ಸಹಕಾರ ಸಚಿವ ಕೆ.ಎನ್.ರಾಜಣ್ಣ ಮೊನ್ನೆ ವಿಧಾನಸಭೆಯಲ್ಲಿ ನಿಂತು ಹನಿಟ್ರ್ಯಾಪ್ (Honeytrap) ಬಗ್ಗೆ ಮಾತನಾಡಿದ ನಂತರ ದಿಲ್ಲಿಯ ಕಾಂಗ್ರೆಸ್ ನಾಯಕರು ಮಂಕಾಗಿದ್ದಾರೆ.ಕಾರಣ? ರಾಜಣ್ಣ ಎಪಿಸೋಡಿನ ನಂತರ ಕರ್ನಾಟಕದಿಂದ ಅವರಿಗೆ ತಲುಪುತ್ತಿರುವ ಸಂದೇಶಗಳು ಹಿತಕರವಾಗಿಲ್ಲ.
ದಿಲ್ಲಿಯ ಕಾಂಗ್ರೆಸ್ ಮೂಲಗಳ ಪ್ರಕಾರ,ಹನಿಟ್ರ್ತಾಪ್ ಜಾಲ ಕರ್ನಾಟಕದಲ್ಲಿ ಯಾವ ಮಟ್ಟಕ್ಕೆ ಸಕ್ರಿಯವಾಗಿದೆ ಎಂದರೆ ಮಂತ್ರಿ ರಾಜಣ್ಣ ಮತ್ತವರ ಮಗ ರಾಜೇಂದ್ರ ಅವರ ವಿರುದ್ದ ಮಾತ್ರವಲ್ಲ,ಹಲ ಸಚಿವರು,ಮತ್ತವರ ಮಕ್ಕಳನ್ನೂ ತನ್ನ ಮುಷ್ಟಿಗೆ ಸಿಲುಕಿಸಿಕೊಳ್ಳಲು ಯತ್ನಿಸಿದೆ.
ಹಾಗಂತ ಈ ಜಾಲಕ್ಕೆ ಎಲ್ಲರೂ ಸಿಕ್ಕು ಬಿದ್ದಿದ್ದಾರೆ ಅಂತಲ್ಲ.ರಾಜಧಾನಿ ಬೆಂಗಳೂರಿನ ಒಬ್ಬ ಸಚಿವರನ್ನು ಜಾಲಕ್ಕೆ ಸಿಲುಕಿಸುವ ಯತ್ಬ ನಡೆದಿದೆಯಾದರೂ ಇದರ ಸುಳಿವು ಪಡೆದ ಸಚಿವರು ಜಾಗೃತರಾಗಿದ್ದಾರೆ.ಅಷ್ಟೇ ಅಲ್ಲ, ಹನಿಟ್ರ್ಯಾಪ್ (Honeytrap) ನಡೆಸಲು ಬಂದ ತಂಡದವರನ್ನೇ ಲಾಕ್ ಮಾಡಿ, ಅವರಿಂದ ತಪ್ಪೊಪ್ಪಿಗೆ ಹೇಳಿಕೆ ಪಡೆದು ರೆಕಾರ್ಡ್ ಮಾಡಿಕೊಂಡಿದ್ದಾರೆ.
ಹೀಗೆ ತಮ್ಮನ್ನು ಹನಿಟ್ರ್ಯಾಪ್ (Honeytrap) ಜಾಲಕ್ಕೆ ಸಿಲುಕಿಸಲು ಸುಪಾರಿ ನೀಡಿದವರ್ಯಾರು?ಎಂಬುದೂ ಸೇರಿದಂತೆ ಹಲವು ಮಾಹಿತಿಗಳನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ ಎಂಬುದು ಈ ಮೂಲಗಳ ಮಾತು. ಈ ಮಧ್ಯೆ ರಾಜಧಾನಿಯ ಮತ್ತೊಬ್ಬ ಸಚಿವರು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಲ್ಲವಾದರೂ ಅವರ ಪುತ್ರನನ್ನು ಖೆಡ್ಡಾಕ್ಕೆ ಕೆಡವುದರಲ್ಲಿ ಹನಿಟ್ರ್ಯಾಪ್ ಗ್ಯಾಂಗ್ ಯಶಸ್ವಿಯಾಗಿದೆ.
ಇದೇ ರೀತಿ ಉತ್ತರ ಕರ್ನಾಟಕ ಭಾಗದ ಸಚಿವರೊಬ್ಬರ ಕಿರಿ ವಯಸ್ಸಿನ ಪುತ್ರನನ್ನೂ ಹನಿಟ್ರ್ಯಾಪ್ ಜಾಲ ತನ್ನ ತೆಕ್ಕೆಗೆ ಸಿಲುಕಿಸಿಕೊಂಡಿದೆ. ಹೀಗೆ ತಮ್ಮ ಪುತ್ರನನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿರುವ ಬಗ್ಗೆ ಸಿಟ್ಟಿಗೆದ್ದಿರುವ ಆ ಸಚಿವರು ನೇರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.
ಈ ಮಧ್ಯೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮತ್ತವರ ಪುತ್ರ ರಾಜೇಂದ್ರ ರಾಜಣ್ಣ ಅವರ ಎಪಿಸೋಡು ಸೇರಿದ ನಂತರ ಹನಿಟ್ರ್ಯಾಪ್ ಹೊಡೆತಕ್ಕೆ ಸಿಲುಕಿದವರೆಲ್ಲ ಒಂದಾಗಿದ್ದಾರೆ. ಅಷ್ಟೇ ಅಲ್ಲ,ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವಾಗಲೇ ತಮ್ಮನ್ನು ಮುಗಿಸುವ ಯತ್ನ ಮಾಡಲಾಗಿದೆ.ಅಂದ ಮೇಲೆ ಸಿದ್ಧರಾಮಯ್ಯ ಕೆಳಗಿಳಿದರೆ ತಮ್ಮ ಗತಿ ಏನಾಗಬಹುದು ಅಂತ ಯೋಚಿಸಿದ್ದಾರೆ.
ಮೂಲಗಳ ಪ್ರಕಾರ,ಇನ್ನು ಸಿದ್ಧರಾಮಯ್ಯ ಅವರನ್ನು ಹೊರತುಪಡಿಸಿ ಬೇರೊಬ್ಬರಿಗೆ ಅಧಿಕಾರ ಹಸ್ತಾಂತರ ಮಾಡುವುದನ್ನು ಸಹಿಸಲು ಈ ಸಚಿವರ್ಯಾರೂ ಸಿದ್ದರಿಲ್ಲ. ಹಾಗೊಂದು ವೇಳೆ ಅಂತಹ ಸಂದರ್ಭ ಬಂದರೆ ತಾವು ಸೂಚಿಸುವ ಹೆಸರಿಗೆ ಪಟ್ಟ ಸಿಗಬೇಕು.ಇಲ್ಲದಿದ್ದರೆ ದೊಡ್ಡ ಸಂಖ್ಯೆಯ ಶಾಸಕರೊಂದಿಗೆ ಕಾಂಗ್ರೆಸ್ ತೊರೆಯಬೇಕು ಎಂಬುದು ಅವರ ಯೋಚನೆ. ಅಂದ ಹಾಗೆ ಪಕ್ಷ ತೊರೆಯುವವರು ಅಗತ್ಯಕ್ಕನುಗುಣವಾಗಿ ಬಿಜೆಪಿ ಇಲ್ಲವೇ ಜೆಡಿಎಸ್ ಪಕ್ಷಕ್ಕೆ ಸೇರಬಹುದು.ಮತ್ತು ಹೀಗೆ ಕಾಂಗ್ರೆಸ್ ನಿಂದ ಹೊರಬರುವವರನ್ನು ಸ್ವೀಕರಿಸಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಯಾರಾಗಿಯೇ ಇವೆ.
ಒಂದು ಸಲ ಈ ಕಾರ್ಯಕ್ಕೆ ಚಾಲನೆ ಸಿಕ್ಕ ನಂತರ ಸರ್ಕಾರ ಉಳಿಸಿಕೊಳ್ಳುವ ಯತ್ನ ಕಾಂಗ್ರೆಸ್ ನಿಂದ ನಡೆಯುವುದು ಸಹಜ.ಆದರೆ ಅದು ಯಶಸ್ವಿಯಾಗಲು ಬಿಡದೆ ಕರ್ನಾಟಕದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರುವ ವಾತಾವರಣ ನಿರ್ಮಿಸಬೇಕು. ಹೀಗೆ ಒಂದು ಸಲ ಕರ್ನಾಟಕ ರಾಷ್ಟ್ರಪತಿ ಆಳ್ವಿಕೆಯ ತೆಕ್ಕೆಗೆ ಹೋದರೆ ವಿಧಾನಸಭೆಗೆ ಮಧ್ಯಂತರ ಚುನಾವಣೆ ಅನಿವಾರ್ಯವಾಗುತ್ತದೆ.ಹಾಗೇನಾದರೂ ಆದರೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅದ್ದೂರಿ ಗೆಲುವು ಗಳಿಸಿ ಅಧಿಕಾರಕ್ಕೆ ಬರುತ್ತದೆ ಎಂಬುದು ಈ ಪಡೆಯ ಬಹುತೇಕರ ಯೋಚನೆ. ಪರಿಣಾಮ? ಕರ್ನಾಟಕದಲ್ಲಿ ನಡೆಯುತ್ತಿರುವ ಹನಿಟ್ರ್ಯಾಪ್ ಸಂಘರ್ಷ ಯಾವ ಲೆವೆಲ್ಲಿಗೆ ಹೋಗಬಹುದು?ಎಂಬ ಚಿಂತೆ ದಿಲ್ಲಿಯ ಕಾಂಗ್ರೆಸ್ ವರಿಷ್ಟರನ್ನು ಕಾಡುತ್ತಿದೆ.
ಅಂದ ಹಾಗೆ ಅವರ ಚಿಂತೆಗೂ ಕಾರಣವಿದೆ.ಇವತ್ತು ದೇಶದ ಬಹುತೇಕ ರಾಜ್ಯಗಳು ಬಿಜೆಪಿಯ ಹಿಡಿತದಲ್ಲಿವೆ.ಹೀಗಾಗಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಹೊಡೆತವನ್ನು ಸಹಿಸಿಕೊಂಡು ಮೇಲೆದ್ದು ನಿಲ್ಲಲು ಯತ್ನಿಸಬೇಕೆಂದರೆ ಪಕ್ಷಕ್ಕೆ ಕರ್ನಾಟಕ ಎಂಬ ಸೇನಾ ನೆಲೆ ಬೇಕೇ ಬೇಕು.ಒಂದು ವೇಳೆ ಈ ಸೇನಾ ನೆಲೆ ಕುಸಿದು ಬಿದ್ದರೆ ರಾಷ್ಟ್ರ ರಾಜಕಾರಣದಲ್ಲಿ ಇನ್ನು ತಲೆ ಎತ್ತುವುದು ಕಷ್ಟ ಎಂಬುದು ಅವರ ಆತಂಕ. ಮುಂದೇನು ಕತೆಯೋ ಕಾದು ನೋಡಬೇಕು.
ಅಮಿತ್ ಷಾ ಕಿರಿಕ್ ಮಾಡಿದ್ದೇಕೆ? (Honeytrap)
ಅಂದ ಹಾಗೆ ಹನಿಟ್ರ್ಯಾಪ್ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದರಲ್ಲ? ಈ ವಿಷಯವನ್ನು ಹಿಡಿದುಕೊಂಡು ಅಂದೇ ಸಂಘಟಿತ ಹೋರಾಟಕ್ಕಿಳಿಯಬೇಕಿದ್ದ ಪ್ರತಿಪಕ್ಷ ಬಿಜೆಪಿ ಆ ಕೆಲಸ ಮಾಡಲಿಲ್ಲ. ಇದಕ್ಕೆ ತಮ್ಮ ಪಕ್ಷದ ನಾಯಕರಿಗೆ ಸರ್ಕಾರದ ಟಾಪ್ ಲೀಡರ್ ಗಳ ಜತೆಗಿರುವ ಸಂಪರ್ಕವೇ ಕಾರಣ ಅಂತ ಬಿಜೆಪಿಯ ಹಲ ಶಾಸಕರೂ ಕಿಡಿ ಕಾರಿದ್ದರಂತೆ.
ಅವರ ಪ್ರಕಾರ,ಸಚಿವ ರಾಜಣ್ಣ ಹನಿಟ್ರ್ತಾಪ್ ವಿಷಯ ಪ್ರಸ್ತಾಪಿಸಿದ ನಂತರ,ಆ ವಿಷಯವನ್ನು ಹಿಡಿದುಕೊಂಡು ಅಂದೇ ವಿದಾನಸಭೆಯಲ್ಲಿ ಧರಣಿ ಪ್ರಾರಂಭಿಸಿ,ಆಡಳಿತ ಪಕ್ಷವನ್ನು ಪೇಚಿಗೆ ಸಿಲುಕಿಸಬೇಕಿತ್ತು. ಆದರೆ ಹಾಗೆ ಮಾಡುವ ಬದಲು ಪ್ರತಿಪಕ್ಷ ನಾಯಕ ಅಶೋಕ್ ಅವರಿಂದ ಹಿಡಿದು ಒಬ್ಬೊಬ್ಬ ನಾಯಕರು ಒಂದೊಂದು ಬಗೆಯ ಮಾತನಾಡುತ್ತಾ ಹೋದರು.ಒಬ್ಬರು ನ್ಯಾಯಾಧೀಶರಿಂದ ತನಿಖೆಯಾಗಲಿ ಎಂದರೆ,ಮತ್ತೊಬ್ಬರು ಸಿಬಿಐ ತನಿಖೆಯಾಗಲಿ ಎಂದರು.ಇನ್ನೊಬ್ಬರು ಮಗದೊಂದು ರೀತಿಯ ತನಿಖೆಗೆ ಒತ್ತಾಯಿಸಿದರು.
ಹೀಗೆ ಮಾಡುವ ಬದಲು ಹನಿಟ್ರ್ಯಾಪಿನ ಬಗ್ಗೆ ಸಚಿವರೇ ಆತಂಕ ವ್ಯಕ್ತಪಡಿಸಿರುವುದರಿಂದ ಈ ಸರ್ಕಾರ ವಿಫಲವಾಗಿದೆ ಎಂದು ದೂರಿ ಧರಣಿ ಆರಂಭಿಸಿದ್ದರೆ ಆಟವೇ ಬೇರೆಯಾಗುತ್ತಿತ್ತು.ಮತ್ತು ಇಡೀ ರಾಷ್ಟ್ರದ ಗಮನ ಸೆಳೆಯಲು ಸಾಧ್ಯವಾಗುತ್ತಿತ್ತು.ಆದರೆ ಅದನ್ನು ಮಾಡದೆ ಪಕ್ಷದ ಮುಂಚೂಣಿ ನಾಯಕರು ಕೈ ಚೆಲ್ಲಿದರು ಎಂಬುದು ಈ ಶಾಸಕರ ಸಿಟ್ಟು.
ಯಾವಾಗ ಅವರ ಸಿಟ್ಟು ಬಹಿರಂಗವಾಗಿಯೇ ವ್ಯಕ್ತವಾಯಿತೋ? ಇದಾದ ನಂತರ ವಿಷಯ ಪಕ್ಷದ ವರಿಷ್ಟರ ಕಿವಿಗೆ ತಲುಪಿದೆ.ಹೀಗಾಗಿ ರಾಜ್ಯ ಬಿಜೆಪಿಯ ಇಬ್ಬರು ನಾಯಕರಿಗೆ ಫೋನು ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಕಿರಿಕಿರಿ ಮಾಡಿದ್ದಾರೆ. ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸುವ ಒಂದು ಅವಕಾಶವನ್ನೂ ನೀವು ಕೈ ಬಿಡಬಾರದು.
ಹಾಗೆ ಮಾಡಿ ಅಂತಲೇ ನಿಮ್ಮನ್ನು ಈ ಜಾಗದಲ್ಲಿ ಕೂರಿಸಲಾಗಿದೆ ಅಂತ ಅವರು ಯಾವಾಗ ಗದರಿಕೊಂಡರೋ?ಇದಾದ ಮರುದಿನ ವಿಧಾನಸಭೆಯಲ್ಲಿ ಬಿಜೆಪಿ ಪಡೆ ತೋರುಗಾಣಿಕೆಗಾದರೂ ಸಂಘಟಿತವಾಗಿ ಅಬ್ಬರಿಸಿದೆ. ಆದರೆ ಮೊದಲ ದಿನ ಅವಕಾಶ ಕೈ ಚೆಲ್ಲಿದ ಪರಿಣಾಮವಾಗಿ ಎರಡನೇ ದಿನದ ಅದರ ಹೋರಾಟ ಹೇಳಿಕೊಳ್ಳುವಷ್ಟು ಸದ್ದು ಮಾಡಲಿಲ್ಲ. ಬದಲಿಗೆ ಬಿಜೆಪಿಯ ಹದಿನೆಂಟು ಶಾಸಕರನ್ನು ಸದನದಿಂದ ಅಮಾನತು ಮಾಡಿ ಸ್ಪೀಕರ್ ಯು.ಟಿ.ಖಾದರ್ ಸದ್ದು ಮಾಡಿದರು ಎಂಬುದು ಪಕ್ಷದ ಹಲ ಶಾಸಕರ ಅಸಮಾಧಾನ.
ವಿಜಯೇಂದ್ರ ಪದಚ್ಯುತಿಗೆ ಹೊಸ ತಂತ್ರ (Honeytrap)
ಈ ಮಧ್ಯೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಕೆಳಗಿಳಿಯುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆಯೇ ವಿರೋಧಿ ಪಾಳಯದಲ್ಲಿ ಮೌನ ನೆಲೆಸಿದೆ. ಹಾಗಂತ ಅದು ಹತಾಶೆಯಿಂದಾದ ಮೌನ ಅಂತಲ್ಲ.ಬದಲಿಗೆ ವಿಜಯೇಂದ್ರ ಅವರನ್ನು ಕೆಳಗಿಳಿಸಲು ಹೊಸ ತಂತ್ರ ರೆಡಿಯಾಗಿದೆ ಎಂಬ ಸಂದೇಶದ ಹಿನ್ನೆಲೆಯಲ್ಲಿ ನೆಲೆಸಿದ ಮೌನ. ಅಂದ ಹಾಗೆ ದಿಲ್ಲಿಯ ಬಿಜೆಪಿ ವರಿಷ್ಡರು ವಿಜಯೇಂದ್ರ ಅವರನ್ನು ಬದಲಿಸದಿರಲು ಏನು ಕಾರಣ ಅನ್ನುವುದು ರಹಸ್ಯವಲ್ಲ.ಅದೆಂದರೆ ರಾಜ್ಯದಿಂದ ಅಮಿತ್ ಷಾ ತರಿಸಿರುವ ಸರ್ವೆ ರಿಪೋರ್ಟು.ಈ ರಿಪೋರ್ಟು ವಿಜಯೇಂದ್ರ ಅವರಿಗೆ ಬೋಪರಾಕ್ ಎಂದಿದೆ.
ಇಂತಹ ಸ್ಥಿತಿಯಲ್ಲಿ ವಿಜಯೇಂದ್ರ ಅವರನ್ನು ಬದಲಿಸಲು ಸಾಧ್ಯವಿಲ್ಲ ಅಂತ ನಡ್ಡಾ,ಅಮಿತ್ ಷಾ ಹೇಳಿದ ಮೇಲೆ ಆರು ತಿಂಗಳ ಕದನ ವಿರಾಮಕ್ಕೆ ವಿಜಯೇಂದ್ರ ವಿರೋಧಿ ಪಡೆ ಸಜ್ಜಾಗಿದೆ. ಆದರೆ, ಈ ಆರು ತಿಂಗಳ ಅವಧಿಯಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜಯೇಂದ್ರ ವಿರುದ್ದ ಅಸಹನೆಯ ಗಾಳಿ ಶುರುವಾಗಬೇಕು,ಪಕ್ಷದಲ್ಲಿರುವ ಹಿರಿಯರು,ಮಾಜಿ ಸಚಿವರು ಸೇರಿದಂತೆ ಯಾರನ್ನೂ ವಿಜಯೇಂದ್ರ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಕೂಗು ದಟ್ಟವಾದರೆ ವರಿಷ್ಟರು ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂಬುದು ವಿರೋಧಿ ಪಡೆಯ ಟಾಪ್ ಲೀಡರುಗಳ ಲೆಕ್ಕಾಚಾರ.
ಅಂದ ಹಾಗೆ ಇಂತಹ ಲೆಕ್ಕಾಚಾರ ಹಾಕಿರುವ ಪಡೆ ಅದೇ ಕಾಲಕ್ಕೆ ಮತ್ತೊಂದು ಕೆಲಸ ಮಾಡಿದೆ.ಅದೆಂದರೆ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರನ್ನು ತಮ್ಮ ಕಡೆ ಸೆಳೆದುಕೊಂಡಿರುವುದು.ಇದಕ್ಕಿರುವ ಮುಖ್ಯ ಕಾರಣ ಎಂದರೆ ನಿರಾಣಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಆಪ್ತರಾಗಿರುವುದು. 2021 ರಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವ ಮುನ್ನ ನಿರಾಣಿ ಅವರನ್ನು ಕರೆಸಿಕೊಂಡಿದ್ದ ಅಮಿತ್ ಷಾ ಅವರು:ನಿಮ್ಮನ್ನು ಸಿಎಂ ಹುದ್ದೆಯಲ್ಲಿ ಕೂರಿಸುತ್ತೇವೆ ಎಂದಿದ್ದರು.
ಆದರೆ ಹಲವು ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಸವರಾಜ ಬೊಮ್ಮಾಯಿ ಹೆಸರಿಗೆ ಗ್ರೀನ್ ಸಿಗ್ನಲ್ ನೀಡಿದ್ದರಿಂದ ನಿರಾಣಿ ನಿರಾಸೆ ಅನುಭವಿಸಬೇಕಾಯಿತು. ಹಾಗಂತ ಅಮಿತ್ ಷಾ ಅವರು ತಮಗೆ ಕೊಟ್ಟ ಮಾತು ಈಡೇರಿಲ್ಲ ಅಂತ ನಿರಾಣಿ ಅವರೇನೂ ಮುನಿಸಿಕೊಂಡಿಲ್ಲ.ಬದಲಿಗೆ ಅಮಿತ್ ಷಾ ಬಯಸಿದ್ದನ್ನು ಮಾಡುತ್ತಾ,ಈಗಲೂ ಅವರ ಅತ್ಯಾಪ್ತ ಬಳಗದಲ್ಲಿದ್ದಾರೆ. ಹೀಗಾಗಿ ಅವರ ಮೇಲೆ ಕಣ್ಣಿಟ್ಟಿರುವ ವಿಜಯೇಂದ್ರ ವಿರೋಧಿ ಪಡೆ,ಮೆಲ್ಲಗೆ ನಿರಾಣಿ ಅವರ ಕೈ ಹಿಡಿದು ತನ್ನ ಶಿಬಿರಕ್ಕೆ ಎಳೆದುಕೊಂಡಿದೆ.
ಅಲ್ಲಿಗೆ ಕರ್ನಾಟಕ ಬಿಜೆಪಿಯ ವಿಷಯದಲ್ಲಿ ವರಿಷ್ಟರು ಮೌನವಾಗಿರುವುದು ನಿಶ್ಚಿತವಾದರೂ ವಿಜಯೇಂದ್ರ ವಿರೋಧಿ ಪಡೆ ಹೊಸ ಲೆಕ್ಕಾಚಾರದೊಂದಿಗೆ ನಿರ್ಧರಿಸಿದೆ.ಒಟ್ಟಿನಲ್ಲಿ ಈಗಲ್ಲದಿದ್ದರೂ ಮುಂದಿನ ವಿಧಾನಸಭಾ ಚುನಾವಣೆಯ ಸಾರಥ್ಯ ವಿಜಯೇಂದ್ರ ಅವರ ಕೈಲಿರಬಾರದು ಎಂದು ಶಪಥ ಮಾಡಿದೆ.
ರಾಮಮೂರ್ತಿಗೆ ಕೋಪ ಬಂದಿದೆ (Honeytrap)
ಇನ್ನು ಜಯನಗರದ ಶಾಸಕ ಸಿ.ಕೆ.ರಾಮಮೂರ್ತಿ ಅವರಿಗೆ ಕೆಂಡದಂತ ಕೋಪ ಬಂದಿದೆಯಂತೆ.ಅವರ ಈ ಕೋಪಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕಾರಣ. ಅಂದ ಹಾಗೆ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರ ವಿರುದ್ದ ಅಂತಿಮ ಕ್ಷಣದಲ್ಲಿ ರಾಮಮೂರ್ತಿ ಅವರು ಗೆದ್ದಿದ್ದಾರೆ ಅಂತ ಘೋಷಿಸಲಾಯಿತಲ್ಲ?
ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿ ಇನ್ನೇನು ಅಂತಿಮ ತೀರ್ಪು ಬರುವ ಕಾಲ ಹತ್ತಿರವಾಗಿದೆ.ಹೀಗೆ ಬರುವ ತೀರ್ಪು ರಾಮಮೂರ್ತಿ ಅವರಿಗೆ ಮಾರಕವಾಗಲಿದ್ದು,ಇದರ ಪರಿಣಾಮವಾಗಿ ಜಯನಗರ ಕ್ಷೇತ್ರದ ಮುಂದಿನ ಚುನಾವಣೆಯಲ್ಲಿ ಸಂದೀಪ್ ರವಿ ಬಿಜೆಪಿ ಕ್ಯಾಂಡಿಡೇಟ್ ಆಗಲಿದ್ದಾರೆ ಎಂಬ ಸುದ್ದಿ ಸುನಾಮಿಯಂತೆ ಹಬ್ಬಿದೆ. ಅಂದ ಹಾಗೆ ಬಿಜೆಪಿಯ ರಾಜ್ಯ ಯುವ ಮೋರ್ಚಾದ ಮುಂಚೂಣಿಯಲ್ಲಿರುವ ಸಂದೀಪ್ ರವಿ ಅವರು ಸಂಸದ ತೇಜಸ್ವಿ ಸೂರ್ಯ ಅವರ ಆಪ್ತ. ಹೀಗೆ ತಮ್ಮ ಆಪ್ತರಾಗಿರುವ ಕಾರಣಕ್ಕಾಗಿಯೇ ತೇಜಸ್ವಿಸೂರ್ಯ ಅವರು ಸಂದೀಪ್ ರವಿ ಅವರ ಹೆಸರನ್ನು ಫೀಲ್ಡಿಗೆ ಬಿಟ್ಟಿದ್ದಾರೆ ಎಂಬುದು ಶಾಸಕ ಸಿ.ಕೆ.ರಾಮಮೂರ್ತಿ ಅವರ ಅನುಮಾನ. ಹಾಗಂತಲೇ ಅವರೀಗ ತೇಜಸ್ವಿ ಸೂರ್ಯ ಅವರ ಮೇಲೆ ಕೋಪ ಮಾಡಿಕೊಂಡಿದ್ದಾರೆ.ಅಷ್ಟೇ ಅಲ್ಲ,ತಮ್ಮ ಕೋಪವನ್ನು ತೇಜಸ್ವಿ ಸೂರ್ಯ ಅವರ ಎದುರು ತೋರಿಸಿ ಬಂದಿದ್ದಾರೆ ಎಂಬುದು ಲೇಟೆಸ್ಟು ಸುದ್ದಿ.
ಅರ್.ಟಿ.ವಿಠ್ಠಲಮೂರ್ತಿ