ದಾವಣಗೆರೆ (Davanagere): ಬಿಹಾರ ಸಿಎಂ ನಿತೀಶ್ ಕುಮಾರ್ ಯಾವಾಗಲೂ ಅಧಿಕಾರಕ್ಕಾಗಿ ಪಕ್ಷಾಂತರ ಮಾಡುತ್ತಾರೆ. ಹಾಗಾಗಿ, ಬಿಹಾರ ಕಾಂಗ್ರೆಸ್ ಆಯೋಜಿಸಿರುವ ಪಲಾಯನ್ ರೋಖೋ ನೌಕರಿ ದೋ ಯಾತ್ರೆ ಪಾಟ್ನಾದಲ್ಲಿ ಆಯೋಜಿಸಿದ್ದು, ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಪಾಲ್ಗೊಂಡರು.
ಈಗಾಗಲೇ ಪಾಟ್ನಾದ ಗಾಂಧಿ ಆಶ್ರಮದ ಬೀತರ್ವದಿಂದ ಆರಂಭವಾಗಿರುವ ಈ ಯಾತ್ರೆಯು ಏಪ್ರಿಲ್ 14ರವರೆಗೆ ನಡೆಯಲಿದ್ದು, ಕಾಂಗ್ರೆಸ್ ಯುವ ನಾಯಕ ಕೃಷ್ಣ ಅಲ್ಲವಾರು ನೇತೃತ್ವದಲ್ಲಿ ನಡೆಯುತ್ತಿದೆ. ಈ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಸೈಯದ್ ಖಾಲಿದ್ ಅಹ್ಮದ್ ಅವರು, ಅಧಿಕಾರಕ್ಕಾಗಿ ನಿತೀಶ್ ಕುಮಾರ್ ಯಾವಾಗಲೂ ಪಲಾಯನ ಮಾಡುತ್ತಲೇ ಇರುತ್ತಾರೆ. ಒಮ್ಮೆ ಬಿಜೆಪಿ ಜೊತೆಗೆ ಮತ್ತೊಮ್ಮೆ ಆರ್ ಜೆಡಿ ಜೊತೆಗೆ. ಅಧಿಕಾರ ಸಿಗುತ್ತೆ ಎಂದರೆ ಯಾವ ಪಕ್ಷದವರೊಂದಿಗಾದರೂ ಮೈತ್ರಿ ಮಾಡಿಕೊಳ್ಳುತ್ತಾರೆ. ಇವರನ್ನು ಪಲಾಯನ ಸಿಎಂ ಅಂತಾಲೇ ಕರೆಯುತ್ತಾರೆ ಎಂದು ವ್ಯಂಗ್ಯವಾಡಿದರು.
ನಿತೀಶ್ ಕುಮಾರ್ ಅವರು ಚುನಾವಣೆ ಬಂದಾಗ ಇರುವ ತತ್ವ, ಸಿದ್ಧಾಂತಗಳೇ ಬೇರೆ. ಗೆದ್ದ ಬಳಿಕ ಬದಲಾಗುವ ಸಿದ್ಧಾಂತವೇ ಬೇರೆ. ಜನರ ಪರವಾಗಿರುತ್ತೇನೆ, ಕೋಮು ಸೌಹಾರ್ದ ಕಾಪಾಡುತ್ತೇನೆ ಎನ್ನುವ ನಿತೀಶ್ ಕುಮಾರ್ ಸಿಎಂ ಆಗುವುದಕ್ಕೆ ಯಾವ ಸಿದ್ಧಾಂತವಿದ್ದರೂ ಒಪ್ಪಿಕೊಂಡು ಹಾರಿ ಬಿಡುತ್ತಾರೆ. ಇಂಥ ಪಲ್ಟಿ ರಾಜಕಾರಣಿಗಳಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಹಾರ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಪಲಾಯನ ಮಾಡುವುದನ್ನು ಬಿಟ್ಟು, ರಾಜ್ಯದಲ್ಲಿನ ಲಕ್ಷಾಂತರ ಯುವಕರಿಗೆ ನೌಕರಿ ನೀಡಬೇಕು. ನೌಕರಿ ನೀಡುವ ಭರವಸೆ ನೀಡಿದ್ದ ನಿತೀಶ್ ಕುಮಾರ್ ಮರೆತುಬಿಟ್ಟಿದ್ದಾರೆ. ಇಷ್ಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿದ್ದರೂ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಕೆಲಸ ಮಾಡಿಲ್ಲ. ಯಾವಾಗಲೂ ಅಧಿಕಾರದಲ್ಲಿರಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ನಿತೀಶ್ ಕುಮಾರ್ ಅವರಿಂದ ಯಾರೂ ಸಿದ್ಧಾಂತ ಕಲಿಯಬೇಕಿಲ್ಲ. ಮುಂದೆ ಚುನಾವಣೆ ಬರುವುದರಿಂದ ನಾಟಕ, ಹುಸಿ ಭರವಸೆ, ತತ್ವ,ಸಿದ್ಧಾಂತ ಮಾತನಾಡುತ್ತಾರೆ. ಮರಳು ಮಾಡಲು ಬಣ್ಣಬಣ್ಣದ ಮಾತನಾಡುತ್ತಾರೆ. ಜನತೆ ಇದಕ್ಕೆಲ್ಲಾ ಮರಳಾಗಬಾರದು ಎಂದು ಸೈಯದ್ ಖಾಲಿದ್ ಅಹ್ಮದ್ ಮನವಿ ಮಾಡಿದರು.
Read also : Political analysis | ಅಮಿತ್ ಷಾ ಪರೀಕ್ಷೆಯಲ್ಲಿ ವಿಜಯೇಂದ್ರ ಪಾಸಾದರು
ಈ ಯಾತ್ರೆಯಲ್ಲಿ ಕಾಂಗ್ರೆಸ್ ಯುವ ಮುಖಂಡ ಕನ್ಹಯ್ಯಾ ಕುಮಾರ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು, ಎನ್‌ಎಸ್‌ಯುಐ ರಾಷ್ಟ್ರೀಯ ಅಧ್ಯಕ್ಷ ವರುಣ್, ಬಿಹಾರ ರಾಜ್ಯಾಧ್ಯಕ್ಷ ಗರೀಬ್ದಾಸ್, 300 ಖಾಯಂ ಯಾತ್ರಿಗಳು ಮತ್ತು ಪ್ರತಿನಿತ್ಯ 1000 ಯಾತ್ರಿಗಳು ಸಂಬಂಧಪಟ್ಟ ಜಿಲ್ಲೆಯಿಂದ ಯಾತ್ರೆಗೆ ಸೇರಿಕೊಳ್ಳಲಿದ್ದಾರೆ.