ದಾವಣಗೆರೆ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯೊಬ್ಬರನ್ನು ಪುಸಲಾಯಿಸಿ ಕೊರಳಲ್ಲಿದ್ದ ಚಿನ್ನದ ಸರವನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ಪಟ್ಟಣದ ಕಲ್ಲೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಮಠದ ಬೀದಿ ನಿವಾಸಿ ಅಂಬುಜಮ್ಮ (86) ಚಿನ್ನದ ಸರವನ್ನು ಕಳೆದುಕೊಂಡ ವೃದ್ದೆ.
ತಮ್ಮ ಮನೆಯಿಂದ ಪರಿಚಯಸ್ಥರ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಸ್ವಲ್ಪ ದೂರದಲ್ಲಿ ಬೈಕ್ ನಿಲ್ಲಿಸಿ ವೃದ್ಧೆ ಬಳಿಗೆ ಬಂದು ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಅಮ್ಮ ಈ ರೀತಿ ಚಿನ್ನದ ಸರವನ್ನು ಹಾಕಿಕೊಂಡು ಒಬ್ಬರೇ ಓಡಾಡಬಾರದು. ಕಳ್ಳರ ಕಾಟ ಇರುತ್ತದೆ. ಚಿನ್ನದ ಸರವನ್ನು ಕೊಡು ಪೇಪರ್‌ನಲ್ಲಿ ಸುತ್ತಿ ಕೊಡುತ್ತೇವೆ ಎಂದು ನಂಬಿಸಿದ್ದಾರೆ.
ನಂತರ ಅಂಬುಜಮ್ಮ ಕೊರಳಲ್ಲಿ ಇದ್ದ 36 ಗ್ರಾಂ ತೂಕದ ಚಿನ್ನದ ಸರವನ್ನು ಬಿಚ್ಚಿಕೊಟ್ಟಿದ್ದಾರೆ.
Read also : ಸಡಗರ,ಸಂಭ್ರಮದಿಂದ ಈದ್ ಮಿಲಾದ್ ಆಚರಣೆ
ವಂಚಕರು ಚಿನ್ನದ ಸರವನ್ನು ತೆಗೆದುಕೊಂಡು ತಮ್ಮ ಜೇಬಿನಲ್ಲಿದ್ದ ಇನ್ನೊಂದು ಪೇಪರ್ ಪ್ಯಾಕೆಟ್ ಅನ್ನು ನೀಡಿ ಮನೆಗೆ ಹೋಗಿ ಬಿಚ್ಚಿ ಎಂದು ನಂಬಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ಮನೆಗೆ ಬಂದು ಪೇಪರ್ ಪ್ಯಾಕೆಟ್ ತೆರೆದು ನೋಡಿದಾಗ, ಸಣ್ಣಪುಟ್ಟ ಕಲ್ಲುಗಳನ್ನು ಇಟ್ಟು ಕೊಟ್ಟಿರುವುದು ಗೊತ್ತಾಗಿದೆ. ಈ ಕುರಿತು ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.