ದಾವಣಗೆರೆ (Davanagere): ಮನೆ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿ 10.32 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ಪಟ್ಟಣದ ಸೆಂಟ್ರಿಂಗ್ ಕೆಲಸ ಮಾಡುವ ಮುಬಾರಕ್ (22), ಟೈಲ್ಸ್ ಕೆಲಸ ಮಾಡುವ ಸಾದತ್ ಆಲಿಯಾಸ್ ಸುಳ್ಳ ಸಾದತ್ (32) ಬಂಧಿತ ಆರೋಪಿಗಳು.
ಹದಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕುವಾಡ ಗ್ರಾಮದ ಬಿ.ಟಿ.ಮಧು(37) ಮನೆ ಕಳ್ಳತನ ಬಗ್ಗೆ ಠಾಣೆಯಲ್ಲಿ ಕಳೆದ ಫೆ.17ರಂದು ದೂರು ದಾಖಲಿಸಿದ್ದರು. ಆರೋಪಿಗಳ ಪತ್ತೆಗೆ ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ ಎಂ.ಸಂತೋಷ್, ಜಿ.ಮಂಜುನಾಥ, ಗ್ರಾಮಾಂತರ ಡಿಎಸ್ಪಿ, ಮಾಯಕೊಂಡ ವೃತ್ತ ಕಚೇರಿಯ ಸಿಪಿಐ ಡಿ.ನಾಗರಾಜ ಮಾರ್ಗದರ್ಶನದಲ್ಲಿ ಹದಡಿ ಠಾಣೆ ಪಿಎಸ್‌ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಅಪರಾಧ ವಿಭಾಗದ ಪಿಎಸ್‌ಐ ಶಕುಂತಲ ಹಾಗೂ ಸಿಬ್ಬಂದಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಹದಡಿ ಪೊಲೀಸ್ ಠಾಣೆಯ 2 ಪ್ರಕರಣಗಳು, ಬಸವಪಟ್ಟಣ ಪೊಲೀಸ್ ಠಾಣೆಯ 2 ಪ್ರಕರಣಗಳಲ್ಲಿ ಒಟ್ಟು 7.20 ಲಕ್ಷ ರೂ. ಮೌಲ್ಯದ 91.00 ಗ್ರಾಂ ತೂಕದ ಚಿನ್ನಾಭರಣ, 4000 ಬೆಲೆಯ 50 ಗ್ರಾಂ ತೂಕದ ಬೆಳ್ಳಿ ಆಭರಗಳು, 58 ಸಾವಿರ ನಗದು ಮತ್ತು ಚಿತ್ರದುರ್ಗ ಜಿಲ್ಲೆಯ ಕೋಟೆ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾದ 1.50 ಲಕ್ಷ ಮೌಲ್ಯದ ಬುಲೆಟ್ ಬೈಕ್, 1 ಲಕ್ಷ ಮೌಲ್ಯದ ಸ್ಕೂಟಿ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಹರಿಹರ ನಗರ ಠಾಣೆ, ರಾಣೆಬೆನ್ನೂರು ಠಾಣೆಯ ಪ್ರಕರಣಗಳು ಹಾಗೂ ದಾವಣಗೆರೆಯ ಕೆ.ಟಿ.ಜೆ ನಗರ, ಚಿತ್ರದುರ್ಗದ ಹೊಳಲ್ಕೆರೆ, ಭರಮಸಾಗರ, ಹಾವೇರಿಯ ಗುತ್ತಲ, ಬ್ಯಾಡಗಿ, ಹಾವೇರಿ ಶಹರ ಪೊಲೀಸ್ ಠಾಣೆ ಮತ್ತು ಶಿವಮೊಗ್ಗ ಜಿಲ್ಲೆಯ ಅನೇಕ ಪೊಲೀಸ್ ಠಾಣೆಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಆರೋಪಿಗಳು ಸುಮಾರು 5 ತಿಂಗಳ ಹಿಂದೆ ಹಾವೇರಿ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾಗಿದ್ದು, ಘನ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ಈಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Read also : ಮಕ್ಕಳ ಕಲ್ಯಾಣ ಸಮಿತಿಗೆ ನೇಮಕ, ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ