ಇಂದಿನ ಎಲ್ಲಾ ಪತ್ರಿಕೆಯಲ್ಲಿ ಒಂದೇ ಸುದ್ದಿ ಹಿರಿಯ ಸಾಹಿತಿ ಹರಿಹರ ಪ್ರಿಯ ಇವರು ತಮಗೆ ದೊರೆತ ಸುಮಾರು 150ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬೆಂಕಿ ಹಾಕಿ ಸುಟ್ಟು ಬಿಟ್ಟ ಸುದ್ದಿ ಅಕ್ಷರ ಲೋಕದ ದೀನ ಪರಿಸ್ಥಿತಿಯ ಅನಾವರಣ. ಅರೆಗಳಿಗೆ ಮನಸ್ಸು ತಲ್ಲಣಗೊಂಡಿತು.
ಕನ್ನಡ ನುಡಿ ಸೇವೆಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟು 70 ಕ್ಕೂ ಹೆಚ್ಚು ಅತ್ಯಂತ ಶ್ರೇಷ್ಟ ಸಾಹಿತ್ಯದ ಪುಸ್ತಕಗಳನ್ನು ಬರೆದು ಸಾರಸ್ವತ ಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡ ಹಿರಿಯ ಜೀವಿ ಹರಿಹರ ಪ್ರಿಯ ಇವರು. ತಮ್ಮ ಬದುಕಿನುದ್ದಕ್ಕೂ ಸಾಹಿತ್ಯಮೊರೆಕ್ಕೆ ತಮ್ಮ ಒಪ್ಪಿಸಿಕೊಂಡು ಈ ವೃದ್ಯಾಪ್ಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ಸರ್ಕಾರಕ್ಕೆ ಮೊರೆಯಿಟ್ಟ ಅವರ ದೀನ ಧ್ವನಿ ಯಾರಿಗೂ ಕೇಳಿಸಲಿಲ್ಲ.
ಅವರು ಕೊಟ್ಟ ಮನವಿ ಪತ್ರಗಳು ಕಸದ ಪಾಲು. ಇದರಿಂದ ವಿಚಲಿತರಾದ ಇವರು ಅಕ್ರೋಶಗೊಂಡು ತಾವು ಸರ್ಕಾರದಿಂದ ಪಡೆದಿದ್ದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸುಮಾರು ೧೫೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬೆಂಕಿಗೆ ಹಾಕಿ ಸುಟ್ಟು ತಮ್ಮ ನೋವನ್ನು ತೊಡಿಕೊಂಡಿದ್ದಾರೆ.
ಇದೊಂದು ಉದಾಹರಣೆ ಮಾತ್ರ ಇಂತಹ ನೂರಾರು ಸಾಹಿತಿಗಳು ತಮ್ಮ ಜೀವನವನ್ನು ಬವಣೆಯಿಂದ ಸಾಗಿಸುತ್ತಿದ್ದಾರೆ. ಯಾರ ಬಳಿ ಹೇಳಿ ಕೊಂಡರೂ ಪರಿಹಾರ ಕಾಣದೇ ಸಂಕಷ್ಟದ ಜೀವನ ನಡೇಸುತ್ತಿದ್ದಾರೆ. ಇದಕ್ಕೆ ವರಕವಿ ಬೇಂದ್ರೆ, ಕಗ್ಗದ ಮಾಂತ್ರಿಕ ಡಿವಿಜಿಯವರು ಹೊರತಾಗಿಲ್ಲ, ಇವರ ಬದುಕು ಬವಣೆಯ ಸಂಗತಿ ಎಲ್ಲರಿಗೂ ತಿಳಿದಿರುವ ವಿಷಯವೇ. ಕವಿ ಸಾಹಿತಿಗಳು ಎಂದಿಗೂ ಐಶಾರಾಮಿ ಜೀವನ ಬಯಸಿದವರಲ್ಲ. ಜೀವನ ನಿರ್ವಹಣೆಗಾಗಿ ಅದರಲ್ಲೂ ಕನಿಷ್ಟ ಅರೋಗ್ಯ ಸೌಲಭ್ಯಗಾಗಿ ಅಂಗಲಾಚುತ್ತಿದ್ದಾರೆ.
ಸಮಾಜಕ್ಕೆ ಬೆಳಕು ನೀಡುವವರು ಸಾಹಿತಿಗಳು. ತಮ್ಮ ಲೇಖನಿಯ ಮೂಲಕ ಅದೆಷ್ಟೋ ಮಂದಿಯ ಬಾಳಿನಲ್ಲಿ ಹೊಸ ಆಶಯಗಳನ್ನು, ವಿಚಾರಗಳನ್ನು ತುಂಬುವ ಈ ಶಬ್ದಶಿಲ್ಪಿಗಳ ಬದುಕು ಹಲವು ಬಾರಿ ಕಷ್ಟ ಮತ್ತು ಬವಣೆಗಳ ಆಗರವಾಗಿರುತ್ತದೆ. ಸಾಹಿತ್ಯವನ್ನು ಜೀವವಾಗಿ ನಂಬಿ ಬದುಕುವ ಅನೇಕ ಕನ್ನಡ ಸಾಹಿತಿಗಳ ಬವಣೆ ಇಂದಿಗೂ ಒಂದು ಯಾತನಾಮಯ ಸತ್ಯ.
Read also : ದಾವಣಗೆರೆ:ಹೊಯ್ಸಳ ಮತ್ತು ಕಿತ್ತೂರು ರಾಣಿಚೆನ್ನಮ್ಮ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಕಷ್ಟಗಳ ಸರಮಾಲೆಸೃಜನಶೀಲತೆ ಮತ್ತು ಹೊಟ್ಟೆಪಾಡು ಇವುಗಳ ನಡುವೆ ನಡೆಯುವ ನಿರಂತರ ಹೋರಾಟವೇ ಬಡ ಸಾಹಿತಿಯ ಬದುಕು.ಆರ್ಥಿಕ ಸಂಕಷ್ಟ: ಸಾಹಿತ್ಯ ರಚನೆಯಿಂದ ಬರುವ ಸಂಭಾವನೆ ಬಹುತೇಕ ಲೇಖಕರಿಗೆ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ಪುಸ್ತಕ ಮಾರಾಟ ಕಡಿಮೆ ಇರುವುದು ಮತ್ತು ಪ್ರಕಾಶಕರಿಂದ ಸಕಾಲದಲ್ಲಿ ಹಣ ಬರದೇ ಇರುವುದು ಪ್ರಮುಖ ಸಮಸ್ಯೆ.
ಇತರ ಕೆಲಸಗಳ ಅನಿವಾರ್ಯತೆ: ಕೇವಲ ಸಾಹಿತ್ಯವನ್ನೇ ನಂಬಿ ಬದುಕಲು ಸಾಧ್ಯವಾಗದೇ, ಅನಿವಾರ್ಯವಾಗಿ ಬೇರೆ ಉದ್ಯೋಗಗಳನ್ನು ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಸೃಜನಶೀಲ ಕಾರ್ಯಕ್ಕೆ ಸಮಯ ಮತ್ತು ಶಕ್ತಿ ಕಡಿಮೆಯಾಗುತ್ತದೆ.
ಗುರುತಿಸುವಿಕೆಯ ಕೊರತೆ: ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದರೂ, ಅನೇಕ ಪ್ರತಿಭಾವಂತ ಬಡ ಸಾಹಿತಿಗಳು ಸರಿಯಾದ ಪ್ರೋತ್ಸಾಹ ಮತ್ತು ಗುರುತಿಸುವಿಕೆಯಿಂದ ವಂಚಿತರಾಗುತ್ತಾರೆ. ಪ್ರಚಾರದ ಬೆಳಕು ಶ್ರೀಮಂತ ಲೇಖಕರ ಮೇಲೆ ಮಾತ್ರ ಬೀಳುವುದು ಸಾಮಾನ್ಯ.
ವೈಯಕ್ತಿಕ ಜೀವನದ ಒತ್ತಡ: ಬಡತನದಿಂದಾಗಿ ತಮ್ಮ ಕುಟುಂಬದವರ ಮೂಲಭೂತ ಅವಶ್ಯಕತೆಗಳನ್ನೂ ಪೂರೈಸಲು ಆಗದೆ ಮಾನಸಿಕ ಮತ್ತು ಭಾವನಾತ್ಮಕ ಒತ್ತಡಕ್ಕೆ ಒಳಗಾಗುತ್ತಾರೆ. ಇದು ಅವರ ಬರವಣಿಗೆಯ ಮೇಲೆ ಪರಿಣಾಮ ಬೀರಬಹುದು. ಕೃತಿಗಳ ಪ್ರಕಟಣೆ ಮತ್ತು ವಿತರಣೆ: ಹೊಸ ಲೇಖಕರಿಗೆ ಅಥವಾ ಆರ್ಥಿಕವಾಗಿ ದುರ್ಬಲರಿರುವ ಸಾಹಿತಿಗಳಿಗೆ ತಮ್ಮ ಕೃತಿಗಳನ್ನು ಪ್ರಕಟಿಸುವುದು ಮತ್ತು ಜನರಿಗೆ ತಲುಪಿಸುವುದು ದೊಡ್ಡ ಸವಾಲಾಗಿದೆ.
ಸಮಾಜ ಮತ್ತು ಸರ್ಕಾರದ ಜವಾಬ್ದಾರಿ ಸಾಹಿತಿ ಹಾಗೂ ಕಲಾವಿದರಿಗೆ ಉಚಿತ ವೈದ್ಯಕೀಯ ಸೌಲಭ್ಯ ದೊರೆಯುವಂತೆ ಆರೋಗ್ಯ ಕಾರ್ಡ್ ಕೊಡುವುದು. ಸಾಹಿತಿಗಳು ಸಮಾಜದ ಆತ್ಮ. ಅವರ ಬವಣೆ ಕೇವಲ ವೈಯಕ್ತಿಕ ಸಮಸ್ಯೆ ಯಲ್ಲ, ಬದಲಿಗೆ ಸಮಾಜ ಮತ್ತು ಸಂಸ್ಕೃತಿಯ ಬಿಂಬವಾಗಿದೆ.
ಸರ್ಕಾರದ ನೆರವು: ಸಾಹಿತ್ಯ ಅಕಾಡೆಮಿಗಳು ಮತ್ತು ಸರ್ಕಾರಗಳು ಬಡ ಸಾಹಿತಿಗಳಿಗೆ ಮಾಸಿಕ ಪಿಂಚಣಿ ಅಥವಾ ಆರ್ಥಿಕ ಸಹಾಯವನ್ನೊರೆಯುವಂತೆ ಒದಗಿಸಬೇಕು.
ಆರೋಗ್ಯ ಮತ್ತು ವಸತಿ ಸೌಲಭ್ಯ: ನಿರ್ಗತಿಕ ಸಾಹಿತಿಗಳಿಗೆ ಉಚಿತ ಆರೋಗ್ಯ ವಿಮೆ ಮತ್ತು ವಸತಿ ಯೋಜನೆಗಳಲ್ಲಿ ಆದ್ಯತೆ ನೀಡುವುದು ಅಗತ್ಯ.
ಪುಸ್ತಕ ಖರೀದಿ ಯೋಜನೆ: ಸರ್ಕಾರವು ಸಾಹಿತಿಗಳ ಪುಸ್ತಕಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಗ್ರಂಥಾಲಯಗಳಿಗೆ ಹಂಚುವುದರಿಂದ ಅವರಿಗೆ ಆರ್ಥಿಕ ಬೆಂಬಲ ಸಿಗುತ್ತದೆ.
ಸಾರ್ವಜನಿಕ ಪ್ರೋತ್ಸಾಹ: ಜನರು ಪುಸ್ತಕಗಳನ್ನು ಕೊಂಡು ಓದುವ ಅಭ್ಯಾಸವನ್ನು ಹೆಚ್ಚಿಸಿದರೆ ಲೇಖಕರಿಗೆ ನೇರವಾಗಿ ನೆರವಾಗುತ್ತದೆ.
ಕೊನೆಯ ಮಾತು : ಕನ್ನಡ ಸಾಹಿತ್ಯ ಲೋಕದ ಬೆಳವಣಿಗೆಗೆ ಬಡ ಸಾಹಿತಿಗಳ ಕೊಡುಗೆ ಅಪಾರ. ಅವರ ಬದುಕಿನ ಕಷ್ಟಗಳು ಅಕ್ಷರ ಲೋಕದ ನೋವಿನ ಕಥೆ ಹೇಳುತ್ತವೆ. ಅವರು ನಿರ್ಭಯವಾಗಿ, ನಿರಾತಂಕವಾಗಿ ತಮ್ಮ ಸೃಜನಶೀಲತೆಯನ್ನು ಮುಂದುವರಿಸಲು, ಸಮಾಜ ಮತ್ತು ಸರ್ಕಾರ ಸೂಕ್ತ ನೆರವು ನೀಡಬೇಕು.
“ಸಾಹಿತ್ಯ ಉಳಿದರೆ, ಸಂಸ್ಕೃತಿ ಉಳಿಯುತ್ತದೆ” ಎಂಬ ಸತ್ಯವನ್ನು ಮನಗಂಡು, ಅಕ್ಷರಕ್ಕೆ ಶಕ್ತಿ ತುಂಬಿದ ಬಡ ಸಾಹಿತಿಗಳ ಬವಣೆಯನ್ನು ನೀಗಿಸುವ ತುರ್ತು ಅಗತ್ಯವಿದೆ.
ಲೇಖನ : ವಸುಪ್ರಿಯ
ಡಾ.ಡಿ.ಫ್ರಾನ್ಸಿಸ್ ಕ್ಸೇವಿಯರ್
ಹರಿಹರ
