ಹರಿಹರ: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ಮುಂದಿನ 10 ದಿನಗಳವರೆಗೆ ಮುಂದುವರೆಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸೆ.22 ರಿಂದ ಆರಂಭವಾಗಿರುವ ಸಮೀಕ್ಷಾ ಕಾರ್ಯ ಅ.7ರವರೆಗೆ ನಡೆಯಲಿದೆ. ದಸರಾ ನಿಮಿತ್ತ ಶಾಲಾ, ಕಾಲೇಜುಗಳಿಗೆ ರಜೆ ನೀಡಿರುವುದರಿಂದ ಪೋಷಕರು ಕುಟುಂಬ ಸಮೇತ ತಮ್ಮ ಸ್ವಂತ ಊರುಗಳಿಗೆ, ಪ್ರವಾಸಕ್ಕೆ ತೆರಳಿರುತ್ತಾರೆ. ಪರಿಣಾಮವಾಗಿ ಸಮೀಕ್ಷೆ ನಡೆಸುವ ಸರ್ಕಾರದ ಉದ್ದೇಶ ಪರಿಪೂರ್ಣವಾಗಿ ಈಡೇರುವುದಿಲ್ಲ. ದಲಿತ, ಹಿಂದುಳಿದ ವರ್ಗಗಳು ಹಾಗೂ ಬಡವರ ಪಾಲಿಗೆ ಬಹು ಮುಖ್ಯವಾದ ಈ ಸಮೀಕ್ಷೆ ಪರಿಪೂರ್ಣವಾಗಬೇಕಿದೆ. ಹೀಗಾಗಿ ಸಮೀಕ್ಷಾ ಕಾರ್ಯವನ್ನು ಅ.17ರವರೆಗೆ ಮುಂದುವರೆಸಬೇಕೆಂದು ಒತ್ತಾಯಿಸಿದ್ದಾರೆ.
Read also : ದಾವಣಗೆರೆ: ನದಿಗೆ ಬೀಳಲು ಹೋಗಿದ್ದ ವೃದ್ದೆ ರಕ್ಷಿಸಿದ ಪೊಲೀಸರು
ಈ ಹಿಂದೆ ರಾಜ್ಯ ಸರ್ಕಾರದಿಂದ ನಡೆಸಿದ ಜಾತಿ ಸಮೀಕ್ಷೆಗಾಗಿ 158 ಕೋಟಿ ಅನುದಾನ ಖರ್ಚು ಮಾಡಲಾಯಿತು, ಆದರೆ ಆ ಸಮೀಕ್ಷಾ ಕಾರ್ಯ ತಾರ್ಕಿಕ ಹಂತಕ್ಕೆ ತಲುಪಲಿಲ್ಲ. ಈ ಬಾರಿಯ ಸಮೀಕ್ಷಾ ಕಾರ್ಯ ತಾರ್ಕಿಕ ಹಂತಕ್ಕೆ ತಲುಪಬೇಕು, ದುರ್ಬಲ ವರ್ಗದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಸಾಪಳ್ಯತೆ ಪಡೆಯಬೇಕೆಂದೂ ಅವರು ಆಗ್ರಹಿಸಿದ್ದಾರೆ.
ಸಮೀಕ್ಷೆಗೆ ಸಹಕರಿಸಿ: ಬಲಾಢ್ಯರು, ಸ್ಥಿತಿವಂತರು, ಮನುಸ್ಮøತಿ ಆರಾಧಕರು ಈ ಸಮೀಕ್ಷೆ ಯಶಸ್ವಿಯಾಗದಂತೆ ತಡೆಯಲು ಹುನ್ನಾರ ನಡೆಸಿದ್ದಾರೆ. ಬಡವರ ಪರ ಇರುವ ಈ ಸಮೀಕ್ಷಾ ಕಾರ್ಯಕ್ಕೆ ಎಲ್ಲಾಧರ್ಮ, ಜಾತಿ, ಪಂಗಡದವರು ಸಹಕರಿಸಿ ಯಶಸ್ವಿಗೊಳಿಸಬೇಕಾಗಿ ಕೋರಿದ್ದಾರೆ.
