ದಾವಣಗೆರೆ : ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದನ್ವಯ ಸೆ. 13 ರಂದು ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಕೆ.ವೇಲಾ ತಿಳಿಸಿದರು.
ಜಿಲ್ಲಾ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕುರಿತಂತೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಡಿಮೆ ವೆಚ್ಚದಲ್ಲಿ ತ್ವರಿತವಾಗಿ ಇಬ್ಬರೂ ಕಕ್ಷಿದಾರರ ಒಪ್ಪಿಗೆಯಂತೆ ಸಮಾಧಾನ ತರುವಂತಹ ತೀರ್ಪು ನೀಡಲು ಜನತಾ ನ್ಯಾಯಾಲಯ ಜನರಿಗೆ ಬಹಳಷ್ಟು ಅನುಕೂಲಕರವಾಗಿದೆ. ಲೋಕ ಅದಾಲತ್‍ನಲ್ಲಿ ರಾಜಿಯಾಗುವ ಪ್ರಕರಣಗಳ ಮೇಲೆ ಯಾವುದೇ ಮೇಲ್ಮನವಿ ಹೋಗಲು ಅವಕಾಶ ಇರುವುದಿಲ್ಲ ಮತ್ತು ನ್ಯಾಯಾಲಯದ ತೀರ್ಪಿನಷ್ಟೆ ಮಹತ್ವತೆ ಇರುತ್ತದೆ. ರಾಜಿಯಾಗಬಲ್ಲ ಪ್ರಕರಣಗಳನ್ನು ಲೋಕ ಅದಾಲತ್‍ನಲ್ಲಿ ಬಗೆಹರಿಸಿಕೊಳ್ಳುವುದರಿಂದ ಸಮಯದ ಜೊತೆ ಹಣದ ಉಳಿತಾಯವಾಗಲಿದೆ ಎಂದರು.
ಜಿಲ್ಲೆಯಲ್ಲಿ ಎಲ್ಲಾ 25 ನ್ಯಾಯಾಲಯಗಳಿಂದ ಒಟ್ಟು 42701 ಪ್ರಕರಣಗಳು ಬಾಕಿ ಇರುತ್ತವೆ. ಇದರಲ್ಲಿ ರಾಜಿಯಾಗಬಲ್ಲ ಪ್ರಕರಣಗಳನ್ನು ಇತ್ಯರ್ಥ ಮಾಡಲು ಸೆ. 13 ರಂದು ನಡೆಯುವ ಲೋಕ ಅದಾಲತ್‍ನಲ್ಲಿ 9916 ಪ್ರಕರಣಗಳನ್ನು ಇತ್ಯರ್ಥ ಮಾಡಲು ಗುರಿ ಹೊಂದಲಾಗಿದೆ. ಇದರಲ್ಲಿ ಈಗಾಗಲೇ 2863 ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥ ಮಾಡಿದ್ದು ಅಂತಿಮ ತೀರ್ಪಿನ ವರದಿ ಮಾಡಬೇಕಾಗಿದೆ ಎಂದರು.
Read also : ದಾವಣಗೆರೆ : ದೀಕ್ಷಾಯಾತ್ರೆಗೆ ಆನ್‍ಲೈನ್ ನೋಂದಣಿ
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾತನಾಡಿ, ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸುಮಾರು 15 ಸಾವಿರ ಪ್ರಕರಣಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದ್ದು ಶೇ 50 ರಷ್ಟು ದಂಡ ಪಾವತಿಯೊಂದಿಗೆ ಸೆ.12 ರೊಳಗಾಗಿ ಇತ್ಯರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು.
ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಗುರುಬಸವರಾಜ್ ಮಾತನಾಡಿ, ಲೋಕ ಅದಾಲತ್‍ಗೆ ಎಲ್ಲಾ ವಕೀಲರು ಸಹ ಸಲಹೆ ಸಹಕಾರ ನೀಡಿದ್ದಾರೆ ಎಂದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರಣ್ಣವರ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಜಿ.ಆರ್.ಸ್ವಾಮಿ, ಕಾರ್ಯದರ್ಶಿ ಎಸ್.ಮಂಜು, ಸಹ ಕಾರ್ಯದರ್ಶಿ ರೇವಣಸಿದ್ದಪ್ಪ ಕೆ.ಎಸ್.ಶಾಗಲೆ, ಖಜಾಂಚಿ ಜಿ.ಇ.ವನಜಾಕ್ಷಿ ಉಪಸ್ಥಿತರಿದ್ದರು.