‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ‘
‘ ಗುರುದೇವೋಭವ…. ಇವುಗಳು ಬರೀ ಪದಗಳ ಸಾಲಲ್ಲ….
ಜಗತ್ತಿನಾದ್ಯಂತ ಸರ್ವಕಾಲಿಕವಾಗಿ ಗೌರವಿಸಲ್ಪಟ್ಟ ವ್ಯಕ್ತಿಯೊಬ್ಬ ಇರಬಹುದಾದರೆ ಆತ ಜ್ಞಾನದಾಸೋಹ ಮಾಡಬಲ್ಲ ಗುರು ಮಾತ್ರ. ಮನುಷ್ಯ ಪ್ರಾಣಿ ಕ್ಷಣ ಕ್ಷಣಕ್ಕೂ ನಾಗರಿಕತೆಯಿಂದ ಆಧುನಿಕತೆಯಡೆಗೆ ಇಡುತ್ತಿರುವ ಹೆಜ್ಜೆಗಳಿಗೆ ಗುರುತರವಾದ ಸ್ಪರ್ಶ ನೀಡಿರುವುದು ಗುರು ಪರಂಪರೆಯಿಂದ.
ಗುರುಕುಲದಿಂದ, ಆಧುನಿಕತೆಯ ಉತ್ಕರ್ಷದ ತಂತ್ರಜ್ಞಾನದೊಳಗೆ ನಿರ್ಮಿತವಾಗಿರುವ ಕಟ್ಟಡಗಳವರೆಗೂ ಶಾಲೆಯ ಪರಿಕಲ್ಪನೆ ತೆರೆದುಕೊಳ್ಳುತ್ತದೆ. ಇಂತಹ ಸನ್ನಿವೇಶದಲ್ಲಿ ಜೀವನದ ಸತ್ಯದರ್ಶನಕ್ಕೆ ಬದುಕಿನ ಹಾದಿಗೆ ತಂದೆ ತಾಯಿಗಳ ಜೊತೆ ಗುರುಗಳು ಕೂಡ ಪ್ರತಿಯೊಬ್ಬರ ಬದುಕನ್ನು ರೂಪಿಸುವ ಮತ್ತು ಜ್ಞಾನದ ದೀವಿಗೆಯನ್ನು ಹಚ್ಚುವ ಜ್ಯೋತಿಯಾಗಿದ್ದಾರೆ. ಇಂತಹ ಗುರುಗಳಿಗೆ ಮೀಸಲಾದ ದಿನವೇ “ಶಿಕ್ಷಕರ ದಿನಾಚರಣೆ”.
ಅರಿವೆಂಬ ರವಿಯು ಮೂಡಲು ಗುರುವೆಂಬಾತ್ಮಾರವಿಂದವರಳಿತು ನನ್ನೊಳ್…. ಎನ್ನುವ ಕವಿ ಬೇಂದ್ರೆಯವರ ಗುರು ನಮನವನ್ನು ಅರ್ಥೈಸಿಕೊಳ್ಳುವ ಈ ಹೊತ್ತಿನಲ್ಲಿ ಆದರ್ಶ ಶಿಕ್ಷಕ,ಮಾಜಿ ರಾಷ್ಟ್ರಪತಿ,ಭಾರತ ರತ್ನ,ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣೆಯೊಂದಿಗೆ ನಮ್ಮ ಬದುಕನ್ನು ರೂಪಿಸಿದ ಸಮಸ್ತ ಶಿಕ್ಷಕರಿಗೆ ಧನ್ಯವಾದ,ಕೃತಜ್ಞತೆ ಸಲ್ಲಿಸುವುದು ಇಂದಿನ ಆದ್ಯತೆ.
ಶಿಕ್ಷಣ ಮತ್ತು ಶಿಕ್ಷಕನಿಗೆ ಇರಬಹುದಾದ ಆಯಾಮಗಳು ಇಂದು ವಿಭಿನ್ನವಾಗಿ ತೆರೆದುಕೊಂಡಿವೆ. ಶಿಕ್ಷಕರು ಖುದ್ದಾಗಿ ಮಕ್ಕಳಿಗೆ ಕಲಿಸಬೇಕಾದ ಅವಶ್ಯಕತೆಯಿಲ್ಲ.ಮಕ್ಕಳು ಲ್ಯಾಪ್ಟಾಪ್, ಕಂಪ್ಯೂಟರ್, ಇಂಟರ್ನೆಟ್ ಗಳ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಜಾಗತೀಕರಣದ ಕಾಲಘಟ್ಟದಲ್ಲಿ ಆಧುನಿಕ ಉಪಕರಣಗಳು ಎಷ್ಟೇ ಗುರುತರವಾದ ಛಾಪನ್ನು ಮೂಡಿಸಿದರೂ ಗುರುವಿನ ಮಹತ್ವವೇನು ಕಡಿಮೆಯಾಗಿಲ್ಲ.
ಶಿಕ್ಷಣವನ್ನು ಆಧುನೀಕರಣಗೊಳಿಸುವಲ್ಲಿ ತಂತ್ರಜ್ಞಾನ ಏಕೀಕರಣವು ಜಗತ್ತನ್ನು ಬಿರುಗಾಳಿಯಂತೆ ಕರೆದೊಯ್ಯುತ್ತಿದೆ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯಲ್ಲಿ ಜ್ಞಾನವನ್ನು ಸಂರಕ್ಷಿಸುವ ಮತ್ತು ರವಾನಿಸುವಲ್ಲಿ ಗುರು- ಶಿಷ್ಯರ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.
ಇದರೊಟ್ಟಿಗೆ ಬೌದ್ಧಿಕ, ನೈತಿಕ ಮತ್ತು ಪ್ರಾಯೋಗಿಕ ಕೌಶಲ್ಯಗಳ ನಡುವೆ ಸಮತೋಲನವನ್ನು ಶಿಕ್ಷಕರು ಕಾಯ್ದುಕೊಳ್ಳುವಲ್ಲಿ ಹರಸಾಹಸ ಪಡುವಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ.
ಏಕೆಂದರೆ ಶಿಕ್ಷಣ ಕ್ಷೇತ್ರ ಗೊಂದಲದ ಗೂಡಾಗಿದೆ. ಇಂದು ನಾವು ಪಡೆಯುತ್ತಿರುವ ಶಿಕ್ಷಣ ನಮ್ಮ ಸಮಾಜದ ಮತ್ತು ಕಾಲಮಾನದ ಅಗತ್ಯಗಳನ್ನು ಪೂರೈಸುತ್ತಿದೆಯಾ ಎನ್ನುವ ಮೂಲಭೂತ ಪ್ರಶ್ನೆಗಳನ್ನು ಕೇಳಿಕೊಳ್ಳುವ ತುರ್ತು ನಮ್ಮೆದುರಿಗಿದೆ.
ಇದರ ಹಿನ್ನೆಲೆಯಲ್ಲಿ ಇಲಾಖೆ ಮತ್ತು ಇಲಾಖೇತರ ಕಾರ್ಯಭಾರಗಳ ಒತ್ತಡದಲ್ಲಿ ಮಕ್ಕಳು ಮತ್ತು ಶಿಕ್ಷಕರ ನಡುವಿನ ಸೂಕ್ಷ್ಮ ಸಂವೇದನೆಗಳ ಕೊಂಡಿ ದಿನೇ ದಿನೇ ಕ್ಷೀಣಿಸುತ್ತಿದೆ. ಹೀಗಾಗಿ ಗಂಭೀರವಾದ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ.
ದಿನಕ್ಕೊಂದು ಹೊಸ ಯೋಜನೆಗಳ ಅನುಷ್ಠಾನದ ಭರಾಟೆಯಲ್ಲಿ ಸೌಹಾರ್ದಯುತ ಕಲಿಕೆಯಲ್ಲಿ ತೊಡಗಲಿಕ್ಕೆ ಬಿಡದೆ, ಉಸಿರು ಕಟ್ಟಿದ ವಾತಾವರಣದಲ್ಲಿ ನಮಗರಿವಿಲ್ಲದಂತೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಶಿಕ್ಷಕರು ಹೈರಾಣಾಗಿ, ಮಾನಸಿಕ ಒತ್ತಡಕ್ಕೆ ಸಿಲುಕಿ ಸೇವೆ ಸಲ್ಲಿಸುವಂತಾಗಿದೆ.
ಇದರ ನಡುವೆಯೂ ಶಿಕ್ಷಕರು ಜವಾಬ್ದಾರಿಯುತ ಸ್ಥಾನವನ್ನು ಹೊಂದಿದ್ದು, ಭವಿಷ್ಯದ ಭವ್ಯ ಪ್ರಜೆಗಳನ್ನು ನಿರ್ಮಿಸುವ ಹೊಣೆ ಹೊತ್ತಿದ್ದಾರೆ. ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕಾದರೆ ಅವನು ಬುದ್ಧಿವಂತನಾಗಿದ್ದು, ಭಾವನೆಗಳನ್ನು ನಿಯಂತ್ರಿಸುತ್ತ ” ಪ್ರಗತಿಯಿಂದ ಪ್ರಜ್ಞಾವಂತ ಸಮಾಜದ “ನಿರ್ಮಾಣಕ್ಕೆ ಟೊನ್ಕ ಕಟ್ಟಿ ನಿಂತಿದ್ದಾರೆ.
ಅರಿವಿನ ಬೆಳಕನ್ನು ಹೊತ್ತಿಸುತ್ತಾ, ಪಾರಂಪರಿಕ ಮತ್ತು ವೈಜ್ಞಾನಿಕ,ತಾಂತ್ರಿಕ,ಶಿಕ್ಷಣವನ್ನು ಪಸರಿಸುತ್ತಾ ಬದುಕಿನ ಹಲವು ಜಡತೆಗಳನ್ನು ಸರಳೀಕರಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಪ್ರಜ್ವಲಿಸುವಂತೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಸರ್ವಕಾಲಿಕವಾಗಿ ಬಹುದೊಡ್ಡದಿರುತ್ತದೆ ಎಂದು ಹೇಳುತ್ತಾ “ಅರಿವಿನ ಓಜರಿಗೆ” ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಲೇಖಕರು
ಗೀತಾ ಭರಮಸಾಗರ
ಚಿತ್ರದುರ್ಗ.
9113694200