದ್ಘಾಟನೆ ನಡೆಯಿತು. ವಿವಿಧ ಹಂತಗಳಲ್ಲಿರುವ ವಿದ್ಯಾರ್ಥಿಗಳಿಗೆ ಸ್ಮಾರ್ಟ್, ಅನುಭವಿ STEM ಕಲಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿರುವ ವಿದ್ಯಾರ್ಥಿ ಬಾಹ್ಯಾಕಾಶ ಕಲಿಕಾ ಅಪ್ಲಿಕೇಶನ್ ಅನ್ನು ಅನಾವರಣಗೊಳಿಸಲಾಯಿತು.
ಇನ್ನೋನೆಕ್ಸ್ಟ್- ಏರಿಯನ್ ಭಾರತ್ ಸಿಇಒ ರಶ್ಮಿ ಸುಮಂತ್ ಮತ್ತು ಪ್ರಾದೇಶಿಕ ಸಂಯೋಜಕ ಸಂದೀಪ್ ಸೇರಿದಂತೆ ಏರಿಯೋನ್ ಭಾರತ್‍ನ ಪ್ರತಿನಿಧಿಗಳು, ತಳಮಟ್ಟದಲ್ಲಿ ಬಾಹ್ಯಾಕಾಶ ಶಿಕ್ಷಣವನ್ನು ಉತ್ತೇಜಿಸುವಲ್ಲಿ ನಡೆಯುತ್ತಿರುವ ವಿವಿಧ ಪ್ರಯತ್ನಗಳನ್ನು ಉದ್ದೇಶಿಸಿ ಮಾತನಾಡಿದರು.
Read also : ದಾವಣಗೆರೆ|ಪ್ಲಾಸ್ಟಿಕ್ ಮಾನವನ ಆರೋಗ್ಯ ಹಾಗೂ ಪರಿಸರಕ್ಕೆ ಮಾರಕ
ಜತೆಗೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಖಗೋಳಶಾಸ್ತ್ರದ ಪ್ರಸ್ತುತತೆಯ ಕುರಿತು ಗಣ್ಯರು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು. 150 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಪ್ರಾಂಶುಪಾಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಸ್ಟ್ರೋನಮಿ ಎಕ್ಸ್ ಪೋ ಮೊದಲ ಆವೃತ್ತಿಯಲ್ಲಿ ನಗರದ ಓಯಸಿಸ್ ಇಂಟರ್ ನ್ಯಾಶನಲ್ ಶಾಲೆ ಪ್ರಥಮ ಸಹಭಾಗಿತ್ವ ಹೊಂದಿತ್ತು. ವಿದ್ಯಾರ್ಥಿಗಳು, ಶಿಕ್ಷಕರು ಸಕ್ರಿಯವಾಗಿ ಭಾಗವಹಿಸಿದರು.