ದಾವಣಗೆರೆ : ಮಾನವ ಎಷ್ಟು ಸೂಕ್ಷ್ಮತೆಯೋ ಅದೇ ರೀತಿ ಪರಿಸರವೂ ಕೂಡ ಅಷ್ಟೇ ಸೂಕ್ಷ್ಮತೆಯನ್ನು ಹೊಂದಿದೆ. ಮಾನವನಿಗೆ ಉಸಿರಾಟ ತೊಂದರೆಯಾದಾಗ ಸಾವು ಸಂಭವಿಸುತ್ತದೆ. ಈಗಾಗಲೇ ಪ್ಲಾಸ್ಟಿಕ್ ಹೆಚ್ಚಳದ ಮೂಲಕ ಉಸಿರುಗಟ್ಟುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.
ನಗರದ ನಿಟುವಳ್ಳಿ ರಾಷ್ಟ್ರೋತ್ಥಾನ ಶಾಲಾ ಆವರಣದಲ್ಲಿ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವರ್ಗದವರಿಗೆ ಜಾಗೃತಿ ಮೂಡಿಸುವ ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆದರೆ ಅದನ್ನು ವೈಜ್ಞಾನಿಕ, ಸಮರ್ಪಕವಾದ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯುಂಟುಗುವುದಿಲ್ಲ. ಆದರೆ ಕೆಲವರು ಇದೆಲ್ಲ ಗೊತ್ತಿದ್ದು ಸಹ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಜಿಲ್ಲೆಯ ಹೃದಯ ಭಾಗದಲ್ಲಿಯೇ ಸುಮಾರು 1 ಲಕ್ಷ ಗಿಳಿ, 10 ರಿಂದ 15 ಸಾವಿರ ಬಾವಲಿಗಳು ಅವಸ್ಥಾನವಾಗಿವೆ. ಆದರೆ ಪರಿಸರ ಮಾಲಿನ್ಯ, ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಿಂದ ಅವುಗಳ ಸಂತತಿ ಕ್ಷೀಣಿಸುತ್ತಿದೆ. ದೇಶವು ನೈಸರ್ಗಿಕವಾಗಿ ಸಮೃದ್ಧವಾಗಿ ಇರಬೇಕಾದರೆ ಶೇಕಡಾ 33ರಷ್ಟು ಅರಣ್ಯ ಹೊಂದಿರಬೇಕು. ಪ್ರಸ್ತುತ ಅರಣ್ಯ ಪ್ರದೇಶ ಕಡಿಮೆ ಇದೆ. ಸಮುದ್ರದಲ್ಲಿ ಶೇಕಡಾ 70ರಷ್ಟು ಅರಣ್ಯ ಹೊಂದಿದ್ದು, ಹೆಚ್ಚು ಆಮ್ಲಜನಕ ಹೊರಸೂಸುತ್ತದೆ. ಪ್ಲಾಸ್ಟಿಕ್‌ನ್ನು ಎಲ್ಲೆಂದರಲ್ಲಿ ಬಳಸಿ ಬಿಸಾಡುವುದರಿಂದ ನದಿ ಮೂಲಗಳಿಂದ ಸಮುದ್ರ ಸೇರುತ್ತಿದೆ. ಇದರಿಂದ ಜಲ ಮೂಲ ಕಲುಷಿತಗೊಳ್ಳುವುದಲ್ಲದೇ ಜಲಚರ ಪ್ರಾಣಿಗಳ ಜೀವಕ್ಕೂ ಕುತ್ತು ತರುತ್ತಿದೆ ಎಂದರು.
Read also : ದ್ವಿಚಕ್ರ ವಾಹನ, ತ್ರಿ-ಚಕ್ರವಾಹನ ಮತ್ತು ಜೀವಂತ ಮೀನು ಮಾರಾಟ ಕೇಂದ್ರವನ್ನು ಸ್ಥಾಪಿಸಲು ಅರ್ಜಿ ಆಹ್ವಾನ
ಜಿಲ್ಲೆಯಲ್ಲಿ ಸುಮಾರು 6 ಲಕ್ಷ ಜನಸಂಖ್ಯೆ ಹೊಂದಿದ್ದು, ಸ್ವಚ್ಚತೆಗಾಗಿ ಕೇವಲ 300 ಜನ ಪೌರಕಾರ್ಮಿಕರಿದ್ದಾರೆ. ಅವರಿಂದ ನಗರವನ್ನು ಸ್ವಚ್ಚಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಬಳಸಿ ಬಿಸಾಡುವ ಎಲ್ಲಾ ರೀತಿಯ ಪ್ಲಾಸ್ಟಿಕ್ ಮತ್ತು ಇನ್ನಿತರೆ ತ್ಯಾಜ್ಯವನ್ನು ಹಸಿಕಸ ಮತ್ತು ಒಣಕಸ ರೀತಿಯಲ್ಲಿ ವೈಜ್ಞಾನಿಕವಾಗಿ ವಿಂಗಡಿಸಿ ಸ್ಥಳೀಯ ಸಂಸ್ಥೆಗಳಿಗೆ ಅಥವಾ ಶಾಲೆಗಳಿಗೆ ನೀಡಬೇಕೆಂದು ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿದರು.
ಪರಿಸರ ಉಳಿಯಬೇಕಾದರೆ, ಈ ರೀತಿಯ ಉತ್ತಮ ಅಂಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಖಂಡಿತಾ ಸಾಧ್ಯ. ಇದಕ್ಕೆ ತಮ್ಮ ಸಹಕಾರ ಅತ್ಯಗತ್ಯ ಎಂದರು.
ಈ ವೇಳೆ ಡಿಡಿಪಿಐ ಕೊಟ್ರೇಶ್, ಸಿಆರ್‌ಪಿ ತೀರ್ಥಾಚಾರ್ಯ, ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಯಣ್ಣ, ಪ್ರಾಂಶುಪಾಲರಾದ ಸುಗುಣ ಸೇರಿದಂತೆ ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
