ದಾವಣಗೆರೆ: ಮಾಯಕೊಂಡ ಕ್ಷೇತ್ರದಲ್ಲಿ ಯೂರಿಯಾ ಗೊಬ್ಬರ ಸಿಗದೆ ರೈತರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ ಸೋಮವಾರ ಕೃಷಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಜಂಟಿ ಕೃಷಿ ನಿರ್ದೇಶಕ ಮತ್ತು ಕೃಷಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಸ್ತುತ ರೈತರಿಗೆ ಯೂರಿಯಾ ಗೊಬ್ಬರದ ಅಭಾವ ಎದುರಾಗಿದ್ದು ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ. ಆದ ಕಾರಣ ಅಧಿಕಾರಿಗಳು ರೈತರಿಗೆ ಬೇಕಾಗುವಷ್ಟು ಗೊಬ್ಬರವನ್ನು ದಾಸ್ತಾನು ಮಾಡಿಕೊಂಡು ರೈತರ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಬೇಕೆಂದು ಸೂಚನೆ ನೀಡಿದರು.
ಕಳೆದ ವರ್ಷ ರೈತರಿಗೆ ಬೇಕಾಗುವಷ್ಟು ಗೊಬ್ಬರಕ್ಕಿಂತ ಅಧಿಕವಾಗಿ ಯೂರಿಯಾ ಗೊಬ್ಬರ ದಾಸ್ತಾನು ಮಾಡಲಾಗಿತ್ತು. ಆಗಾಗಿ ಕಳೆದ ವರ್ಷ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗಲಿಲ್ಲ. ಆದರೆ ಈ ಬಾರಿ ರೈತರಿಗೆ ಬೇಕಾದಷ್ಟು ಯೂರಿಯಾ ಹಾಗೂ ಅಗತ್ಯಕ್ಕಿಂತ ಹೆಚ್ಚು ಯೂರಿಯಾ ಗೊಬ್ಬರ ದಾಸ್ತಾನು ಮಾಡದ ಪರಿಣಾಮ ಯೂರಿಯಾ ಕೊರತೆ ಉಂಟಾಗಿದೆ. ಈಗ ರೈತರಿಗೆ ತುರ್ತು ಗೊಬ್ಬರ ಬೇಕಾಗಿದೆ. ಕೂಡಲೇ ಅವರಿಗೆ ಯೂರಿಯಾ ಗೊಬ್ಬರ ಪೂರೈಸಿ ರೈತರಿಗೆ ನೆರವಾಗಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ, ಕೃಷಿ ನಿರ್ದೇಶಕರಾದ ಅಶೋಕ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಎಸ್ ಕೆ ಚಂದ್ರಣ್ಣ, ಮುಖಂಡರಾದ ಶಿವಮೂರ್ತಿ, ಸಂತೋಷ್, ಮೇಘರಾಜ್, ಕಂಪಳೇಶ್, ರೈತ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.